More

    ಕಾಳಜಿಯೇ ಈ ಮಿನಿಸ್ಟರ್​ನ ಆಸ್ತಿ; ವಿಜಯವಾಣಿ ಸಿನಿಮಾ ವಿಮರ್ಶೆ

    ಚಿತ್ರ: ಹೋಮ್ ಮಿನಿಸ್ಟರ್

    ನಿರ್ದೇಶನ: ಸುಜಯ್ ಶ್ರೀಹರಿ

    ನಿರ್ಮಾಣ: ಪೂರ್ಣಚಂದ್ರ ನಾಯ್ಡು

    ತಾರಾಗಣ: ಉಪೇಂದ್ರ, ವೇದಿಕಾ, ಸುಮನ್ ರಂಗನಾಥ್, ಲಾಸ್ಯಾ ನಾಗರಾಜ್, ಸಾಧು ಕೋಕಿಲ ಮತ್ತಿತರರು

    | ಚೇತನ್ ನಾಡಿಗೇರ್

    ರೇಣುಕಾ ಪ್ರಸಾದ್ ಅಲಿಯಾಸ್ ರೇಣುಕಾ ಯಾಕೆ ಹಾಗೆ? ಅಂತ ಎಲ್ಲರಿಗೂ ಕುತೂಹಲ. ಅವನ ಹೆಂಡತಿ ಒಂದು ಕಡೆ ಕಷ್ಟಪಟ್ಟು ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ, ಅವನು ಮಾತ್ರ ಮಗಳ ಯೋಗಕ್ಷೇಮ ನೋಡಿಕೊಳ್ಳುತ್ತಾ, ಅಪಾರ್ಟ್​ವೆುಂಟ್​ನ ಹೆಂಗಸರ ಜತೆಗೆ ಹರಟೆ ಹೊಡೆಯುತ್ತಾ, ಮನೆಕೆಲಸಗಳನ್ನು ಮಾಡಿಕೊಂಡು ಆರಾಮಾಗಿರುತ್ತಾನೆ. ಒಬ್ಬ ಗಂಡಸು ಜವಾಬ್ದಾರಿಗಳನ್ನು ಬದಿಗಿಟ್ಟು, ಈ ರೀತಿ ಹೆಂಡತಿಯ ದುಡಿಮೆಯಲ್ಲಿ ಬದುಕುವುದನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ನೀನ್ಯಾಕೆ ಹೀಗೆ ಎಂದು ಅವನನ್ನು ಪ್ರಶ್ನಿಸಿದರೆ, ‘ಅವಳು ಭೂಮಿ ತರಹ. ಯಾವಾಗಲೂ ತಿರುಗುತ್ತಿರುತ್ತಾಳೆ. ನಾನು ಸೂರ್ಯನ ತರಹ. ನಿಂತಲ್ಲೇ ಕೆಲಸ ಮಾಡುತ್ತಿರುತ್ತೇನಿ’ ಎಂದು ಬಾಯಿ ಮುಚ್ಚಿಸುತ್ತಾನೆ. ಇಷ್ಟಕ್ಕೂ ಅವನು ಯಾಕೆ ಹೊರಗೆ ಹೋಗಿ ಕೆಲಸ ಮಾಡುವುದಿಲ್ಲ? ಹೆಂಡತಿಗೆ ಜವಾಬ್ದಾರಿ ಕೊಟ್ಟು, ಅವನ್ಯಾಕೆ ಮನೆ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ? ಎಂಬ ಪ್ರಶ್ನೆಗೆ, ಕೊನೆಯ 20 ನಿಮಿಷಗಳಲ್ಲಿ ಉತ್ತರವಿದೆ.

    ಹೆಂಡತಿ ಕೆಲಸ ಮಾಡಿ, ಗಂಡ ಮತ್ತು ಕುಟುಂಬವನ್ನು ಸಾಕುವ ಕಥೆಗಳು ಸಾಕಷ್ಟು ಬಂದಿವೆ. ಆದರೆ, ‘ಹೋಮ್ ಮಿನಿಸ್ಟರ್’ ವಿಭಿನ್ನವಾಗುವುದು ಹಿಂದಿರುವ ಕಾಳಜಿಗಾಗಿ. ಇಲ್ಲಿ ಯಾವ ಕಾರಣಕ್ಕೆ ರೇಣುಕಾ ಪ್ರಸಾದ್ ಆ ರೀತಿ ಮಾಡುತ್ತಿರುತ್ತಾನೆ ಎನ್ನುವುದರ ಮೇಲೆ ಇಡೀ ಚಿತ್ರ ನಿಂತಿದೆ ಮತ್ತು ಆ ಕಾರಣ ಕೊನೆಯಲ್ಲಿ ಗೊತ್ತಾಗುತ್ತದೆ. ಆ ಒಂದಿಷ್ಟು ನಿಮಿಷಗಳು ಭಾವುಕವಾಗಿರುವುದಷ್ಟೇ ಅಲ್ಲ, ಗಂಟಲು ಉಬ್ಬಿಬರುವಂತಾಗುತ್ತದೆ. ಆ ಸಂದೇಶವಾಗಲೀ, ಕಾಳಜಿಯಾಗಲೀ ಖುಷಿಯಾಗಿಸುತ್ತದೆ.

    ಆದರೆ, ಇದನ್ನೇ ಇಡೀ ಚಿತ್ರಕ್ಕೆ ಹೇಳುವುದು ಕಷ್ಟ. ಮೊದಲಾರ್ಧ ವೇಗವಿದೆಯಾದರೂ, ಕ್ರಮೇಣ ಅದು ಕಡಿಮೆಯಾಗುತ್ತದೆ. ಕೆಟ್ಟ ಕಾಮಿಡಿ, ಪಾತ್ರಗಳು ಮತ್ತು ಕೆಲವು ದೃಶ್ಯಗಳು ಚಿತ್ರದ ವೇಗವನ್ನಷ್ಟೇ ಅಲ್ಲ, ಘನತೆಯನ್ನೂ ಕಡಿಮೆ ಮಾಡುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಚಿತ್ರಕಥೆಯ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನಹರಿಸಬಹುದಿತ್ತು. ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಈ ಭಾಗವನ್ನು ಸಹಿಸಿಕೊಂಡರೆ, ಚಿತ್ರ ವಿಭಿನ್ನವೆನಿಸುತ್ತದೆ. ಇಡೀ ಚಿತ್ರ ಉಪೇಂದ್ರ ಅವರ ಮೇಲಿದೆ ಮತ್ತು ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಪಾತ್ರದ ಹಲವು ಮಜಲುಗಳನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ವೇದಿಕಾ ಸಹ ಪೈಪೋಟಿಯ ಅಭಿನಯ ನೀಡಿದ್ದಾರೆ. ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ಅವಿನಾಶ್, ತಾನ್ಯಾ ಹೋಪ್, ಲಾಸ್ಯಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಗಿಬ್ರಾನ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿಕೊಡುತ್ತವೆ.

    ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts