More

    ‘ವೇದ’ ಚಿತ್ರ ವಿಮರ್ಶೆ: ದೌರ್ಜನ್ಯದ ವಿರುದ್ಧ ಅಪ್ಪ-ಮಗಳ ಹೋರಾಟ

    ಚಿತ್ರ: ವೇದ
    ನಿರ್ಮಾಣ: ಗೀತಾ ಶಿವರಾಜಕುಮಾರ್​
    ನಿರ್ದೇಶನ: ಎ. ಹರ್ಷ
    ತಾರಾಗಣ: ಶಿವರಾಜಕುಮಾರ್​, ಗಾನವಿ ಲಕ್ಷ್ಮಣ್​, ಅದಿತಿ ಸಾಗರ್​, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಚೆಲುವರಾಜು, ವಿನಯ್​ ಬಿದ್ದಪ್ಪ ಮುಂತಾದವರು

    – ಚೇತನ್​ ನಾಡಿಗೇರ್​

    ಇದು ಆತ್ಮದ ಕಥೆಯಾ? ಮಾಟ-ಮಂತ್ರದ ಚಿತ್ರವಿರಬಹುದಾ? ಅಥವಾ ಶಿವರಾಜಕುಮಾರ್​ ಮತ್ತು ಹರ್ಷ ಅವರ ಹಿಂದಿನ ಚಿತ್ರಗಳಂತೆ ಇದು ಸಹ ಫ್ಯಾಂಟಸಿ ಚಿತ್ರವಿರಬಹುದಾ ಎಂಬ ಪ್ರಶ್ನೆ, ‘ವೇದ’ ಟೀಸರ್​ ನೋಡಿದಾಗ ಹಲವರಿಗೆ ಅನಿಸಿತ್ತು. ‘ವೇದ’ ಸಹ ಅದೇ ತರಹ ಇನ್ನೊಂದು ಚಿತ್ರ ಅಥವಾ ಮುಂದುವರೆದ ಭಾಗ ಎಂದುಕೊಂಡರೆ ಅದು ತಪ್ಪು.

    ‘ವೇದ’ ಒಬ್ಬ ಸಾಮಾನ್ಯ ಮನುಷ್ಯನ ಕಥೆ. ಅವನ ಜೀವನದ ಒಂದು ರಕ್ತಸಿಕ್ತ ಅಧ್ಯಾಯವನ್ನು ಹಿಡಿದಿಡುವ ಒಂದು ಕಥೆ. ಒಂದು ಘಟನೆಯಿಂದ ಇಡೀ ಒಂದು ಕುಟುಂಬ ಹೇಗೆ ತತ್ತರಿಸುತ್ತದೆ ಮತ್ತು ಆ ಮನೆಯ ಯಜಮಾನ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದು ‘ವೇದ’ ಚಿತ್ರದ ಕಥೆ.

    ಇದನ್ನೂ ಓದಿ: ಸುದೀಪ್​ ಅಭಿನಯಿಸುತ್ತಿರುವ ಮುಂದಿನ ಚಿತ್ರ ಯಾವುದು ಗೊತ್ತಾ? ಇಲ್ಲಿದೆ ಡೀಟೇಲ್ಸ್​ …

    ‘ವೇದ’ ಚಿತ್ರ ಪ್ರಾರಂಭವಾಗುವುದು ಕನಕ (ಅದಿತಿ ಸಾಗರ್​) ಎಂಬ ಬಾಲಕಿಯೊಬ್ಬಳು ಜೈಲಿನಿಂದ ಬಿಡುಗಡೆಯಾಗುವ ಮೂಲಕ. ಆಕೆಯನ್ನು ಕರೆದುಕೊಂಡು ಹೋಗುವುದಕ್ಕೆ ಆಕೆಯ ಅಪ್ಪ ವೇದ (ಶಿವರಾಜಕುಮಾರ್​) ಬಂದಿರುತ್ತಾನೆ. ಆಕೆ ಜೈಲಿಗೆ ಹೋಗಿದ್ದು ಯಾಕೆ? ಅವರಿಬ್ಬರ ಮುಂದಿನ ನಡೆ ಮತ್ತು ಗುರಿ ಏನು? ಈ ಪ್ರಶ್ನೆಗಳಿಗೆ ತಕ್ಷಣ ಉತ್ತರ ಸಿಗುವುದಿಲ್ಲ. ಇಬ್ಬರೂ ಯಾರ್ಯಾರನ್ನೋ ಹುಡುಕಿಕೊಂಡು, ಬೇರೆಬೇರೆ ಸ್ಥಳಗಳಿಗೆ ಹೋಗಿ ಬರ್ಬರ ಹತ್ಯೆ ಮಾಡಿ ಬರುತ್ತಿರುತ್ತಾರೆ. ಅವರು ಯಾರು ಮತ್ತು ಅವರು ಯಾಕೆ ಆ ರೀತಿ ಮಾಡುತ್ತಿರುತ್ತಾರೆ ಎಂಬುದೇ ಚಿತ್ರದ ಸಾರಾಂದ.

    ನಾನ್​-ಲೀನಿಯರ್​ ಫಾರ್ಮಾಟ್​ನಲ್ಲಿ ಮಾಡಿರುವ ಚಿತ್ರ ಇದು. ಕಥೆ ಮೂರು ಕಾಲಘಟ್ಟದಲ್ಲಿ ಸಾಗುತ್ತದೆ. ಚಿತ್ರ ಪ್ರಾರಂಭವಾಗುವುದು 2000 ದಶಕದ ನಂತರ. ಆಮೇಲೆ ಫ್ಲಾಶ್​ಬ್ಯಾಕ್​ನಲ್ಲಿ ವೇದನ ಜೀವನದಲ್ಲಿ ನಡೆಯುವ ಘಟನೆಗಳತ್ತ ವಾಲುತ್ತವೆ. ಕೆಲವು ಘಟನೆಗಳು 60ರ ದಶಕದ್ದಾದರೆ, ಇನ್ನೂ ಕೆಲವು ಘಟನೆಗಳು 80ರ ದಶಕದ್ದು. ಸರಳವಾಗಿ ಹೇಳಬೇಕೆಂದರೆ, ಇದೊಂದು ಪ್ರತೀಕಾರದ ಕಥೆ. 60ರ ದಶಕದಲ್ಲಿ ನಡೆದ ಒಂದು ಘಟನೆಗೆ 80ರ ದಶಕದಲ್ಲಿ ಪ್ರತೀಕಾರ ಪಡೆಯುವ ಪ್ರಯತ್ನಗಳಾಗುತ್ತವೆ. ಹಾಗೆ ನೋಡಿದರೆ, ಕಥೆ ಊಹಿಸುವುದು ಅಷ್ಟು ಕಷ್ಟವೇನಲ್ಲ. ಆದರೆ, ಪ್ರೇಕ್ಷಕರನ್ನು ಹಿಡಿದಿಡುವ ನಿಟ್ಟಿನಲ್ಲಿ ಚಿತ್ರವನ್ನು ಎಳೆದಾಡುವುದರಿಂದ, ಕಥೆ ದ್ವಿತೀಯಾರ್ಧದಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಅಲ್ಲಿಯವರೆಗೂ ಸ್ವಲ್ಪ ತಾಳ್ಮೆಯಿಂದ ಇರಬೇಕು. ಸ್ವಲ್ಪ ತಾಳ್ಮೆಗೆಟ್ಟರೂ ಅದು ಪ್ರೇಕ್ಷಕರ ಮೇಲೆ ಬೇರೆ ರೀತಿಯ ಪರಿಣಾಮವನ್ನು ಬೀರಬಹುದು.

    ಇದನ್ನೂ ಓದಿ: ವೇದ ಚಿತ್ರದ ರೆಬೆಲ್ ಲೇಡೀಸ್!

    ಚಿತ್ರದ ಟ್ರೈಲರ್​ ನೋಡಿದರೆ, ಇದರಲ್ಲಿ ಎಷ್ಟು ರಕ್ತಪಾತವಿರಬಹುದು ಎಂಬ ಅಂದಾಜು ಸಿಗಬಹುದು. ಗಂಡಸರು, ಹೆಂಗಸರು, ಮಕ್ಕಳೆನ್ನದೆ ಎಲ್ಲರೂ ಮಚ್ಚು ಬೀಸುವದನ್ನು ಅಲ್ಲಿ ನೋಡಬಹುದು. ಅದೊಂದು ಸ್ಯಾಂಪಲ್​ ಅಷ್ಟೇ. ಅದು ಎಷ್ಟೇ ಆದರೂ ಟ್ರೈಲರ್​. ಚಿತ್ರದಲ್ಲಿ ಎಷ್ಟು ರಕ್ತಪಾತವಿದೆ ಮತ್ತು ಹೆಣಗಳು ಉರುಳುತ್ತವೆ ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಚಿತ್ರ ನೋಡಿದರೂ ಲೆಕ್ಕ ತಪ್ಪುವ ಸಾಧ್ಯತೆ ಇದೆ. ಏಕೆಂದರೆ, ಅಷ್ಟೊಂದು ಕೊಲೆಗಳು ಮತ್ತು ರಕ್ತಪಾತ ಈ ಚಿತ್ರದಲ್ಲಿದೆ.

    ಈ ಹಿಂಸೆ ಮತ್ತು ರಕ್ತಪಾತವನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ಇದ್ದರೆ, ಚಿತ್ರ ಇಷ್ಟವಾಗುತ್ತದೆ. ಇಲ್ಲಿ ತಂದೆ-ಮಗಳ ಎಮೋಷನಲ್​ ಕಥೆ ಇದೆ. ನಾಯಕನ ಸುತ್ತ ಕಥೆ ಸುತ್ತಿದರೂ, ಇಲ್ಲಿ ಹೆಣ್ಮಕ್ಕಳಿಗೂ ಸಮನಾದ ಅವಕಾಶವಿದೆ. ಮೂಲ ಕಥೆ ಇರುವುದು ಮಹಿಳಾ ದೌರ್ಜನ್ಯದ ಕುರಿತಾದ್ದರಿಂದ, ಮಹಿಳಾ ಪಾತ್ರಗಳಿಗೆ ಪ್ರಾಧನ್ಯತೆ ಕೊಡುವುದರ ಜತೆಗೆ, ಮಹಿಳಾ ಪಾತ್ರಗಳೇ ಆ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವ ಮೂಲಕ ಕಥೆಗೆ ನ್ಯಾಯ ಸಲ್ಲಿಸಿದ್ದಾರೆ ನಿರ್ದೇಶಕ ಹರ್ಷ. ಅವರ ಸಂದೇಶ ಮತ್ತು ಉದ್ದೇಶ ಅರ್ಥಪೂರ್ಣವಾಗಿದೆ. ಆದರೆ, ಅದನ್ನು ಹೇಳುವುದಕ್ಕೆ ಆಯ್ಕೆ ಮಾಡಿಕೊಂಡ ಮಾರ್ಗ ಮಾತ್ರ ಅತ್ಯಂತ ಘೋರ.

    ಇದನ್ನೂ ಓದಿ: ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ನಿಜ ಏನು?

    ಶಿವರಾಜಕುಮಾರ್​ ಒಂದು ಕಡೆ ಲವಲವಿಕೆಯಿಂದ ಡ್ಯಾನ್ಸು ಮತ್ತು ಫೈಟು ಮಾಡುತ್ತಲೇ ಇನ್ನೊಂದು ಕಡೆ ಗಂಭೀರವಾಗಿದ್ದಾರೆ. ಅವರ ಕಣ್ಣೋಟ, ಮೌನ ಎರಡೂ ಪ್ರೇಕ್ಷಕರನ್ನು ಇರಿಯುತ್ತದೆ. ಮೌನದಲ್ಲೇ ನೂರು ಮಾತನಾಡುವ ಅವರ ಅಭಿನಯ ಚಿತ್ರದ ಪ್ಲಸ್​ಪಾಯಿಂಟ್​. ಅವರಿಗೆ ಸರಿಸಮನಾಗಿ ಅದಿತಿ ನಟಿಸಿದ್ದು, ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಗಾನವಿ, ಶ್ವೇತಾ ಚೆಂಗಪ್ಪ ಮತ್ತು ವೀಣಾ ಪೊನ್ನಪ್ಪ ಪಾತ್ರಗಳಿಗೆ ಸ್ಕೋಪ್​ ಇರುವುದಷ್ಟೇ ಅಲ್ಲ, ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ವಿಲನ್​ಗಳಾಗಿ ಚೆಲುವರಾಜು, ವಿನಯ್​ ಬಿದ್ದಪ್ಪ ಮುಂತಾದವರಿಗೆ ಒದೆ ತಿನ್ನುವುದಕ್ಕಿಂತ ಹೆಚ್ಚು ಕೆಲಸವಿಲ್ಲ.

    ಚಿತ್ರದ ಮೂಡ್​ಗೆ ತಕ್ಕಂತೆ ಬಹುತೇಕ ಭಾಗ ಕತ್ತಲು ತುಂಬಿಕೊಂಡಿದೆ. ಬೆಳಕಿದ್ದರೂ ಮಂದವಾಗಿರುತ್ತದೆ. ಒಟ್ಟಾರೆ, ಚಿತ್ರದ ಆಶಯಕ್ಕೆ ತಕ್ಕ ವಾತಾವರಣವನ್ನು ಸೃಷ್ಟಿಸಿದ್ದಾರೆ ಛಾಯಾಗ್ರಾಹಕ ಸ್ವಾಮಿ ಗೌಡ. ಅದಕ್ಕೆ ಪೂರಕವಾಗಿ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಗಮನಸೆಳೆಯುತ್ತದೆ. ‘ಜುಂಜುಪ್ಪ’, ‘ಗಿಲ್ಲಕ್ಕೋ ಶಿವ’ ಮತ್ತು ‘ಪುಷ್ಪ ಹಾಡುಗಳು ಗುನುಕುವಂತಿವೆ. ಅದಕ್ಕಿಂತ ಕಾಡುವ ಗುಣ ಅರ್ಜುನ್​ ಜನ್ಯ ಅವರ ಹಿನ್ನೆಲೆ ಸಂಗೀತಕ್ಕಿದೆ.

    ‘ವೇದ’ ಚಿತ್ರದ ಕಥೆ ಏನು? ಶಿವರಾಜಕುಮಾರ್​ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts