More

    ಚೀನಾದ ಅನುಮಾನಾಸ್ಪದ ಪತ್ತೇದಾರಿ ಬಲೂನ್​ ಹೊಡೆದುರುಳಿಸಿದ ಅಮೆರಿಕ!

    ನವದೆಹಲಿ: ಚೀನಾದ ಅನುಮಾನಾಸ್ಪದ ಪತ್ತೇದಾರಿ ಬಲೂನ್ ಅನ್ನು​ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಹೊಡೆದುರುಳಿಸಿರುವುದಾಗಿ ಪೆಂಟಗನ್​ (ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ತಿಳಿಸಿದೆ.

    ಉತ್ತರ ಅಮೆರಿಕ ಸುತ್ತಲೂ ಇರುವ ಸೂಕ್ಷ್ಮ ಸೇನಾ ನೆಲೆಗಳಲ್ಲಿ ಬಲೂನ್​ ಗೂಢಾಚಾರಿಕೆ ಮಾಡುತ್ತಿದೆ ಎಂದು ಈ ವಾರದ ಆರಂಭದಲ್ಲೇ ಅಮೆರಿಕ, ಚೀನಾ ವಿರುದ್ಧ ಆರೋಪ ಮಾಡಿತ್ತು. ಇದೀಗ ಬಲೂನ್​ ಹೊಡೆದುಹಾಕಿದ್ದು, ಚೀನಾದ ಪ್ರತಿ ನಡೆಯ ಮೇಲೆ ಅಮೆರಿಕ ಹದ್ದಿನ ಕಣ್ಣಿಟ್ಟಿದೆ.

    ಈ ಘಟನೆಯ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್​, ಇಂದಿನ ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮವು ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ಯಾವಾಗಲೂ ಅಮೆರಿಕ ಜನರ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಸ್ಥಾನವನ್ನು ನೀಡುತ್ತದೆ ಮತ್ತು ನಮ್ಮ ಸಾರ್ವಭೌಮತ್ವಕ್ಕೆ ಸ್ವೀಕಾರಾರ್ಹವಲ್ಲದ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತದೆ ಎಂಬುದ ತಿಳಿಸುತ್ತದೆ ಎಂದರು.

    ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಬಲೂನ್​ಗೆ ಶೂಟ್​ ಮಾಡಿದಾಗ ಸಣ್ಣದಾಗಿ ಸ್ಫೋಟಗೊಂಡ ಬಲೂನ್​ ನೀರಿಗೆ ಬೀಳುವ ದೃಶ್ಯ ಸೆರೆಯಾಗಿದೆ. ಬಲೂನ್​ನಲ್ಲಿದ್ದ ಎಲ್ಲ ಅವಶೇಷಗಳು ಸಾಗರಕ್ಕೆ ಬೀಳುವ ರೀತಿಯಲ್ಲಿ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು ಮತ್ತು ಸಾಧ್ಯವಾದಷ್ಟು ಬಲೂನ್​ನ ಅವಶೇಷಗಳನ್ನು ಮರುಪಡೆಯಲು ಹಡಗುಗಳನ್ನು ಸಹ ನಿಯೋಜಿಸಲಾಗಿತ್ತು.

    ಇದಕ್ಕೂ ಮೊದಲು ಮಾಧ್ಯಮದವರು ಚೀನಾ ಮತ್ತು ಬಲೂನ್​ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದಾಗ, ಪ್ರತಿಕ್ರಿಯೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್​, ನಾವು ಬಲೂನ್​ನ ಕಾಳಜಿಯನ್ನ ವಹಿಸುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

    ಬಲೂನ್ ಆರಂಭದಲ್ಲಿ ಜನವರಿ 28 ರಂದು ಅಮೆರಿಕದ ವಾಯುಪ್ರದೇಶವನ್ನು ಪ್ರವೇಶಿಸುವುದನ್ನು ಮೊದಲಿಗೆ ಪತ್ತೆಹಚ್ಚಲಾಯಿತು. ಖಂಡಾಂತರ-ಬ್ಯಾಲಿಸ್ಟಿಕ್-ಕ್ಷಿಪಣಿ ಸಿಲೋಗಳ ತಾಣವಾದ ಮೊಂಟಾನಾದ ಮೇಲೆ ಬಲೂನ್​ ಹಾರಾಡಿತ್ತು ಮತ್ತು ಶನಿವಾರದಂದು ದೇಶದ ಉತ್ತರ ಕೆರೊಲಿನಾ ಕಡೆಗೆ ಹಾರಿತು. ಬಲೂನ್​ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯವು ಶುಕ್ರವಾರ ಸ್ಪಷ್ಟನೆ ನೀಡಿದ್ದು, ಈ ಬಲೂನ್ ಚೀನಾಕ್ಕೆ ಸೇರಿದ್ದು ಎಂದು ದೃಢಪಡಿಸಿದೆ. ಆದರೆ, ಇದು ಹವಾಮಾನ ಸಂಶೋಧನೆ ನಡೆಸುತ್ತಿರುವ ನಾಗರಿಕ ವಾಯುನೌಕೆಯಾಗಿದ್ದು, ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಹೇಳಿದೆ. (ಏಜೆನ್ಸೀಸ್​)

    ಕೆಎಫ್​ಡಿ ಲಸಿಕೆ ವಿತರಣೆ ಸ್ಥಗಿತ; ಸಿದ್ದಾಪುರ, ಹೊನ್ನಾವರ ತಾಲೂಕಿನ ಜನರಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ

    ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

    ಸರ್ಕಾರಿ ವೈದ್ಯ ಸೀಟು ಶ್ರೀಮಂತರ ಪಾಲು; ಶೇ.48 ಸೀಟುಗಳು ಕೇಂದ್ರ ಪಠ್ಯಕ್ರಮ ವಿದ್ಯಾರ್ಥಿಗಳಿಗೆ | ಹಳ್ಳಿ ಮಕ್ಕಳಿಗಿಲ್ಲ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts