More

    ವಸಂತನರಸಾಪುರಕ್ಕೆ ಎತ್ತಿನಹೊಳೆ ನೀರು!

    ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಎತ್ತಿನಹೊಳೆ ನೀರು ಮರು ಹಂಚಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಅಭಯ ನೀಡಿದ ಬೆನ್ನಲ್ಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ವಸಂತನರಸಾಪುರಕ್ಕೆ ಹೊಂದಿಕೊಂಡಿರುವ 5 ಕೆರೆಗಳನ್ನು ಗುರುತಿಸಿ ಎತ್ತಿನಹೊಳೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟಿದೆ.

    ಎತ್ತಿನಹೊಳೆ ಕುಡಿವ ನೀರಿನ ಸಮಗ್ರ ಯೋಜನೆ ಅಡಿ ದೇವನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 1 ಟಿಎಂಸಿ ಹಾಗೂ ವಸಂತನರಸಾಪುರಕ್ಕೆ 300 ಎಂಸಿಎಫ್‌ಟಿ ನೀರು ಹಂಚಿಕೆ ಮಾಡಲಾಗಿತ್ತು. ಆದರೆ, ಮಾರ್ಚ್
    ನಲ್ಲಿ ವಸಂತನರಸಾಪುರಕ್ಕೆ ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ಹಿಂಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಸಂಸದ ಜಿ.ಎಸ್.ಬಸವರಾಜು ನೇತೃತ್ವದ ನಿಯೋಗವು ಭೇಟಿ ಮಾಡಿ ಹಿಂಪಡೆದಿರುವ ನೀರು ಹಂಚಿಕೆ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಜತೆಗೆ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‌ಗೂ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿತ್ತು.

    5 ಕೆರೆಗಳಿಗೆ ನೀರು ಹಂಚಿಕೆ: ಸಿಎಂ ಭೇಟಿ ಹಿನ್ನೆಲೆಯಲ್ಲಿ ಮೇ 26 ರಂದು ಕೆಐಎಡಿಬಿ ವಸಂತನರಸಾಪುರಕ್ಕೆ ಹೊಂದಿಕೊಂಡಿರುವ 5 ಕೆರೆಗಳನ್ನು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ತುಂಬಿಸಿ, ಅಲ್ಲಿಂದ ಕೈಗಾರಿಕಾ ಪ್ರದೇಶಕ್ಕೆ ಪೂರೈಸಲು ಯೋಜನೆ ಸಿದ್ಧಪಡಿಸಿದೆ.

    ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಹಾಗೂ ಎತ್ತಿನಹೊಳೆ ಪೈಪ್‌ಲೈನ್ ಹತ್ತಿರವಿರುವ ಬ್ರಹಸಂದ್ರ ಕೆರೆ- 68.06 ಎಂಸಿಎಫ್‌ಟಿ, ಚಿಕ್ಕತೊಟ್ಲುಕೆರೆ-35.07 ಟಿಎಂಸಿ, ಕೆಸ್ತೂರು ಕೆರೆ-101.04 ಎಂಸಿಎಫ್‌ಟಿ, ಮಾವುಕೆರೆ -25.13 ಎಂಸಿಎಫ್‌ಟಿ ಹಾಗೂ ಹೆಬ್ಬಾಕ ಕೆರೆ-96.80 ಎಂಸಿಎಫ್‌ಟಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಿ ಆ ಕೆರೆಗಳಿಂದ ಪೈಪ್‌ಲೈನ್ ಮೂಲಕ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸಲು 43.98 ಕೋಟಿ ರೂ., ಅಂದಾಜು ವೆಚ್ಚದ ಕಾಮಗಾರಿಗಳ ಪಟ್ಟಿಯನ್ನು ಕೆಐಎಡಿಬಿ ತಯಾರಿಸಿದೆ.

    ಈ ಹಿಂದೆ 0.3 ಟಿಎಂಸಿ ಎತ್ತಿನಹೊಳೆ ನೀರನ್ನು ವಸಂತನರಸಾಪುರಕ್ಕೆ ಹಂಚಿಕೆ ಮಾಡಲಾಗಿದ್ದು ಈಗ 0.5 ಟಿಎಂಸಿ ಹೆಚ್ಚಿನ ನೀರು ಒದಗಿಸುವ ಭರವಸೆಯನ್ನು ಜಲಸಂಪನ್ಮೂಲ ಇಲಾಖೆ ಮೌಖಿಕವಾಗಿ ನೀಡಿದೆ.

    ನೀರು ಪೂರೈಕೆಗೆ 43.98 ಕೋಟಿ ರೂ.,!: ಬ್ರಹ್ಮಸಂದ್ರ ಕೆರೆಯಿಂದ ವಸಂತನರಸಾಪುರಕ್ಕೆ 16.20 ಕಿ.ಮೀ., ಪೈಪ್ ಲೈನ್‌ಗೆ 7.57 ಕೋಟಿ ರೂ., ವೆಚ್ಚ , ಚಿಕ್ಕತೊಟ್ಲುಕೆರೆಯಿಂದ 19.50 ಕಿ.ಮೀ., ಪೈಪ್‌ಲೈನ್‌ಗೆ 8.37 ಕೋಟಿ ರೂ., ಕೆಸ್ತೂರು ಕೆರೆಯಿಂದ 11.50 ಕಿ.ಮೀ., ಪೈಪ್‌ಲೈನ್‌ಗೆ 6.44 ಕೋಟಿ ರೂ., ಮಾವುಕೆರೆಯಿಂದ 13.10 ಕಿ.ಮೀ., ಪೈಪ್‌ಲೈನ್‌ಗೆ 6.83 ಕೋ.ರೂ., ಹಾಗೂ ಹೆಬ್ಬಾಕ ಕೆರೆಯಿಂದ 10 ಕಿ.ಮೀ., ಪೈಪ್‌ಲೈನ್‌ಗೆ 6.09 ಕೋಟಿ ರೂ., ವೆಚ್ಚದ ಕಾಮಗಾರಿ ಅಂದಾಜು ಮಾಡಲಾಗಿದೆ. ಬ್ರಹ್ಮಸಂದ್ರ ಕೆರೆಯಿಂದ ಕೆಸ್ತೂರು ಕೆರೆ ಹಾಗೂ ಮಾವುಕೆರೆಗೆ ಪೈಪ್‌ಲೈನ್ ಅಳವಡಿಸಲು 8.68 ಕೋಟಿ ರೂಪಾಯಿ ಅಂದಾಜು ವೆಚ್ಚ ಇದೆ.

    ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸಬೇಕಿದೆ. 12 ಸಾವಿರ ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಬಂಡವಾಳ ಹೂಡಿಕೆ ಉದ್ಯಮಗಳನ್ನು ಸೆಳೆಯಲು ಮೂಲಸೌಕರ್ಯ ಅತ್ಯವಶ್ಯ. ಭವಿಷ್ಯದ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆಯಿಂದ ನೀರು ಕೊಡಬೇಕೆಂಬ ನಮ್ಮ ಆಗ್ರಹಕ್ಕೆ ಸಿಎಂ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
    ಜಿ.ಎಸ್.ಬಸವರಾಜು ಸಂಸದ

    ಎತ್ತಿನಹೊಳೆ ನೀರಿನ ಜತೆಗೆ ಭೀಮಸಂದ್ರ ಕೆರೆ ಬಳಿಯ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುವ 107 ಕೋಟಿ ರೂ., ವೆಚ್ಚದ ಬೃಹತ್ ಯೋಜನೆಗೂ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ.
    ಕುಂದರನಹಳ್ಳಿ ರಮೇಶ್ ಅಧ್ಯಕ್ಷ, ಅಭಿವೃದ್ಧಿ ರೆವ್ಯಲೂಷನ್ ಫೋರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts