More

    ಕೋಲಾರ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ನಿಗಾ ; 52 ಸಾವಿರ ಮಕ್ಕಳಿಗೆ ಕರೊನಾ ಲಸಿಕೆ

    ಕೋಲಾರ: ಜಿಲ್ಲೆಯಲ್ಲಿ ಶಾಲಾ ಮಕ್ಕಳನ್ನು ಕೋವಿಡ್‌ನಿಂದ ಪಾರು ಮಾಡಲು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ. 15ರಿಂದ 18 ವರ್ಷದೊಳಗಿನ 78 ಸಾವಿರ ಶಾಲಾ ಮಕ್ಕಳಿದ್ದು ಈ ಪೈಕಿ ಈಗಾಗಲೆ 52 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಜಿಲ್ಲೆಯ ಕೆಲ ವಸತಿಶಾಲೆ ಮತ್ತು ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿರುವ ಮಕ್ಕಳಿಗೆ ಕರೊನಾ ಕಾಣಿಸಿಕೊಂಡಿರುವುದರಿಂದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

    ಕರೊನಾ 3ನೇ ಅಲೆ ಮಕ್ಕಳಲ್ಲಿ ಬೇಗನೆ ಕಾಣಿಸಿಕೊಳ್ಳುವುದೆಂದು ತಜ್ಞರು ನೀಡಿರುವ ಎಚ್ಚರಿಕೆ ಅನುಸರಿಸಿ ಮಕ್ಕಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆ ಸರ್ಕಾರದ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರಲು ತಂಡ ರಚಿಸಿದ್ದು, ಆರೋಗ್ಯ ಇಲಾಖೆ ಮಾರ್ಗದರ್ಶನದಡಿ ಶಾಲೆಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಬೆಳಗ್ಗೆ ಪ್ರಾರ್ಥನೆ, ಮಧ್ಯಾಹ್ನ ಊಟದ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಮಕ್ಕಳಲ್ಲಿ ಯಾರಿಗಾದರೂ ಶೀತ, ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ ಅಂತಹ ಮಕ್ಕಳನ್ನು ತಕ್ಷಣ ಆರೋಗ್ಯ ತಪಾಸಣೆಗೆ ಒಳಪಡಿಸಿ ಆರೋಗ್ಯದ ಮೇಲೆ ನಿಗಾವಹಿಸಲು ಬಿಇಒ ಹಾಗೂ ಶಾಲಾ ಮುಖ್ಯಸ್ಥರಿಗೆ ಜವಾಬ್ದಾರಿ ವಹಿಸಲಾಗಿದೆ.

    ಜಿಲ್ಲೆಯಲ್ಲಿ ಕರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು, ಕೆಲ ವಸತಿಶಾಲೆ ಮಕ್ಕಳಲ್ಲಿ ಕರೊನಾ ಪಾಸಿಟಿವಿಟಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಡಿಡಿಪಿಐ ರೇವಣ ಸಿದ್ದಪ್ಪ ಜಿಲ್ಲೆಯ ಬಿಇಒಗಳೊಂದಿಗೆ ಸಭೆ ನಡೆಸಿ ಮಕ್ಕಳಲ್ಲಿ ಕರೊನಾ ಬಾರದಂತೆ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ವಿದ್ಯಾರ್ಥಿ ನಿಲಯಗಳ ಮಕ್ಕಳು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಲು ಮನವಿ ಮಾಡಿಕೊಳ್ಳಲಾಗಿದೆ.

    ಶಾಲೆಗಳಲ್ಲಿ ಮಕ್ಕಳಿಗೆ ಕರೊನಾ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ 52 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಕೋಲಾರದ ಇಟಿಸಿಎಂ ಬಳಿ ಇರುವ ಬಾಲಕಿಯರ ಬಿಸಿಎಂ ಹಾಸ್ಟೆಲ್‌ನಲ್ಲಿ ಒಟ್ಟು 150 ಮಕ್ಕಳಲ್ಲಿ 39 ಮಕ್ಕಳ ಆರೋಗ್ಯ ತಪಾಸಣೆ ಮಾಡಿದಾಗ 9 ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಕಡೆ ನಿಗಾವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    ಡಾ.ಜಗದೀಶ್, ಡಿಎಚ್‌ಒ, ಕೋಲಾರ

    ಮಕ್ಕಳ ಆರೋಗ್ಯದ ಕಡೆ ನಿಗಾವಹಿಸಲು ಸಲುವಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಒಗಳ ಸಭೆ ಕರೆದು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜ್ವರ, ನೆಗಡಿ, ಶೀತ ಇದ್ದಲ್ಲಿ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಎಂದು ಸೂಚಿಸಲಾಗಿದೆ.
    ರೇವಣ್ಣ ಸಿದ್ದಪ್ಪ, ಡಿಡಿಪಿಐ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts