More

    ವರುಣಾದಲ್ಲೇ ಕಾಂಗ್ರೆಸ್ ಗೆಲುವು ಕಷ್ಟ – ಸಂಸದ ಪ್ರತಾಪಸಿಂಹ

    ರಾಯಚೂರು: ಬಿಜೆಪಿಗೆ ಸ್ಟಾರ್ ಪ್ರಚಾರಕರ ಅಗತ್ಯ ಇಲ್ಲ. ನಮ್ಮ ಪಕ್ಷದ ನಾಯಕರೇ ನಮಗೆ ಸ್ಟಾರ್ ಪ್ರಚಾರಕರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೋದಲ್ಲೆಲ್ಲ ಲಕ್ಷಾಂತರ ಜನ ಸೇರುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

    ತಾಲೂಕಿನ ಯಾಪಲದಿನ್ನಿಯಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಕಾಂಗ್ರೆಸ್‌ನವರು ಬಜರಂಗದಳ ನಿಷೇಧ, ಉಚಿತ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಆದರೆ, ನಾವು ಸರ್ಕಾರದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ ಎಂದರು.

    ಇದನ್ನೂ ಓದಿ: ವರುಣಾದಲ್ಲಿ‌ ಸೋಮಣ್ಣರಿಗೆ ನೂರೆಂಟು ಸವಾಲು! ಬಿ.ಎಸ್. ಯಡಿಯೂರಪ್ಪರ ಮೇಲೆ ಸದ್ಯದ ಕುತೂಹಲ

    ಸಿದ್ದರಾಮಯ್ಯ ನಾನು ನಾಮಪತ್ರ ಹಾಕಲು ಮಾತ್ರ ಬರುತ್ತೇನೆ ಎಂದು ವರುಣಾ ಕ್ಷೇತ್ರದ ಜನರಿಗೆ ಹೇಳಿದ್ದರು. ಆದರೆ, ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು ಹೋಗದಂತಹ ಸನ್ನಿವೇಶ ಎದುರಾಗಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ರಾಜ್ಯದಲ್ಲಿ 30 ರಿಂದ 40 ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆದರೆ ವರುಣಾದಲ್ಲಿಯೇ ಕಾಂಗ್ರೆಸ್ ಗೆಲ್ಲುವುದು ಕಷ್ಟಕರವಾಗಿದೆ.

    ಮೈಸೂರಿನ ಜನ ಸಿದ್ದರಾಮಯ್ಯರನ್ನು ನಂಬೋದಿಲ್ಲ. ಮೈಸೂರು ದಸರಾವನ್ನು ಮಹೀಷ ದಸರಾ ಎಂದು ಮಾಡಿದ್ದರಿಂದ ಕಳೆದ ಚುನಾವಣೆಯಲ್ಲಿ 36 ಸಾವಿರ ಮತಗಳ ಅಂತರದಿಂದ ಚಾಮುಂಡೇಶ್ವರಿ ಕ್ಷೇತ್ರದ ಜನರು ಸೋಲಿಸಿದ್ದರು. ಈ ಬಾರಿ ಸೋಮಣ್ಣ ಗೆಲುವು ನಿಶ್ಚಿತವಾಗಿದೆ.

    ಕಾಂಗ್ರೆಸ್ ನಾಯಕರನ್ನು ಕಂಡರೇ ಪ್ರಾಣಿ ಪಕ್ಷಿಗಳಿಗೂ ಆಗಲ್ಲ. ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕುಳಿತಿತ್ತು. ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದೆ.

    ಕಾಂಗ್ರೆಸ್ ಅಧಿಕಾರ ಬಂದರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹನುಮ ಜಯಂತಿಯಂದು ಹನುಮಂತ ಹುಟ್ಟಿದ ದಿನವೇ ಎಂದು ಕೇಳುವ ಸಿದ್ದರಾಮಯ್ಯ ಟಿಪ್ಪು ಹುಟ್ಟಿದ ಕುಂಡಲಿಯನ್ನು ಸಿದ್ಧಪಡಿಸಿದ್ದಾರೆ. ಅವರ ಗ್ಯಾರಂಟಿಗಳೆಲ್ಲ ಸುಳ್ಳು. ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳ ರದ್ದು, ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಟಿಪ್ಪು ವೈಭವೀಕರಣ ಮಾಡಲಿದ್ದಾರೆ.

    ಬಿಜೆಪಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿದ್ದು, ಬಿ.ಎಲ್.ಸಂತೋಷ ಲಿಂಗಾಯತ ಸಮುದಾಯದ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಹಿಂದು ಸಮಾಜ ಉಳಿಯಲಿದೆ ಎಂದು ಪ್ರತಾಪ ಸಿಂಹ ಹೇಳಿದರು.

    ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಜಿ.ಪಂ. ಮಾಜಿ ಸದಸ್ಯ ಎನ್.ಕೇಶವರೆಡ್ಡಿ, ಮುಖಂಡರಾದ ಡಿ.ಅಚ್ಯುತರೆಡ್ಡಿ, ತ್ರಿವಿಕ್ರಮ ಜೋಷಿ, ಶಂಕರಗೌಡ ಮಿರ್ಜಾಪುರ, ರಾಜಕುಮಾರ, ಎಂ.ಜಗದೀಶ, ಡಿ.ಶಂಕರರೆಡ್ಡಿ ಇದ್ದರು.

    ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ವಿಶ್ವವೇ ಪ್ರಶಂಸೆ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಮೋದಿ ಅವರ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳಲು ಸಿದ್ಧವಿಲ್ಲ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ಹಲವು ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯಿಲ್ಲ.
    | ಮನ್ಸುಖ್ ಮಾಂಡವಿಯಾ, ಕೇಂದ್ರ ಸಚಿವ

    ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಶತ ಪ್ರಯತ್ನ ನಡೆಸಿದೆ. ಕಾಂಗ್ರೆಸ್ ನಾಯಕರ ಆಲೋಚನೆಗಳು ದುರ್ಮಾಗದಿಂದ ಕೂಡಿವೆ. ಮೋದಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕರು ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ.
    | ಡಿ.ಕೆ.ಅರುಣಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts