More

    ಸೋರುತ್ತಿದೆ ನೀಲಾವರ ಕಿಂಡಿ ಅಣೆಕಟ್ಟು, ಮಹತ್ತರ ಯೋಜನೆಯಿಂದ ರೈತರಿಗಿಲ್ಲ ಉಪಕಾರ

    ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ಕೋಟ್ಯಂತರ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸೀತಾ ನದಿಗೆ ನಿರ್ಮಿಸಲಾದ ನೀಲಾವರ ಕಿಂಡಿ ಅಣೆಕಟ್ಟು ನಿರ್ವಹಣೆ ಇಲ್ಲದೆ ನೀರು ಸೋರುತ್ತಿದ್ದು, ರೈತರಿಗೆ ಮಾಡಲಾಗಿರುವ ಮಹತ್ತರ ಯೋಜನೆ ಪ್ರಯೋಜನಕ್ಕೆ ಸಿಗದಂತಾಗಿದೆ.

    ಹನೆಹಳ್ಳಿ, ಬಂಡೀಮಠ, ನೀಲಾವರ, ಬಾರಕೂರು, ಎಳ್ಳಂಪಳ್ಳಿ, ಕೊಕ್ಕರ್ಣೆ ತನಕದ ಕೃಷಿ ಭೂಮಿ ಹಾಗೂ ಈ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ 600 ಮೀಟರ್ ಉದ್ದದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ಅಣೆಕಟ್ಟೆಯ 52 ಕಿಂಡಿಗಳನ್ನು 2 ಭಾಗದಲ್ಲಿ 9 ಇಂಚು ಅಗಲದ ಮರದ ಹಲಗೆ ಹಾಕಿ ನಡುವೆ ಮಣ್ಣು ತುಂಬಿಸಿ ನೀರು ಸಂಗ್ರಹಿಸಲಾಗುತ್ತದೆ. ಮೇ ಅಂತ್ಯಕ್ಕೆ ಹಲಗೆ ತೆಗೆಯುವ ಪ್ರಕ್ರಿಯೆ ನಡೆಯುತ್ತದೆ.
    25 ವರ್ಷಗಳ ಹಿಂದೆ ಮಾಡಲಾದ ಹಳೇ ತಂತ್ರಜ್ಞಾನವೇ ಈಗಲೂ ಮುಂದುವರಿದಿದೆ. ಕೊಚ್ಚಿ ಹೋದ ನದಿ ದಂಡೆ ವ್ಯಾಪ್ತಿಯಲ್ಲಿ ಮರದ ಹಲಗೆ ಬದಲಿಗೆ ಫೈಬರ್ ಡೋರ್ ಅಳವಡಿಸಿ ಶಾಶ್ವತ ತಡೆಗೋಡೆ ನಿರ್ಮಿಸಿದಲ್ಲಿ ಮಳೆಗಾಲದಲ್ಲಿ ನೂರಾರು ಎಕರೆ ಕೃಷಿ ಭೂಮಿ ಕೊಚ್ಚಿ ಹೋಗುವುದನ್ನು ತಡೆಯಬಹುದು. ಇನ್ನಷ್ಟು ಅಗಲವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಕೃಷಿ ಭೂಮಿಗೆ ಟ್ರಾೃಕ್ಟರ್, ಉಳುಮೆ ಯಂತ್ರ, ಕಟಾವು ಯಂತ್ರದ ಜತೆ ಕಾರು, ಟೆಂಪೋಗಳನ್ನು ಕೊಂಡೊಯ್ಯಲೂ ಸಾಧ್ಯವಾಗಬಹುದು.

    ನದಿಯ ದಕ್ಷಿಣ ಭಾಗ ಉಡುಪಿ ವಿಧಾನಸಭಾ ಕ್ಷೇತ್ರ, ಉತ್ತರ ಭಾಗ ಕುಂದಾಪುರ ಕ್ಷೇತ್ರವಾಗಿದ್ದು ಜನನಾಯಕರು ನೂರಾರು ಎಕರೆ ಕೃಷಿ ಭೂಮಿಗೆ ಮತ್ತು ಸಹಸ್ರಾರು ರೈತರಿಗೆ ನೆರವಾಗುವ ಅಂತರ್ಜಲ ಹೆಚ್ಚಿಸುವ, ಸಿಹಿನೀರು ಹಿಡಿದಿಡುವ ಯೋಜನೆಗೂ ಒತ್ತು ನೀಡಬೇಕು ಎನ್ನುತ್ತಾರೆ ಸ್ಥಳೀಯರು.

    ಸಂಪರ್ಕ ಇಲ್ಲದೆ ರೈತ ಕಂಗಾಲು
    ಪ್ರತಿವರ್ಷ ಮರದ ಹಲಗೆ ಡ್ಯಾಮೇಜ್ ಆಗುವುದು ಸಾಮಾನ್ಯ. ಇದರಿಂದ ಪೂರ್ವ ಭಾಗದಲ್ಲಿ ಸಂಗ್ರಹಗೊಂಡ ಸಿಹಿ ನೀರು ಸೋರಿಕೆಯಾಗುವುದು ಮತ್ತು ಕೆಳಭಾಗದ ನೀರು ಮೇಲ್ಭಾಗಕ್ಕೆ ಬಂದು ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವುದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಮಳೆಗಾಲದಲ್ಲಿ ಬರುವ ಪ್ರವಾಹಕ್ಕೆ ನದಿ ದಂಡೆಗಳು ಕೊಚ್ಚಿ ಹೋಗಿ ನೀರು ಪಾಲಾಗುತ್ತಿವೆ. ಕಿಂಡಿ ಅಣೆಕಟ್ಟಿನಿಂದ ನೀಲಾವರ ಮತ್ತು ಹನೆಹಳ್ಳಿಗೆ ಜನ ಸಂಚಾರಕ್ಕೆಂದು ಮಾಡಲಾದ ಸಂಪರ್ಕ ಕೊಂಡಿಯೂ ಕಳಚಿ ನಡೆದಾಡಲೂ ಸಾಧ್ಯವಾಗದಂತಾಗಿದೆ.

    ಕಿಂಡಿ ಅಣೆಕಟ್ಟೆಗೆ ಮರದ ಹಲಗೆ ಬದಲಿಗೆ ಫೈಬರ್ ಡೋರ್ ವ್ಯವಸ್ಥೆ ಮಾಡಿ ನೀರು ಸೋರುವಿಕೆ ತಡೆಗಟ್ಟಿದಲ್ಲಿ ಕಟ್ಟೆಯಲ್ಲಿ ಸಾಕಷ್ಟು ನೀರು ಸಂಗ್ರಹಗೊಳ್ಳಬಹುದು. ಜತೆಗೆ ಕೃಷಿ ಭೂಮಿಗೂ ಅದನ್ನು ಬಳಸಿಕೊಳ್ಳಬಹುದು.
    ಬಾವ್ತೀಸ್ ಡಿಸೋಜ, ಕೃಷಿಕರು, ನೀಲಾವರ ಬಾವಲಿಕುದ್ರು

    ನೀಲಾವರ ಕಿಂಡಿ ಅಣೆಕಟ್ಟು ಮರದ ಹಲಗೆ ತೆಗೆದು ಫೈಬರ್ ಡೋರ್ ಮತ್ತು ನದಿ ದಂಡೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಈ ವರ್ಷ ನೀರು ಕಡಿಮೆ ಆದ ಬಳಿಕ ಕಾಮಗಾರಿ ಕೈಗೊಳ್ಳಲಿದ್ದೇವೆ.
    ಶೇಷ ಶಯನ, ಸಹಾಯಕ ಕಾರ್ಯಪಾಲ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts