More

    ವೇದ ದರ್ಶನ: ನಚಿಕೇತನ ವರ ಯಾಚನೆ

    ನಚಿಕೇತನು ಭಗವದ್ಭಕ್ತನ ಲಕ್ಷಣಗಳನ್ನೆಲ್ಲ ಪಡೆದಿದ್ದನೆನ್ನುವುದು ಮುಂದೆ ಯಮನು ಅವನನ್ನು ಭೋಗೈಶ್ವರ್ಯಗಳಿಂದ ಪ್ರಲೋಭನೆಗೊಳಿಸಿ ಪರೀಕ್ಷಿಸಿದಾಗ ತಿಳಿಯುವುದು. ಕಿಡಿಯಾದರೇನು? ಬೆಂಕಿಯು ಬೆಂಕಿಯೇ! ಹೀಗೆ ಅಗ್ನಿಸ್ವರೂಪನಾದ ಈ ವಟುವು ಯಮಸದನದ್ವಾರದಲ್ಲಿ ಮೂರು ರಾತ್ರಿ ಸೊರಗಿ ನಿರಾಹಾರನಾಗಿರುವುದನ್ನು ಕಂಡು ಅವನಿಗಾಗಿ ಬೇಗ ಅರ್ಘ್ಯಪಾದ್ಯಗಳನ್ನು ತರುವಂತೆ ಯಮನ ಆಪ್ತರು ಹೇಳಿದುದರಲ್ಲಿ ಆಶ್ಚರ್ಯವೇನು? (ಹರ ವೈವಸ್ವತ ಉದಕಂ, 1-7)

    ವೇದ ದರ್ಶನ: ನಚಿಕೇತನ ವರ ಯಾಚನೆಯಮನ ವರದಾನ: ಆಗ ಯಮನು ಅವನನ್ನು ಕುರಿತು ಹೇಳುತ್ತಾನೆ: ‘‘ಹೇ ಬ್ರಹ್ಮನ್! ನೀನು ನನಗೆ ನಮಸ್ಕಾರಾರ್ಹನಾದ ಅತಿಥಿ. ನಿನಗೆ ನಮಸ್ಕಾರ. ಏಕೆಂದರೆ ಇದು ನನಗೆ ಕ್ಷೇಮಕಾರಕ. ಆದ್ದರಿಂದ ಈಗಾಗಲೇ ನನ್ನ ಬಾಗಿಲಿನಲ್ಲಿ ನೀನು ಮೂರು ರಾತ್ರಿಗಳು ಉಪವಾಸವಿದ್ದುದು ನನಗೆ ಕ್ಷೇಮವಲ್ಲ. ಏಕೆಂದರೆ ಯಾವ ಗೃಹಸ್ಥನ ಮನೆಯಲ್ಲಿ ಬ್ರಾಹ್ಮಣನು ಸತ್ಕರಿಸಲ್ಪಡದೆ ನಿರಾಹಾರನಾಗಿ ವಾಸಿಸುವನೋ ಅವನ, ಆ ಗೃಹಸ್ಥನ ಸಂಕಲ್ಪಗಳೂ, ಆಶೆಗಳೂ, ಅವನ ಸತ್ಸಂಗ ಫಲವೂ, ಸತ್ಯದ ನಡತೆಯೂ, ಪ್ರಿಯ ವಾಕ್ಯೋಚ್ಚಾರಣೆಯ ಫಲವೂ, ಪುಣ್ಯಕರ್ಮಫಲವೂ, ಪಶುಪುತ್ರಾದಿಗಳೂ, ನಾಶ ಹೊಂದುತ್ತಾರೆ. ಆದುದರಿಂದ ನನ್ನ ಈ ಪಾಪವು ಹೋಗುವುದಕ್ಕಾಗಿ ನೀನು ಮೂರು ವರಗಳನ್ನು ಕೇಳಿಕೋ.’’

    ಒಂದು ದೃಷ್ಟಿಯಿಂದ ನಚಿಕೇತನು ಈ ವೇಳೆಗೆ ‘ಮೃತ್ಯುಂಜಯ’ನಾದನು. ಅವನು ಇಲ್ಲಿ ಬಂದುದು ವರಯಾಚನೆಗಾಗಿ ಅಲ್ಲ. ಆದರೆ ಯಮನೇ ಅವನ ಕಾಲಿಗೆ ಬಿದ್ದು ವರಯಾಚನೆ ಮಾಡುವಂತೆ ಪ್ರಾರ್ಥಿಸಿದ ಈ ಸಂನ್ನಿವೇಶವು ಅಪೂರ್ವವೂ, ವೇದವಾಙ್ಮಯದಲ್ಲೇ ಅದ್ವಿತೀಯವೂ ಆಗಿದೆ. ಈಗ ಯಮನ ಅನುಗ್ರಹಾರ್ಥವಾಗಿ ನಚಿಕೇತನು, ವರಗಳನ್ನು ಕೇಳಲೇಬೇಕಾಯಿತು. ಇದು ದೈವಸಂಕಲ್ಪ:

    ‘‘ಕಿಂ ಸ್ವಿತ್ ಯಮಸ್ಯ ಕರ್ತವ್ಯಂ ಯನ್ಮಯಾ ಅದ್ಯ ಕರಿಷ್ಯತಿ?’’ ಎಂದು ತನ್ನಿಂದ ಯಮನಿಗೆ ಏನಾಗಬೇಕಾಗಿದೆ? ಎಂದೇ ಚಿಂತಿಸಿಕೊಂಡು ಬರುತ್ತಿದ್ದ ನಚಿಕೇತನಿಗೆ ಇಂತಹ ಭವ್ಯ ಸ್ವಾಗತ ಆದದ್ದು ಭಗವತ್ಕೃಪೆಯಿಂದಲೇ ಅಲ್ಲವೇ?

    ಮೊದಲನೆಯ ವರ: ಇನ್ನು ಮುಂದೆ ನಚಿಕೇತನು ಕೇಳುವ ವರಗಳಿಂದ ಅವನ ಸ್ವಭಾವದ ಬಗೆಗೆ ಮತ್ತಷ್ಟು ಆಳವಾದ ಗೌರವ ಭಾವ ಉಂಟಾಗುತ್ತದೆ. ಈಗ ಅವನ ಮೊದಲನೇ ವರ ಹೀಗಿದೆ:

    ಕೋಪವೆಂಬುದು ಬಹು ಕೆಟ್ಟ ಪ್ರವೃತ್ತಿ. ಅದರಲ್ಲೂ ಬ್ರಾಹ್ಮಣನಿಗೆ, ವಿಶೇಷವಾಗಿ, ಅಷ್ಟಾಂಗಯೋಗಯುಕ್ತನಾದವನಿಗೆ, ಪರಮ ಶತ್ರು. ತನ್ನ ತಂದೆಯು ಇಂತಹ ಅನುಚಿತವಾದ ಕೋಪದಿಂದಲೇ ಅಲ್ಲವೇ ಹಡೆದ ಮಗನಾದ ತನ್ನನ್ನೂ ಮೃತ್ಯುವಿಗೆ ಕೊಟ್ಟದ್ದು? ಆದುದರಿಂದ ತನ್ನ ತಂದೆಯ ಕೋಪಸ್ವಭಾವ ಹೋಗಿ, ಮನಸ್ಸು ಪ್ರಸನ್ನವಾಗಿ, ಶಾಂತ ಸಂಕಲ್ಪನಾಗಿ ಆಗಲಿ, ಮತ್ತು ತಾನು ಇಲ್ಲಿಂದ ಅವನಲ್ಲಿಗೆ ಪುನಃ ಹೋಗಿ ಸೇರಿದಾಗ ಎಂದಿನಂತೆಯೇ ಪ್ರೀತಿಯಿಂದ ಮಾತನಾಡುವಂತಾಗಲಿ ಎಂಬುದೇ ಮೊದಲನೆಯ ವರ. (1-10).

    ಬ್ರಹ್ಮಸೂತ್ರದಲ್ಲಿ ಇದರ ವಿವರಣೆ: ಶ್ರೀ ವೇದವ್ಯಾಸರು ಬ್ರಹ್ಮಸೂತ್ರದ ಆನುಮಾನಿಕಾಧಿಕರಣದಲ್ಲಿ ‘‘ತ್ರಯಾಣಾಮೇವ ಚೈವಂ ಉಪನ್ಯಾಸಃ ಪ್ರಶ್ನಶ್ಚ’’ (1-4-6) ಎಂಬ ಸೂತ್ರದಲ್ಲಿ, ‘‘ಇಡೀ ಕಠೋಪನಿಷತ್ತು ಮೂರು ಮುಖ್ಯ ಪ್ರಶ್ನೆಗಳ ಮತ್ತು ಅವುಗಳಿಗೆ ಉತ್ತರರೂಪವಾದ ಮೂರು ಉಪನ್ಯಾಸಗಳ ಸಂಕಲನವಾಗಿದೆ’’ ಎಂದು ಸಂಗ್ರಹಿಸಿದ್ದಾರೆ. ಅದರಲ್ಲಿ ಮೊದಲನೆಯದಾದ ಈ ಪ್ರಶ್ನೆಯು ಸಾಧಕನಾದ ಉಪೇತೃವು ಹೊಂದಿರಬೇಕಾದ ಲಕ್ಷಣಗಳನ್ನು ಕುರಿತು ಹೇಳುತ್ತದೆ. (ಉಳಿದೆರಡು, ಉಪಾಯ, ಉಪೇಯಗಳಿಗೆ ಸಂಬಂಧಿಸಿವೆ.) ಶಾಂತ ಸಂಕಲ್ಪನಲ್ಲದ ಮನುಷ್ಯನಿಗೆ ಯೋಗವು ಅಸಾಧ್ಯ. (ಮುಂದೆ ಯಮನೇ ಈ ವಿಷಯವನ್ನು ಇನ್ನೂ ಸ್ಪಷ್ಟವಾಗಿ ಉಪನಿಷತ್ತಿನ ಮಧ್ಯದಲ್ಲಿಯೇ ಹೀಗೆ ಹೇಳುತ್ತಾನೆ.)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts