More

    ಶ್ರಮಿಕ್​ ರೈಲಿನಲ್ಲಿ ಸೀಟು ಸಿಕ್ಕಿಲ್ಲವೆಂದು ಬೇಸತ್ತ ಕಾರ್ಮಿಕ ಕಾರು ಷೋರೂಂಗೆ ಹೋದದ್ದೇಕೆ?

    ಘಾಜಿಯಾಬಾದ್​: ಲಾಕ್​ಡೌನ್​ ಹಿನ್ನೆಲೆಯಲ್ಲಿ ಅನೇಕ ಕಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ತವರೂರಿಗೆ ಕಳುಹಿಸಿರುವ ಸಂಬಂಧ ಇದಾಗಲೇ ಕೇಂದ್ರ ಸರ್ಕಾರ ಹಲವಾರು ಕಡೆಗಳಿಂದ ಶ್ರಮಿಕ್​ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ.

    ಆದರೆ ಕೆಲವೊಂದು ಊರುಗಳಿಂದ ಎಷ್ಟೇ ರೈಲಿನ ಅನುಕೂಲ ಇದ್ದರೂ, ಅಲ್ಲಿನ ವಲಸೆ ಕಾರ್ಮಿಕರಿಗೆ ಅದು ಸಾಕಾಗುತ್ತಲೇ ಇಲ್ಲ. ರೈಲುಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವ ಕಾರಣ, ಸೀಟು ದೊರಕಿಸಿಕೊಳ್ಳಲು ಅನೇಕ ದಿನ ಕಾಯುವ ಪರಿಸ್ಥಿತಿ ಉಂಟಾಗಿದೆ.

    ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿಯೂ ನಡೆದಿದೆ. ಆದರೆ ಇಲ್ಲಿ ನಡೆದಿರುವುದು ಮಾತ್ರ ಸ್ವಲ್ಪ ವಿಭಿನ್ನ ಘಟನೆ.

    ಇದನ್ನೂ ಓದಿ: ಸಾಮಾನ್ಯ ಗೃಹಿಣಿ ರಾತ್ರೋರಾತ್ರಿ ಆದ್ಳು ವಿಶ್ವದ ಶ್ರೀಮಂತ ಮಹಿಳೆ: ಕಾರಣ ಮಾತ್ರ ಕೇಳಲೇಬೇಡಿ!

    ಅದೇನೆಂದರೆ, ಗೋರಖ್‌ಪುರದ ಪಿಪಿ ಗಂಜ್‌ನಲ್ಲಿರುವ ಕೈಥೋಲಿಯಾ ಗ್ರಾಮದ ನಿವಾಸಿ, ಲಾಲನ್ ಪೇಂಟರ್​ ಕೆಲಸಗಾರ. ಈತ ತನ್ನೂರಿನಿಂದ ಸುಮಾರು 280 ಕಿ.ಮೀ ದೂರ ಇರುವ ಘಾಜಿಯಾಬಾದ್​ಗೆ ಪೇಂಟಿಂಗ್​ ಕೆಲಸದ ನಿಮಿತ್ತ ಹೋಗಿದ್ದ. ಆದರೆ ಅದೇ ವೇಳೆಗೆ ಲಾಕ್​ಡೌನ್​ ಘೋಷಣೆಯಾಯಿತು. ಈ ಹಿನ್ನೆಲೆಯಲ್ಲಿ ಆತ ತನ್ನೂರಿಗೆ ವಾಪಸಾಗಲು ಸಾಧ್ಯವಾಗಲಿಲ್ಲ.

    ನಂತರ ಲಾಕ್​ಡೌನ್​ ಮುಗಿದ ಮೇಲೆ ಶ್ರಮಿಕ್​ ರೈಲನ್ನು ಸರ್ಕಾರ ಪ್ರಾರಂಭಿಸಿತು. ಘಾಜಿಯಾಬಾದ್​ನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವ ಹಿನ್ನೆಲೆಯಲ್ಲಿ, ಲಾಲನ್​ಗೆ ಸೀಟು ಸಿಗಲೇ ಇಲ್ಲ. ಮೂರು ದಿನ ಕಾದರೂ ಸೀಟು ಸಿಗಲಿಲ್ಲ. ಇನ್ನು ತನ್ನೂರಿಗೆ ಹೋಗುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಲಾಲನ್​ ಬೇಸತ್ತು ಹೋದ.

    ಕೊನೆಗೆ ಸಾಕಷ್ಟು ವಿಚಾರ ಮಾಡಿದ ನಂತರ ಬ್ಯಾಂಕ್​ಗೆ ಹೋಗಿ ಅಲ್ಲಿಂದ ತಾನು ಸಂಪಾದನೆ ಮಾಡಿಟ್ಟಿದ್ದ 1.9ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಸೀದಾ ಕಾರುಷೋರೂಂನತ್ತ ಹೆಜ್ಜೆ ಹಾಕಿದ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ 46 ಉಗ್ರರ ಹೊಡೆದುರುಳಿಸಿದ ಸೇನೆ: ಇಂದು ಮೂವರ ಹತ್ಯೆ

    ಅಷ್ಟಕ್ಕೂ ಈತ ಕಾರುಷೋರೂಂಗೆ ಹೋದದ್ದು ಸೆಕೆಂಡ್​ ಹ್ಯಾಂಡ್​ ಕಾರು ಖರೀದಿಗೆ. ರೈಲಿನಲ್ಲಿ ಸೀಟು ಸಿಗದ ಕಾರಣ, ಕಾರಿನಲ್ಲಿಯೇ ಊರಿಗೆ ಹೋಗುವ ನಿರ್ಧಾರ ಮಾಡಿದ ಲಾಲನ್​, ಅಲ್ಲಿ ಒಂದೂವರೆ ಲಕ್ಷ ರೂಪಾಯಿಗೆ ಸೆಕೆಂಡ್​ ಹ್ಯಾಂಡ್​ ಕಾರು ಖರೀದಿಸಿ ಅದರಲ್ಲಿ ತನ್ನೂರಿಗೆ ಹೋಗಿದ್ದಾನೆ. 14 ಗಂಟೆಗಳಲ್ಲಿ ಊರು ತಲುಪಿದ್ದಾನೆ.

    ನಂತರ ಮಾಧ್ಯಮದವರ ಜತೆ ಮಾತನಾಡಿದ ಆತ, ನಾನು ನನ್ನ ದುಡಿತದ ಬಹುಪಾಲನ್ನು ಕಾರಿಗಾಗಿ ಖರ್ಚು ಮಾಡಿದೆ. ಆದರೆ ನನ್ನ ಕುಟುಂಬವನ್ನು ಸೇರಲು ಇದಕ್ಕಿಂತ ಬೇರೆ ದಾರಿ ಇರಲಿಲ್ಲ. ಬಸ್ಸುಗಳನ್ನು ಬಿಟ್ಟಿದ್ದರೂ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು ಎಂದು ಕಾರನ್ನು ಖರೀದಿಸುವ ನಿರ್ಧಾರಕ್ಕೆ ಬಂದೆ. ಆದ್ದರಿಂದ ಸುರಕ್ಷಿತವಾಗಿ ಕುಟುಂಬವನ್ನು ಸೇರಿರುವ ತೃಪ್ತಿ ನನಗಿದೆ. ಇಲ್ಲಿಯೇ ಕೆಲಸ ಹುಡುಕುತ್ತೇನೆ. ವಾಪಸ್​ ಘಾಜಿಯಾಬಾದ್​ಗೆ ಹೋಗಲಾರೆ. ಗೋರಖ್​ಪುರದಲ್ಲಿಯೇ ಕೆಲಸ ಸಿಗುವ ಭರವಸೆ ಇದೆ ಎಂದಿದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts