More

    ವೇದ ಚಿತ್ರದ ರೆಬೆಲ್ ಲೇಡೀಸ್!

    ಹರ್ಷವರ್ಧನ್ ಬ್ಯಾಡನೂರು
    ಬೆಂಗಳೂರು: ಎ. ಹರ್ಷ ನಿರ್ದೇಶನದ ‘ವೇದ’ ಹಲವು ವಿಶೇಷತೆಗಳಿಂದ ಕೂಡಿದೆ. ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ. ಗೀತಾ ಪಿಕ್ಚರ್ಸ್ ಬ್ಯಾನರ್​ನಲ್ಲಿ ಗೀತಾ ಶಿವರಾಜಕುಮಾರ್ ನಿರ್ವಿುಸಿರುವ ಮೊದಲ ಸಿನಿಮಾ. ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ, ಗಾಯಕಿ ಅದಿತಿ ಸಾಗರ್ ಮೊದಲ ಬಾರಿಗೆ ನಟಿಸಿರುವ ಚಿತ್ರವಿದು. ಹಾಗೇ 16 ವರ್ಷಗಳ ಬಳಿಕ ಶ್ವೇತಾ ಚಂಗಪ್ಪ ಮತ್ತೆ ಬೆಳ್ಳಿತೆರೆಗೆ ವಾಪಸ್ಸಾಗಿರುವ ಸಿನಿಮಾ. ಹೀಗೆ ಹಲವು ಕಾರಣಗಳಿಂದ ‘ವೇದ’ ಚಿತ್ರ ನಿರೀಕ್ಷೆ, ಕುತೂಹಲ ಮೂಡಿಸಿದೆ. ಮತ್ತೊಂದು ವಿಶೇಷತೆ ಎಂದರೆ ಶಿವರಾಜಕುಮಾರ್ ಮಾತ್ರವಲ್ಲ, ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ ಮತ್ತು ಅದಿತಿ ಸಾಗರ್ ಕೂಡ ಫೈಟ್​ಗಳಲ್ಲಿ ಗಮನ ಸೆಳೆದಿದ್ದಾರೆ.

    ಸಣ್ಣಪುಟ್ಟ ಗಾಯಗಳಾದವು

    ‘ಹೀರೋ’ ಚಿತ್ರದ ಬಳಿಕ ನಟಿ ಗಾನವಿ ಲಕ್ಷ್ಮಣ್ ‘ವೇದ’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ‘‘ಹೀರೋ’ ಚಿತ್ರದಲ್ಲಿ ನನ್ನ ಆಕ್ಟಿಂಗ್ ನೋಡಿ ನಿರ್ದೇಶಕ ಹರ್ಷ ಸರ್ ಕರೆದು, ಲುಕ್ ಟೆಸ್ಟ್ ಮಾಡಿದರು. ಮಾನಸಿಕವಾಗಿ ನಾನು ಪಾತ್ರಕ್ಕೆ ಸಿದ್ಧಳಾಗಿದ್ದೆ. ರಿಹರ್ಸಲ್ಸ್ ಅಂತೇನು ಇರಲಿಲ್ಲ. ಆದರೆ, ನಾನು ಸಲೂನಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಫೈಟ್ಸ್ ಚಿತ್ರೀಕರಣದ ವೇಳೆ ಸಣ್ಣಪುಟ್ಟ ಏಟುಗಳಾದವು. ಶಿವರಾಜಕುಮಾರ್ ಅವರಿಗೆ ಆದ ಗಾಯಗಳನ್ನು ನೋಡಿ, ಅವರ ಮುಂದೆ ನಮಗೆ ಆದ ಗಾಯಗಳ ಬಗ್ಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಚಿತ್ರೀಕರಣದ ವೇಳೆ ಶಿವಣ್ಣ ಅಷ್ಟು ಸಿನಿಮಾ ಮಾಡಿರುವ ಸೂಪರ್​ಸ್ಟಾರ್ ಅಂತ ಯಾವತ್ತೂ ತೋರಿಸಿಕೊಂಡಿಲ್ಲ. ಹೀ ಈಸ್ ದಿ ಗಿಫ್ಟ್ ಫಾರ್ ಅವರ್ ಇಂಡಸ್ಟ್ರಿ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಗಾನವಿ.

    ಜತೆಗೆ, ‘ಇಷ್ಟು ವರ್ಷ ಒಳ್ಳೆ ಕಥೆ ಬರಲಿ ಅಂತ ಕಾಯುತ್ತಿದ್ದೆ. ಅದರ ಪ್ರತಿಫಲ ‘ವೇದ’. ತುಂಬ ಒಳ್ಳೆಯ ಪಾತ್ರ, ಚೆನ್ನಾಗಿ ನೋಡಿಕೊಂಡರು. ಗೌರವದಿಂದ ನಡೆಸಿಕೊಂಡರು. ಗೀತಾ ಮೇಡಂ ಎಲ್ಲ ರೀತಿ ಕಂಫರ್ಟ್ ಕೊಟ್ಟರು. ಇಂತಹ ಒಂದು ಬ್ಯಾನರ್ ತುಂಬ ಚೆನ್ನಾಗಿ ಬೆಳೆಯಬೇಕು. ಎಷ್ಟು ಖುಷಿಯಿಂದ ಸಿನಿಮಾ ಮಾಡಿದೆವು. ಹೇಗೆ ಮುಗೀತು ಅಂತನೇ ಗೊತ್ತಾಗಲಿಲ್ಲ. 60ನೇ ದಶಕದ ಪರಿಸರ ಹೇಗಿತ್ತು ತೆರೆಯ ಮೇಲೆ ನೋಡಬಹುದು. ‘ವೇದ’ ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಜನರೂ ಎಂಜಾಯ್ ಮಾಡುತ್ತಾರೆ ಎಂಬ ಭರವಸೆಯಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

    ಅಸಾಮಾನ್ಯ ಅದಿತಿ ಸಾಗರ್

    ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಈಗಾಗಲೇ ಕೆಲವು ಸಿನಿಮಾಗಳಲ್ಲಿ ಹಾಡುಗಳಿಗೆ ಕಂಠದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ‘ವೇದ’ ಚಿತ್ರದ ಮೂಲಕ ಆಕ್ಟಿಂಗ್ ಡೆಬ್ಯೂ ಮಾಡಿರುವ ಅವರು, ‘ನಾನಿಲ್ಲಿ ಅಸಾಮಾನ್ಯ, ಕುತೂಹಲಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಒಂದು ವಿಭಿನ್ನ ಬಗೆಯ ಕಥೆಯ ಮೂಲಕ ಡೆಬ್ಯೂ ಮಾಡುತ್ತಿರುವ ಖುಷಿಯಿದೆ. ಚಿತ್ರೀಕರಣ ಪ್ರಾರಂಭವಾದ ಕೆಲವು ದಿನಗಳವರೆಗೂ ಅಪ್ಪ ಕೂಡ ನನ್ನ ಜತೆಯಲ್ಲಿರುತ್ತಿದ್ದರು. ನಂತರ ಅವರು ‘ಬಿಗ್​ಬಾಸ್’ ಶೋಗೆ ಹೋಗಬೇಕಾಯಿತು. ನಾವು ಹೇಗೆ ಒಂದು ಪಾತ್ರವಾಗಬೇಕು ಎಂಬುದನ್ನು ಅಪ್ಪ ಚೆನ್ನಾಗಿ ಹೇಳಿಕೊಟ್ಟಿದ್ದರು. ಸ್ವಲ್ಪ ಮಟ್ಟಿಗೆ ಆಕ್ಷನ್ ಕೂಡ ಇರುವ ಕಾರಣ ಕೆಲವು ದಿನಗಳ ಕಾಲ ಪಲ್ಟಿ, ಕಾರ್ಟ್ ವೀಲ್ ಸೇರಿದಂತೆ ಬೇಸಿಕ್ ಸ್ಟಂಟ್​ಗಳ ತರಬೇತಿ ಪಡೆದುಕೊಂಡಿದ್ದೆ.

    ‘ವೇದ’ ಚಿತ್ರದಲ್ಲಿ ನಟಿಸಿದ ಅನುಭವ ತುಂಬ ಚೆನ್ನಾಗಿತ್ತು. ಸಣ್ಣ ವಯಸ್ಸಿನಿಂದ ಯಾರನ್ನು ತೆರೆಯ ಮೇಲೆ ನೋಡುತ್ತಿದ್ದೆನೋ, ಅವರೊಂದಿಗೆ ನಟಿಸುವ ಅವಕಾಶ ಸಿಕ್ಕ ಖುಷಿಯಿದೆ. ನನಗೆ ಮೊದಲಿಂದಲೂ ನಟಿಯಾಗುವ ಆಸೆಯಿತ್ತು. ಅದೀಗ ‘ವೇದ’ ಮೂಲಕ ನೆರವೇರಿದೆ. ಸಿನಿಮಾದಲ್ಲಿ ಬಹಳಷ್ಟು ಕಲಿತೆ. ಶಿವಣ್ಣ ತುಂಬ ಎನರ್ಜೆಟಿಕ್ ಅಂತ ಕೇಳಿದ್ದೆ. ಅದನ್ನು ಶೂಟಿಂಗ್ ಸಮಯದಲ್ಲಿ ನೋಡಿದೆ. ಪ್ರತಿ ಹಂತದಲ್ಲೂ ಅವರು ಸಪೋರ್ಟ್ ಮಾಡುತ್ತಿದ್ದರು’ ಎಂದು ಹೇಳಿಕೊಳ್ಳುತ್ತಾರೆ ಅದಿತಿ ಸಾಗರ್.

    ಕೂದಲು, ಬೆನ್ನು ಸುಟ್ಟುಹೋಗಿತ್ತು

    ಹಲವು ವರ್ಷಗಳ ಬಳಿಕ ನಟಿ ಶ್ವೇತಾ ಚೆಂಗಪ್ಪ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ವೇದ’ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಟಿವಿಯಲ್ಲಿ ಬಿಜಿಯಿದ್ದ ಕಾರಣ, ನಾನು ಸಿನಿಮಾ ಬಗ್ಗೆ ನಿರ್ಧಾರ ಮಾಡಿರಲಿಲ್ಲ. ಸಿನಿಮಾದಲ್ಲಿ ಮಾಡಬೇಕು ಅಂತನ್ನಿಸಿದಾಗ ‘ವೇದ’ ಅವಕಾಶ ಬಂತು. ಪರ್ಫಾಮೆನ್ಸ್ ಓರಿಯಂಟೆಡ್ ಪಾತ್ರ. ಇಷ್ಟು ವರ್ಷ ನನ್ನನ್ನು ಈ ರೀತಿ ನೋಡಿಯೇ ಇಲ್ಲ. ಅಷ್ಟೇ ಯಾಕೆ ನಾನೇ ಈ ರೀತಿ ನಟಿಸುತ್ತೇನೆ ಎಂಬ ಊಹೆಯೂ ಮಾಡಿಕೊಂಡಿರಲಿಲ್ಲ. ಅಷ್ಟರ ಮಟ್ಟಿಗಿನ ಚಾಲೆಂಜಿಂಗ್ ಪಾತ್ರ. ‘ವೇದ’ ನಿಜವಾಗಿಯೂ ಒಂದು ಟ್ರೀಟ್. ಶಿವಣ್ಣ ಅವರ 125ನೇ ಸಿನಿಮಾ. ನಿರ್ದೇಶಕ ಹರ್ಷ ಕಥೆ ಹೆಣೆದಿರುವ ರೀತಿ, ಪ್ರತಿ ಪಾತ್ರದ ಪ್ರಾಮುಖ್ಯತೆ, ಅರ್ಜುನ್ ಜನ್ಯ ಸಂಗೀತ, ಎಲ್ಲವೂ ಚೆನ್ನಾಗಿವೆ. ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಚಿತ್ರದಲ್ಲಿರುವ ಎಲ್ಲ ಮಹಿಳಾ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆಯಿದೆ. ಹೆಣ್ಣುಮಕ್ಕಳಿಂದ ಹೇಗೆ ಮಾಡಿಸಿದ್ದಾರೆ ಅಂತ, ಟ್ರೇಲರ್ ನೋಡಿಯೇ ತುಂಬ ಜನ ಶಾಕ್ ಆಗಿದ್ದಾರೆ. ಎಮೋಷನ್ಸ್, ಡ್ರಾಮಾ, ಸಾಂಗ್, ಹ್ಯೂಮರ್, ಸ್ಟಂಟ್ಸ್ ಜತೆ ಚಿತ್ರದಲ್ಲೊಂದು ಉತ್ತಮ ಸಂದೇಶ ಕೂಡ ಇದೆ.

    ನಾನು ಶೂಟಿಂಗ್ ಪ್ರಾರಂಭಿಸಿದ್ದೇ ಫೈರ್ ಆಕ್ಟ್ ಮೂಲಕ. ಶೂಟಿಂಗ್ ಸಮಯದಲ್ಲಿ ಕೂದಲು, ಬೆನ್ನು ಸುಟ್ಟೋಗಿತ್ತು. ಯಾವ ಡ್ಯೂಪ್ ತೆಗೆದುಕೊಳ್ಳದೇ ಮಾಡಿದ್ದೀನಿ. ಸಣ್ಣಪುಟ್ಟ ಗಾಯಗಳಾದರೂ ಕೊನೆಗೆ ಔಟ್​ಪುಟ್ ನೋಡಿದಾಗ ಏನೂ ಅನ್ನಿಸಿಲ್ಲ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಶ್ವೇತಾ. ಅಂದಹಾಗೆ, ‘ವೇದ’ ಚಿತ್ರದ ಬಳಿಕ ಉತ್ತಮ ಪಾತ್ರಗಳು ಸಿಕ್ಕರೆ ಸಿನಿಮಾಗಳಲ್ಲೂ ನಟಿಸುವ ಆಲೋಚನೆ ಅವರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts