More

    ವೇದ ದರ್ಶನ: ಏಕಾಂತದಲ್ಲಿಯೇ ಏತಕ್ಕೆ ಉಪದೇಶ?

    ವೇದ ದರ್ಶನ: ಏಕಾಂತದಲ್ಲಿಯೇ ಏತಕ್ಕೆ ಉಪದೇಶ?ಸದುಪದೇಶದಿಂದ, ಗುರುಮುಖೇನ, ಪರಮಾತ್ಮನ ವಿಷಯವಾಗಿ ಅನುಶಾಸನವನ್ನು ಪಡೆದು, ‘‘ಜ್ಞಾತಾ’’ ಎನಿಸಿಕೊಂಡು ನಿಜವಾಗಿಯೂ ಭಗವಂತನನ್ನು ಅರಿತವನು ಅತ್ಯಂತ ಆಶ್ಚರ್ಯಮಯನಾದ ವ್ಯಕ್ತಿಯೇ. (ಮನುಷ್ಯಾಣಾಂ ಸಹಸ್ರೇಷು… ಇತ್ಯಾದಿ ಪ್ರಸಿದ್ಧ ಗೀತಾಸೂಕ್ತಿಗಳಲ್ಲಿ ಈ ವಿಷಯವನ್ನೇ ಸೂಚಿಸಿದೆ.) ಅಂದರೆ ಸರಿಯಾದ ಗುರುಶಿಷ್ಯರ ಸಂಯೋಗವೂ ಮತ್ತು ಸರಿಯಾದ ಉಪದೇಶ, ಜ್ಞಾನಲಾಭ, ಮೋಕ್ಷಪ್ರಾಪ್ತಿಗಳೂ, ಅತ್ಯಂತ ದುರ್ಲಭ ಎಂದು ಭಾವ. ಇದನ್ನು ಸಾರ್ವಜನಿಕ ಸ್ವತ್ತನ್ನಾಗಿ ಮಾಡಿಯೇಬಿಡುತ್ತೇವೆಂದು ಹಟ ತೊಟ್ಟು ಹೊರಟವರೆಲ್ಲರೂ ನಿರಾಶೆಯಲ್ಲಿಯೇ ತಮ್ಮ ಪ್ರಯತ್ನವು ಪರ್ಯವಸಾನ ಹೊಂದಿರುವುದನ್ನು ಕಂಡಿದ್ದಾರೆಂದು ಹೇಳಬಹುದು. ಹಾಗೆಂದರೆ ಉಪದೇಶವೇ ಮಾಡತಕ್ಕದ್ದಲ್ಲ ಎಂದು ಅರ್ಥವಲ್ಲ. ಎಲ್ಲಿಯೋ ಸಹಸ್ರದಲ್ಲಿ ಒಬ್ಬರಿಗೆ ಸ್ವಯಂಪ್ರೇರಣೆಯಿಂದ ಸಿದ್ಧಿಯತ್ತ ನಡೆಯುವ ಬಯಕೆಯಾದ ಹೊರತು ಬಲಾತ್ಕಾರವಾಗಿ ಬ್ರಹ್ಮಜ್ಞಾನವನ್ನು ಉಂಟು ಮಾಡುವುದು ಸಾಧ್ಯವಿಲ್ಲ ಎಂದು ತಾತ್ಪರ್ಯ. ಹೀಗೆ ಅನೇಕ ಕಟ್ಟುಪಾಡುಗಳಿಂದ ಕೂಡಿದ ಬ್ರಹ್ಮೋಪದೇಶವು ಕೆಲವರ ಪಾಲಿಗೇ ಸಿದ್ಧಿಯಾಗುವುದಕ್ಕೆ ‘‘ಬ್ರಾಹ್ಮಣರು’’ ಕಾರಣವಲ್ಲ. ಇದಕ್ಕೆ ಯಾರನ್ನಾದರೂ ದೂರಬೇಕಾಗಿದ್ದರೆ, ಮನುಷ್ಯ ಸ್ವಭಾವವನ್ನೇ ದೂರಬೇಕಷ್ಟೆ? ಸಾಮೂಹಿಕವಾಗಿ, ಯೋಗವನ್ನೋ ತತ್ತೊ್ವೕಪದೇಶವನ್ನೋ ಮಾಡುತ್ತೇವೆಂದು ಪಾಶ್ಚಾತ್ಯರಂತೆ, ಕ್ರೈಸ್ತ ಮಿಶನರಿಗಳಂತೆ, ಸಂಘ, ಸಂಸ್ಥೆಗಳನ್ನು ಕಟ್ಟುವವರ ಉದ್ದೇಶ ಪ್ರಾಯಿಕವಾಗಿ ಮೋಕ್ಷೇತರವಾದ ಅರ್ಥಕಾಮಪ್ರಾಪ್ತಿಗಳಲ್ಲಿಯೇ ಪರಿಣಾಮ ಹೊಂದುತ್ತಿರುವುದನ್ನು ಎಲ್ಲರೂ ಕಣ್ಣೆದುರಿಗೇ ಕಾಣುತ್ತಿದ್ದೇವೆ. ಬಯಲುನಾಟ್ಯಮಂದಿರಗಳಲ್ಲಿ ಬ್ರಹ್ಮಜ್ಞಾನದ ವಿಷಯವಾಗಿ ಉಪದೇಶ ಕೊಡಲು, ವೇದಸಂದೇಶದ ವಿರುದ್ಧವಾಗಿ ಮುಂದೆ ಬರುವವರು ಬಹುಶಃ ತಮ್ಮ ತಮ್ಮ ಅಜ್ಞಾನವನ್ನೇ ಬಯಲು ಮಾಡಿಕೊಂಡು ಜನರನ್ನು ಕೇವಲ ಕೀಳುಮಟ್ಟದ ಮನರಂಜನೆಯ ಸೋಗಿನಲ್ಲಿ ವಂಚಿಸಿ ಪಾತ್ರಾಪಾತ್ರ ವಿವೇಚನೆ ಇಲ್ಲದೆ ತಾವೂ, ಹಣ ಗಳಿಸುವುದೊಂದನ್ನೇ ಗುರಿಯಾಗಿಟ್ಟುಕೊಂಡಿರುತ್ತಾರೆ. ಆದ್ದರಿಂದ ‘‘ಏಕಾಂತೋಪದೇಶಃ ಪ್ರಥಮಮಿಹ ಗುರೋಃ ಏಕಚಿತ್ತೇನ ಧಾರ್ಯಃ’’ ಎಂದು ಜ್ಞಾನಿಗಳು ಹೇಳಿದಂತೆ, ಏಕಾಗ್ರಚಿತ್ತದಿಂದ ಉಪದೇಶವನ್ನು ಪಡೆದು ಧನ್ಯರಾಗಬೇಕು.

    ನಮ್ಮ ಸನಾತನಧರ್ಮವು ಪಾಶ್ಚಾತ್ಯ ದೇಶಗಳ ಕ್ರೈಸ್ತ, ಇಸ್ಲಾಂ, ಮತಗಳಂತೆಯೋ, ಅಥವಾ ನಮ್ಮದೇ ದೇಶದ ಜೈನ, ಬೌದ್ಧ ಮತಗಳಂತೆಯೋ ನಿರ್ದಿಷ್ಟ ಚಾರಿತ್ರಿಕ ಕಾಲದಲ್ಲಿ ಒಂದಾನೊಂದು ದಿನ, ಒಬ್ಬಾನೊಬ್ಬ ವ್ಯಕ್ತಿಯಿಂದ ‘‘ನಿರ್ವಿುತ’’ವಲ್ಲದೆ, ಅನಾದಿಯೂ ಅನಂತವೂ ಆಗಿದ್ದು, ಜೀವನದ ನಿತ್ಯಸತ್ಯಗಳನ್ನು ಎತ್ತಿ ಹಿಡಿದಿದ್ದು ಅಪೌರುಷೇಯವಾಗಿದೆ. ಆದುದರಿಂದ ಜೀವನದ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡೇ, ವ್ಯಕ್ತಿಗಳ ಪರಿಪಕ್ವತೆ, ಮನಸ್ಸಿನ ಒಲವು, ವೃತ್ತಿಯ ಹಿನ್ನೆಲೆ, ಜನ್ಮಜನ್ಮಾಂತರಗಳ ಸಿದ್ಧತೆಗಳನ್ನೆಲ್ಲ ಪರಿಗಣಿಸಿ, ಅವನವನ ಯೋಗ್ಯತೆ, ಅಧಿಕಾರಕ್ಕೆ ತಕ್ಕಂತೆ ಧರ್ಮಸಾಧನೆಯನ್ನೂ ಮೋಕ್ಷಸಾಧನೆಯನ್ನೂ ಮಾಡುವ ಅವಕಾಶ ಬಾಹುಳ್ಯವನ್ನು ಒಂದೇ ಗುರಿಗಾಗಿ ಏರ್ಪಡಿಸಿಕೊಟ್ಟಿರುವ ಒಂದೇ ಒಂದು ವಿಶ್ವಧರ್ಮವೆಂದರೆ ನಮ್ಮ ಸನಾತನ ಧರ್ಮವೇ ಎಂದು ಸಪ್ರಮಾಣವಾಗಿ ಹೇಳಬಹುದು. ಕ್ರೈಸ್ತ-ಇಸ್ಲಾಂಧರ್ಮಗಳಲ್ಲಿ ಹೀಗಲ್ಲದೆ ಕೇವಲ ‘‘ಏಕರೂಪತಾ’’ ತತ್ತ್ವಮಯ (Uniformity, not Unity) ಉಪದೇಶಗಳೇ ಇವೆ. ಉದಾ: ‘‘ಹತ್ತು ಅಪ್ಪಣೆಗಳು’’ (Ten Commandments) ಇತ್ಯಾದಿ. ಇದರಿಂದ ವ್ಯಕ್ತಿಯ ಅಗತ್ಯಕ್ಕೆ ತಿಲಾಂಜಲಿ ಇತ್ತಿರುವುದಲ್ಲದೆ, ಇವನ್ನು ಉಲ್ಲಂಘಿಸಿದವನು ಧಾರ್ವಿುಕವಾಗಿರುವ ಸಾಧ್ಯತೆಯೇ ಇಲ್ಲವೆಂಬ ಅಸಹಿಷ್ಣುತಾ ಮನೋಭಾವ ಬೇರೂರಿ, ಅನರ್ಥವಾಗಿರುವುದು ಪಾಶ್ಚಾತ್ಯಚರಿತ್ರೆಯಲ್ಲಿ ಸರ್ವವಿದಿತವಾಗಿದೆ. ನಮ್ಮಲ್ಲಿಯೋ? ಎಂದರೆ ಗೃಹಸ್ಥನ ಧರ್ಮ ಕ್ಷತ್ರಿಯನದಲ್ಲ; ಕ್ಷತ್ರಿಯನ ಧರ್ಮ, ಬ್ರಾಹ್ಮಣನದಾಗಲಾರದು; ವೈಶ್ಯನದು ಶೂದ್ರನದಾಗಲಾರದು. ವರ್ಣಧರ್ಮ ಬೇರೆ, ಆಶ್ರಮಧರ್ಮ ಬೇರೆ, ವ್ಯಕ್ತಿಧರ್ಮ ಬೇರೆ, ಸಮಾಜಧರ್ಮ ಬೇರೆ, ಸಾರ್ವಜನಿಕಧರ್ಮ ಬೇರೆ. ಆಪದ್ಧರ್ಮ ಬೇರೆ ಇತ್ಯಾದಿ. ಮಹಾಭಾರತದ ಶಾಂತಿಪರ್ವ ಒಂದನ್ನಾದರೂ ಓದಿದರೆ ಪಾಶ್ಚಾತ್ಯರಿಗೆ ಎದೆಯೊಡೆದೀತೇ ವಿನಾ, ‘‘ಅರ್ಥ’’ವಾಗಲಾರದು!

    ಬಾಲಿವುಡ್ ನಟ ಇರ್ಫಾನ್​ ಖಾನ್​ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts