ಯು.ಎಸ್. ಪಾಟೀಲ ದಾಂಡೇಲಿ
ಸುರಕ್ಷತಾ ಕ್ರಮ ವಹಿಸದೆ ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಲೈಫ್ ಜಾಕೆಟ್ ಇಲ್ಲದೆ ಪ್ರವಾಸಿಗರು ಸ್ಟೀಲ್ ವಾಟರ್ ಬೋಟಿಂಗ್ನಲ್ಲಿ ಪಾಲ್ಗೊಂಡ ಫೋಟೋ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕೋವಿಡ್ ಲಾಕ್ಡೌನ್ ನಂತರ ಪ್ರವಾಸಿ ಚಟುವಟಿಕೆ ಕ್ರಮೇಣ ಗರಿಗೆದರುತ್ತಿದೆ. ರಾಜ್ಯ, ಹೊರ ರಾಜ್ಯಗಳ ಸಾಕಷ್ಟು ಪ್ರವಾಸಿಗರು ದಾಂಡೇಲಿಗೆ ಲಗ್ಗೆ ಇಡುತ್ತಿದ್ದಾರೆ. ಇಲ್ಲಿನ ತಂಪು ಕಪ್ಪು ನೀರಿನ ಕಾಳಿ ನದಿಯ ನೀರು ನೋಡಿ ಪುಳಕಿತರಾಗುತ್ತಾರೆ. ಸುರಕ್ಷತೆಯ ಬಗ್ಗೆ ಲೆಕ್ಕಿಸದೆ ರ್ಯಾಫ್ಟಿಂಗ್, ಕಯಾಕಿಂಗ್, ಬೋಟಿಂಗ್ ಮುಂತಾದ ಜಲಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗೆ ಭೂಮ್ ಸಿಕ್ಕಿದೆ ಎಂಬುದೇನೋ ಸರಿ. ಆದರೆ, ಸುರಕ್ಷತೆಯ ಪ್ರಶ್ನೆ ಕಾಡಿದೆ. ಈ ಹಿಂದೆ ಎರಡು ಅವಘಡಗಳು ಸಂಭವಿಸಿದ್ದವು. ಸುರಕ್ಷತೆ ಇಲ್ಲದೆ ಪ್ರವಾಸಿ ಚಟುವಟಿಕೆ ಕೈಗೊಂಡರೆ ಮತ್ತೆ ಅಂಥ ಅವಘಡ ಘಟಿಸಬಹುದು ಎಂಬ ಆತಂಕ ಪ್ರಜ್ಞಾವಂತರದ್ದು.
ನಿಯಮ ಏನು?: ನಿಯಮಾನುಸಾರ 16 ಅಡಿಯ ರ್ಯಾಫ್ಟ್ನಲ್ಲಿ 8 ಪ್ರವಾಸಿಗರು ಮತ್ತು ಒಬ್ಬ ಗೈಡ್, 12 ಅಡಿ ರ್ಯಾಫ್ಟ್ನಲ್ಲಿ 6 ಪ್ರವಾಸಿಗರು ಮತ್ತು ಒಬ್ಬ ಗೈಡ್ ಪ್ರಯಾಣಿಸಲು ಅವಕಾಶವಿದೆ. ಆದರೆ, ಈ ಮಿತಿಗಿಂತ ಹೆಚ್ಚಿನ ಜನರನ್ನು ಕೊಂಡೊಯ್ಯಲಾಗುತ್ತಿದೆ ಎಂಬ ಆರೋಪವಿದೆ. ದಾಂಡೇಲಿಯಲ್ಲಿ 5ರಿಂದ 6 ರೆಸಾರ್ಟ್ಗಳು ರ್ಯಾಫ್ಟಿಂಗ್ ಚಟುವಟಿಕೆ ಕೈಗೊಳ್ಳುತ್ತಿವೆ. 50ರಿಂದ 60 ರ್ಯಾಫ್ಟ್ಗಳಿವೆ. 1 ಕಿಮೀ ಸಂಚರಿಸುವ ಶಾರ್ಟ್ ರ್ಯಾಫ್ಟ್, 4 ಕಿಮೀ ಸಂಚರಿಸುವ ಮಿಡ್ ರ್ಯಾಫ್ಟ್ ಹಾಗೂ 11 ಕಿಮೀ ತೆರಳುವ ಲಾಂಗ್ ರ್ಯಾಫ್ಟ್ ಪ್ಯಾಕೇಜ್ಗಳಿವೆ. ಮಿಡ್ ರ್ಯಾಫ್ಟ್ನಲ್ಲಿ ಕೆಲವು ರೆಸಾರ್ಟ್ನವರು ಅನುಮತಿ ಪಡೆಯದೆ ಜಲಸಾಹಸ ಚಟುವಟಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಇಲ್ಲೇ ಪ್ರಾರಂಭಿಸಲಿ: ಪ್ರವಾಸಿಗನ ಜೀವ ರಕ್ಷಣೆ ಕೌಶಲ ಕುರಿತು ಕೇಂದ್ರ ಸರ್ಕಾರದ ಅನುಮತಿ ಪಡೆದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ (ಎನ್ಐಡಬ್ಲುಎಸ್ )ವಿಶೇಷ ತರಬೇತಿ ನೀಡುತ್ತದೆ. ಸದ್ಯ ಗೋವಾದಲ್ಲಿ ಮಾತ್ರ ಈ ತರಬೇತಿ ಕೇಂದ್ರವಿದೆ. ಇದನ್ನು ದಾಂಡೇಲಿಯಲ್ಲಿ ಸ್ಥಾಪಿಸಬೇಕು. ಇದರಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದು ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯ ಪ್ರವಾಸೋದ್ಯಮಿಗಳ ಆಗ್ರಹ.
ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು?: ದಾಂಡೇಲಿ ಹಾಗೂ ಜೊಯಿಡಾ ಭಾಗದಲ್ಲಿ ಸಾಕಷ್ಟು ಹೋಂ ಸ್ಟೇ ಹಾಗೂ ರೆಸಾರ್ಟ್ಗಳು ತಲೆ ಎತ್ತುತ್ತಿವೆ. ಜಿಲ್ಲೆಯ 147 ಹೋಂ ಸ್ಟೇಗಳ ಪೈಕಿ 60 ಕ್ಕೂ ಅಧಿಕ ದಾಂಡೇಲಿ ಹಾಗೂ ಜೊಯಿಡಾ ಭಾಗದಲ್ಲೇ ಇವೆ. ಅರಣ್ಯ ಭಾಗದಲ್ಲಿ ಸ್ವಂತ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಅದಕ್ಕೆ ರಸ್ತೆ ಹಾಗೂ ಸುತ್ತಲಿನ ಕಾಡಿನ ಪ್ರದೇಶಗಳಲ್ಲಿ ಹಸ್ತಕ್ಷೇಪವನ್ನು ಇವುಗಳು ಮಾಡುತ್ತಿವೆ. ಸಾಕಷ್ಟು ಅಕ್ರಮ ಹೋಂ ಸ್ಟೇಗಳೂ ಇವೆ. ಸಂರಕ್ಷಣೆ ಕುರಿತು ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳನ್ನು ಕೇಳಿದರೆ, ಅರಣ್ಯ ಇಲಾಖೆ ಅಧಿಕಾರಿಗಳತ್ತ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಪ್ರವಾಸೋದ್ಯಮ ಇಲಾಖೆಗಳತ್ತ ಬೊಟ್ಟು ತೋರಿಸುತ್ತಿದ್ದಾರೆ. ಹಾಗಾದರೆ, ಇವುಗಳನ್ನು ನಿಯಂತ್ರಿಸುವವರ್ಯಾರು? ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎಂಬ ಪ್ರಶ್ನೆ ಮೂಡಿದೆ. ಜಿಲ್ಲಾಧಿಕಾರಿ ಸ್ವತಃ ಸಭೆ ಮಾಡಿ ಅಥವಾ ಆಸಕ್ತಿ ತೋರಿ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ದಾಂಡೇಲಿ – ಜೊಯಿಡಾ ಭಾಗದಲ್ಲಿ ಕಾಳಿ ನದಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಮುಂದುವರಿದರೆ ಜಲಕ್ರೀಡೆ ಮತ್ತು ಹೋಂ ಸ್ಟೇ ರೆಸಾರ್ಟ್ಗಳ ಅನುಮತಿಯನ್ನೇ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ.
| ಎಸ್. ಪುರುಷೋತ್ತಮ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ
ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಸುರಕ್ಷತೆ ಕಡೆಗಣಿಸುವ ಪ್ರವಾಸೋದ್ಯಮಿಗಳ ವಿರುದ್ಧ ಕ್ರಮ ವಹಿಸುವ ಬಗ್ಗೆ ಮತ್ತು ತಮ್ಮ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಪ್ರವಾಸಿಗರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಎಲ್ಲ ಹೋಂ ಸ್ಟೇಗಳ ನಿಯಮ ಪಾಲನೆ ಬಗ್ಗೆ ಮರು ಪರಿಶೀಲನೆಗೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗಿದೆ.
| ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ