More

    ಕೆಎಫ್​ಡಿ ಲಸಿಕೆ ವಿತರಣೆ ಸ್ಥಗಿತ; ಸಿದ್ದಾಪುರ, ಹೊನ್ನಾವರ ತಾಲೂಕಿನ ಜನರಲ್ಲಿ ಹೆಚ್ಚಿದ ಮಂಗನ ಕಾಯಿಲೆ ಆತಂಕ

    ಸುಭಾಸ ಧೂಪದಹೊಂಡ
    ಕಾರವಾರ: ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಕೆಎಫ್​ಡಿ) ತಡೆಗೆ ನೀಡುತ್ತಿದ್ದ ಲಸಿಕೆ ವಿತರಣೆಯನ್ನು ಆರೋಗ್ಯ ಇಲಾಖೆ ಈ ವರ್ಷ ಇದ್ದಕ್ಕಿದ್ದಂತೆ ಸ್ಥಗಿತ ಮಾಡಿದೆ. ‘ಸದ್ಯ ಲಸಿಕೆ ಸಂಗ್ರಹವಿಲ್ಲ. ಹಾಗಾಗಿ ಕಾಯಿಲೆ ನಿಯಂತ್ರಣಕ್ಕೆ ಪರ್ಯಾಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ’ ಎಂದು ಆರೋಗ್ಯ ಇಲಾಖೆಯು ಸಂಬಂಧಪಟ್ಟ ಡಿಎಚ್​ಒಗಳಿಗೆ ಕಳೆದ ಅಕ್ಟೋಬರ್​ನಲ್ಲಿ ಸುತ್ತೋಲೆ ಹೊರಡಿಸಿತ್ತು.

    ಲಸಿಕೆ ತಯಾರಿಕೆಗೆ ಸಂಬಂಧಪಟ್ಟಂತೆ ಹಲವು ಗೊಂದಲ ಸೃಷ್ಟಿಯಾಗಿವೆ. ಈ ನಡುವೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ಕೆಎಫ್​ಡಿ ಪ್ರಕರಣ ಖಚಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸಿದ್ದು, ರೋಗ ಹರಡುವ ಭೀತಿ ಎದುರಾಗಿದೆ. 1989ರಲ್ಲಿ ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಎನ್. ದಂಡಾವತರೆ ಕೆಎಫ್​ಡಿಯ ವೈರಾಣು ವಿನಿಂದಲೇ ‘ಫಾರ್ಮಲಿನ್ ಇನ್ಯಾಕ್ಟಿವೇಟೆಡ್ ಕೆಎಫ್​ಡಿ ಟಿಶ್ಯುಕಲ್ಚರ್ ವ್ಯಾಕ್ಸಿನ್’ ತಯಾರಿಸಿದ್ದರು. 1992ರಿಂದ ಶಿವಮೊಗ್ಗದಲ್ಲಿ ಲಸಿಕೆ ತಯಾರಿಸಿ ವಿತರಣೆ ಮಾಡಲಾಗುತ್ತಿತ್ತು.

    ಈ ನಡುವೆ 2001ರಿಂದ ಬೆಂಗಳೂರಿನ ಹೆಬ್ಬಾಳದ ಇನ್​ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆಂಡ್ ವೆಟರ್ನರಿ ಬಯಾಲಾಜಿಕಲ್ಸ್ (ಐಎಎಚ್​ವಿಬಿ) ಲಸಿಕೆ ತಯಾರಿಸಿ ವಿತರಿಸುತ್ತಿತ್ತು. ಆದರೆ, ಈ ಬಾರಿ ಲಸಿಕೆ ವಿತರಣೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಅನುಮತಿ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಆರೋಗ್ಯ ಇಲಾಖೆ ಲಸಿಕೆ ವಿತರಣೆಯನ್ನು ಯಾವುದೇ ಮುನ್ಸೂಚನೆ ಇಲ್ಲದೇ ಸ್ಥಗಿತ ಮಾಡಿದೆ.

    ಲಸಿಕೆಯು ತನ್ನ ಸಾಮರ್ಥ್ಯ ಕಳೆದುಕೊಂಡಿದೆ. ಲಸಿಕೆ ಪಡೆದವರಿಗೆ ಶೇ. 63 ಮಾತ್ರ ರಕ್ಷಣೆ ಲಭ್ಯವಾಗುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆದಿದ್ದವು. ಆದರೆ, ಅದೆಲ್ಲದನ್ನೂ ಬದಿಗೊತ್ತಿ ಸಿಡಿಎಸ್​ಸಿಒ ಅನುಮತಿ ಇಲ್ಲದೇ 21 ವರ್ಷ ಲಸಿಕೆಯನ್ನು ರಾಜ್ಯದ ಐದು ಜಿಲ್ಲೆಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ವಿಷಯ ಪ್ರಸ್ತಾವಿಸಿಲ್ಲ. ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ.

    ಏನಿದು ಮಂಗನ ಕಾಯಿಲೆ?

    ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್​ಡಿ) 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಮೊದಲು ಕಾಣಿಸಿಕೊಂಡಿತು. ಇದೊಂದು ವೈರಲ್ ಜ್ವರವಾಗಿದ್ದು, ದೇಹದ ಒಳ ಭಾಗಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಶೇ.8ರಿಂದ 10 ಮರಣ ಪ್ರಮಾಣವಿದೆ. ಮಂಗಗಳಿಗೆ ಈ ಕಾಯಿಲೆ ಬರುತ್ತದೆ. ಅವುಗಳಿಗೆ ಕಚ್ಚುವ ಉಣ್ಣೆ, (ಉಣುಗು)ಮನುಷ್ಯರಿಗೆ ಕಚ್ಚುವುದರಿಂದ ರೋಗ ಇವರಿಗೂ ಹರಡುತ್ತದೆ.

    ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಕಾಯಿಲೆ ಹರಡುವ ಪ್ರಮಾಣ ಹೆಚ್ಚು. ಒಮ್ಮೆ ರೋಗ ಕಂಡುಬಂದಲ್ಲಿ ಸುತ್ತಲಿನ ಐದು ಕಿ.ಮೀ. ವ್ಯಾಪ್ತಿಯ ಪ್ರದೇಶಗಳ ಜನರಿಗೆ ನಿರಂತರ ಐದು ವರ್ಷ ಲಸಿಕೆ ವಿತರಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತ ಬಂದಿದೆ. ರಾಜ್ಯದ ಐದು ಜಿಲ್ಲೆಗಲ್ಲಿ ಈ ಕಾಯಿಲೆ ಇದೆ. 2018-19ರಲ್ಲಿ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಉತ್ತರ ಕನ್ನಡದಲ್ಲಿ 86ಕ್ಕೂ ಅಧಿಕ ಪ್ರಕರಣ ಕಂಡುಬಂದಿದ್ದವು. 2021ರಲ್ಲಿ 17 ಪ್ರಕರಣ ಪತ್ತೆಯಾಗಿದ್ದು, 1 ಸಾವು ಸಂಭವಿಸಿತ್ತು. ಕಾಯಿಲೆಗೆ ಪರ್ಯಾಯ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಸರ್ಕಾರ 2019ರ ಬಜೆಟ್​ನಲ್ಲಿ 5 ಕೋಟಿ ರೂ. ಮಂಜೂರು ಮಾಡಿದೆ. ಐಎಎಚ್​ವಿಬಿಯಲ್ಲಿ ಹೊಸ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆ ಇನ್ನೂ ನಡೆದಿದೆ.

    ಉ.ಕ. ಜಿಲ್ಲೆಗೆ ಬೇಕು 7900 ಡೋಸ್

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಶಿರಸಿ, ಕುಮಟಾ, ಅಂಕೋಲಾ, ಜೊಯಿಡಾ ಸೇರಿ 7 ತಾಲೂಕುಗಳ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 185 ಹಳ್ಳಿಗಳಲ್ಲಿ ಕೆಎಫ್​ಡಿ ಈವರೆಗೆ ಕಾಣಿಸಿಕೊಂಡಿದೆ. ಕಳೆದ ಬಾರಿ 79 ಸಾವಿರದಷ್ಟು ಡೋಸ್ ಲಸಿಕೆ ನೀಡಲಾಗಿತ್ತು. ಈ ಬಾರಿಯೂ ಲಸಿಕೆ ಪೂರೈಸುವಂತೆ ಹಲವು ತಿಂಗಳ ಹಿಂದೆಯೇ ಬೇಡಿಕೆ ಸಲ್ಲಿಸಲಾಗಿತ್ತು.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೆಎಫ್​ಡಿ ಪ್ರಕರಣ ದೃಢಪಟ್ಟಿಲ್ಲ. ಆದರೆ, ಸಿದ್ದಾಪುರ, ಹೊನ್ನಾವರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸಿದೆ. ಈ ಬಾರಿ ಲಸಿಕೆ ನೀಡದ ಕಾರಣ ನಾವು ನಿರಂತರ ನಿಗಾ ವಹಿಸಿದ್ದೇವೆ. ಕಾಯಿಲೆ ಹರಡಬಹುದಾದ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಉಣ್ಣೆ ನಿರೋಧಕ ಡಿಎಂಪಿ ತೈಲ ವಿತರಿಸಲಾಗುತ್ತಿದೆ. ಜಾನುವಾರುಗಳಿಗೆ ಉಣ್ಣೆ ನಿಯಂತ್ರಣದ ಬಗ್ಗೆ ಕ್ರಮ ವಹಿಸಲಾಗುತ್ತಿದೆ.
    | ಸತೀಶ ಶೇಟ್ ಕೆಎಫ್​ಡಿ ಉತ್ತರ ಕನ್ನಡ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts