More

    ಹೊಸಕೋಟೆಯಲ್ಲಿ ಕೈ, ಕಮಲ ಜಟಾಪಟಿ

    *ಎರಡು ಮತಗಟ್ಟೆಗಳಲ್ಲಿ ಗಲಾಟೆ
    *ಬೆಂಡಿಗಾನಹಳ್ಳಿಯಲ್ಲಿ ಮರುಚುನಾವಣೆಗೆ ಒತ್ತಾಯ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಜಿಲ್ಲೆಯ ಮೂರು ತಾಲೂಕುಗಳಲ್ಲಿ ಲೋಕಸಭಾ ಚುನಾವಣೆ ಸೂಸೂತ್ರವಾಗಿ ನಡೆದಿದ್ದರೂ ಹೊಸಕೋಟೆಯ ಎರಡು ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
    ದಶಕಗಳಿಂದಲೂ ಜಿದ್ದಾಜಿದ್ದಿನ ರಾಜಕೀಯ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಹೊಸಕೋಟೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಶಿವನಾಪುರ ಪಂಚಾಯಿತಿ ವ್ಯಾಪ್ತಿಯ ಮಲಪ್ಪನಹಳ್ಳಿಯ ಮತಗಟ್ಟೆಯಲ್ಲಿ ಎರಡೂ ಪಕ್ಷದವರ ನಡುವಿನ ಗಲಾಟೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಬೆಂಡಿಗಾನಹಳ್ಳಿಯ ಮತಗಟ್ಟೆಯಲ್ಲಿ ನಡೆದ ಗಲಾಟೆಯಲ್ಲಿ ಬಿಜೆಪಿ ಮುಖಂಡ, ವೀರಶೈವ ಅರ್ಚಕರು, ಪುರೋಹಿತರ ಸಂಘದ ಅಧ್ಯಕ್ಷ ಗಣೇಶ್ ಪೊಲೀಸ್ ಬಂದೋಬಸ್ತ್ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಇವೆರಡೂ ಗಲಾಟೆಗಳು ಬೂದಿಮುಚ್ಚಿದ ಕೆಂಡದಂತಿವೆ.
    ನಕಲಿ ಮತದಾನ ಕಾರಣ: ಮಲಪ್ಪನಹಳ್ಳಿ ಮತಗಟ್ಟೆ ಕೇಂದ್ರದ ಬಳಿ ನಡೆದ ಗಲಾಟೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಮುನಿರತ್ನ ಹಾಗೂ ಮುಖಂಡ ಮುರಳಿ ಮೇಲೆ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ನಂದಗುಡಿ ಠಾಣೆಗೆ ದೂರು ನೀಡಲಾಗಿದೆ. ಮತಗಟ್ಟೆ ಕೇಂದ್ರದ ಬಳಿ ಮತದಾನ ಮಾಡಿದ ವ್ಯಕ್ತಿಯೊಬ್ಬ ಮತ್ತೊಂದು ಬಾರಿ ಮತದಾನಕ್ಕೆ ಬಂದಿದ್ದಾನೆ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
    ಇದೇ ರೀತಿ ಬೆಂಡಿಗಾನಹಳ್ಳಿ ಮತಗಟ್ಟೆಯಲ್ಲಿ ಕಾಂಗ್ರೆಸ್ ಬೆಂಬಲಿತರು ನಕಲಿ ಮತದಾನಕ್ಕೆ ಪ್ರಯತ್ನಿಸಿದರು ಎನ್ನಲಾಗಿದ್ದು, ಈ ವೇಳೆ ಬಿಜೆಪಿಯ ಬೂತ್ ಏಜೆಂಟ್ ಆಗಿದ್ದ ಗಣೇಶ್ ಅವರು ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಮರುಚುನಾವಣೆ ಆಗಬೇಕು ಬೆಂಡಿಗಾನಹಳ್ಳಿ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಆಗಿದ್ದ ನನ್ನ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಚುನಾವಣಾ ಅಧಿಕಾರಿಗಳನ್ನು ಹೆದುರಿಸಿ ಶಾಸಕರ ಬೆಂಬಲಿಗರು ನಕಲಿ ಮತದಾನ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಡಿಗಾನಹಳ್ಳಿಯಲ್ಲಿ ಮರುಮತದಾನ ನಡೆಸಬೇಕು. ಮತಗಟ್ಟೆಗಳಲ್ಲಿನ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದರೆ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಹಾಗೂ ಗೃಹ ಇಲಾಖೆಗೆ ದೂರು ನೀಡುತ್ತಿದ್ದೇನೆ ಎಂದು ವೀರಶೈವ ಅರ್ಚಕರು, ಪುರೋಹಿತರ ಸಂಘದ ಅಧ್ಯಕ್ಷ ಗಣೇಶ್ ತಿಳಿಸಿದರು.
    ಹೊಸಕೋಟೆಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರು, ಹಿರಿಯ ನಾಗರಿಕರ ಹೆಸರಿನಲ್ಲಿ ಇನ್ನಿತರರು ಬಂದು ಮತದಾನ ಮಾಡುತ್ತಿದ್ದರು, ಇನ್ನೂ 18 ತುಂಬದ ಬಾಲಕರನ್ನು ಕರೆತಂದು ಬೇರೆಯವರ ಹೆಸರಿನಲ್ಲಿ ಮತದಾನ ಮಾಡಿಸಿದ್ದಾರೆ. ಇದು ಅಕ್ರಮವಾಗಿದ್ದು, ಇದರ ತನಿಖೆ ನಡೆಸಿ ಮರುಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಬೆಂಡಿಗಾನಹಳ್ಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅಲ್ಲಿನ ಮತದಾರರು ಸ್ವತಂತ್ರ್ಯವಾಗಿ ಮತದಾನ ಮಾಡುವ ಹಕ್ಕನ್ನು ಇಂದಿಗೂ ಪಡೆದಿಲ್ಲ ಎಂದರು.
    ಈ ಮೊದಲು ಇಡೀ ಹೊಸಕೋಟೆಯಲ್ಲಿ ಇಂಥ ಪರಿಸ್ಥಿತಿ ಇತ್ತು. ಮಾಜಿ ಸಚಿವ ಎಂಟಿಬಿ ನಾಗರಾಜ್ ಕ್ಷೇತ್ರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಯಿತು. ಆದರೆ ಇಂದಿಗೂ ಬೆಂಡಿಗಾನಹಳ್ಳಿಯಲ್ಲಿ ಪರಿಸ್ಥಿತಿ ಹೀಗೆ ಇದೆ. ಶಾಸಕರ ಬೆಂಬಲಿಗರ ದಬ್ಬಾಳಿಕೆ ಮುಂದುವರಿದಿದೆ. ಎಷ್ಟೋ ಕುಟುಂಬಗಳು ಊರು ತೊರೆದಿವೆ ಎಂದು ಅಳಲು ತೋಡಿಕೊಂಡರು.

    ಪೊಲೀಸ್ ಭದ್ರತೆಯಿಂದ ಪಾರು ಬೆಳಗ್ಗೆಯಿಂದ ಸಂಜೆವರೆಗೆ ನನಗೆ ಸಾಕಷ್ಟು ಕಿರುಕುಳ ನೀಡಿದರು, ಸಂಜೆ 7 ಗಂಟೆ ಬಳಿಕ ಸುಮಾರು 40 ಮಂದಿ ಗುಂಪುಗೂಡಿ ಹಲ್ಲೆಗೆ ಪ್ರಯತ್ನಿಸಿದರು. ನನ್ನ ಕಾರಿನ ಗಾಜು ಪುಡಿ ಮಾಡಿ, ಮೊಬೈಲ್ ಕಸಿದುಕೊಂಡರು. ಈ ವೇಳೆ ನಮ್ಮ ಕಡೆಯವರು ಎಂಟಿಬಿ ಅವರಿಗೆ ಮಾಹಿತಿ ನೀಡಿದ್ದರಿಂದ ತಕ್ಷಣ ಎಂಟಿಬಿ ನಾಗರಾಜ್ ಅವರು ಎಸ್‌ಪಿಗೆ ಮಾಹಿತಿ ನೀಡಿದ್ದರು. ಕೆಎಸ್‌ಆರ್‌ಪಿ ಪೊಲೀಸರು ಬಿಗಿ ಭದ್ರತೆಯಲ್ಲಿ ನನ್ನನ್ನು ಕರೆದೊಯ್ದು ಚಿಕ್ಕಬಳ್ಳಾಪುರಕ್ಕೆ ತಲುಪಿಸಿದರು. ಇಲ್ಲವಾಗಿದ್ದರೆ ನನ್ನ ಪ್ರಾಣಕ್ಕೆ ಸಂಚಾರವಾಗುತ್ತಿತ್ತು ಎಂದು ಗಣೇಶ್ ಹೇಳಿದರು.


    ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಹೆಚ್ಚುತ್ತಿವೆ. ಅನ್ಯಾಯ ಪ್ರಶ್ನಿಸಿದರೆ ಹಲ್ಲೆ ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಚುನಾವಣೆ ವೇಳೆಗಷ್ಟೇ ರಾಜಕೀಯ ಸೀಮಿತವಾಗಿರಬೇಕು. ರಾಜಕೀಯ ದ್ವೇಷ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ.
    ಎಂಟಿಬಿ ನಾಗರಾಜ್, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts