More

    ಆರ್‌ಸಿಬಿಗೆ ಇಂದು ಸನ್‌ರೈಸರ್ಸ್‌ ಸವಾಲು; ಯಾರ ಗೆಲುವಿನ ಓಟಕ್ಕೆ ಬೀಳುತ್ತೇ ಬ್ರೇಕ್?

    ಮುಂಬೈ: ಭರ್ಜರಿ ಗೆಲುವಿನ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-15ರಲ್ಲಿ ಶನಿವಾರದ 2ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಟೂರ್ನಿಯಲ್ಲಿ ಮಿಂಚಿನ ವೇಗದ ದಾಳಿಯ ಮೂಲಕ ಗಮನಸೆಳೆದಿರುವ ಜಮ್ಮು-ಕಾಶ್ಮೀರದ ಉಮ್ರಾನ್ ಮಲಿಕ್ ಅವರ ಸವಾಲನ್ನು ಆರ್‌ಸಿಬಿ ತಂಡದ ಬ್ಯಾಟಿಂಗ್ ಪಡೆ ಯಾವ ರೀತಿ ಎದುರಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

    ಮೊದಲ ಪಂದ್ಯದಲ್ಲಿ ಸೋತ ಬಳಿಕ ಹ್ಯಾಟ್ರಿಕ್ ಜಯದೊಂದಿಗೆ ಬೀಗಿದ್ದ ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ಸೋತ ಬಳಿಕ ಸತತ 2 ಜಯ ಸಾಧಿಸಿ ಮತ್ತೆ ಹ್ಯಾಟ್ರಿಕ್ ಗೆಲುವಿನತ್ತ ಕಣ್ಣಿಟ್ಟಿದೆ. ಅತ್ತ ಸನ್‌ರೈಸರ್ಸ್‌ ತಂಡವೂ ಮೊದಲೆರಡು ಪಂದ್ಯ ಸೋತ ಬಳಿಕ ಸತತ 4 ಜಯ ಸಾಧಿಸಿ ಬೀಗಿದೆ. ಆದರೆ ಈ ಪಂದ್ಯದಲ್ಲಿ ಒಂದು ತಂಡ ಗೆಲುವಿನ ಲಯ ತಪ್ಪಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್‌ಸಿಬಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ. ಸನ್‌ರೈಸರ್ಸ್‌ ಕೂಡ ಸತತ 5ನೇ ಜಯ ಕಂಡರೆ ಅಗ್ರ 4ರೊಳಗೆ ಕಾಣಿಸಿಕೊಳ್ಳಲಿದೆ.

    ಲಯದಲ್ಲಿದೆ ಪ್ಲೆಸಿಸ್ ಪಡೆ
    ಫಾಫ್​ ಡು ಪ್ಲೆಸಿಸ್ ಕಳೆದ ಪಂದ್ಯದಲ್ಲಿ 96 ರನ್ ಸಿಡಿಸಿ ಲಯಕ್ಕೆ ಮರಳಿದ ಬಳಿಕ ಆರ್‌ಸಿಬಿ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ. ದಿನೇಶ್ ಕಾರ್ತಿಕ್ ಈಗಾಗಲೆ ತಂಡದಲ್ಲಿ ಫಿನಿಷರ್-ಹಿಟ್ಟರ್ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬರುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಸುಯಶ್ ಪ್ರಭುದೇಸಾಯಿ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ರನ್‌ಬರ ಮುಂದುವರಿದಿದ್ದರೆ, ಯುವ ಆರಂಭಿಕ ಅನುಜ್ ರಾವತ್ ಇದುವರೆಗೆ ಒಂದು ಪಂದ್ಯದಲ್ಲಷ್ಟೇ ಮಿಂಚಿದ್ದಾರೆ. ಜೋಶ್ ಹ್ಯಾಸಲ್‌ವುಡ್ ಸೇರ್ಪಡೆಯ ಬಳಿಕ ಆರ್‌ಸಿಬಿ ಬೌಲಿಂಗ್ ವಿಭಾಗವೂ ಬಲ ಪಡೆದಿದ್ದು, ಹರ್ಷಲ್ ಪಟೇಲ್, ಸಿರಾಜ್ ಮತ್ತು ಹಸರಂಗ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಸ್ಪೀಡ್ ಚಾಲೆಂಜ್
    ಗಂಟೆಗೆ 145ರಿಂದ 152 ಕಿಮೀ ವೇಗದ ಎಸೆತಗಳ ಮೂಲಕ 22 ವರ್ಷದ ಉಮ್ರಾನ್ ಮಲಿಕ್ ಬ್ಯಾಟರ್‌ಗಳಿಗೆ ದುಃಸ್ವಪ್ನ ಎನಿಸಿದ್ದಾರೆ. ಅನುಭವಿ ಭುವನೇಶ್ವರ್ ಮತ್ತು ಎಡಗೈ ವೇಗಿ ಟಿ. ನಟರಾಜನ್ ಜತೆಗೂಡಿ ಅವರು ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ಕಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೋ ಜಾನ್ಸೆನ್ 4ನೇ ವೇಗಿಯಾಗಿದ್ದು, ವೇಗದ ಬೌಲಿಂಗ್ ವಿಭಾಗವೇ ಕಳೆದ 4 ಪಂದ್ಯಗಳಲ್ಲಿ ಸನ್‌ರೈಸರ್ಸ್‌ಗೆ ಬಲ ತುಂಬಿದೆ. ಗಾಯಾಳು ವಾಷಿಂಗ್ಟನ್ ಸುಂದರ್ ಗೈರಿನಲ್ಲಿ ಕನ್ನಡಿಗ ಜೆ. ಸುಚಿತ್ ಸ್ಪಿನ್ ಹೊಣೆಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದಾರೆ.

    ಮುಖಾಮುಖಿ: 19
    ಆರ್‌ಸಿಬಿ: 8
    ಸನ್‌ರೈಸರ್ಸ್‌: 11
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ನ್ಯೂಸ್:

    ಆರ್‌ಸಿಬಿ: ನಿರೀಕ್ಷಿತ ನಿರ್ವಹಣೆ ತೋರದಿರುವ ಅನುಜ್ ರಾವತ್ ಬದಲಿಗೆ ರಜತ್ ಪಟಿದಾರ್ ಸ್ಥಾನ ಪಡೆಯಬಹುದು ಅಥವಾ ರನ್‌ಬರದ ನಡುವೆಯೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಬಡ್ತಿ ಪಡೆದರೂ ಅಚ್ಚರಿ ಇಲ್ಲ.

    ಸನ್‌ರೈಸರ್ಸ್‌: ವಾಷಿಂಗ್ಟನ್ ಸುಂದರ್ ಗಾಯದಿಂದ ಚೇತರಿಸಿಕೊಳ್ಳದ ಹೊರತಾಗಿ, ಗೆಲುವಿನ ಲಯದಲ್ಲಿರುವ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ. ವಾಷಿಂಗ್ಟನ್ ಫಿಟ್ ಆದರೆ ಜೆ. ಸುಚಿತ್ ಹೊರಗುಳಿಯಬೇಕಾಗುತ್ತದೆ.

    ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಶೈನಿಂಗ್; ಸ್ಕ್ವಾಷ್‌ನಲ್ಲಿ ಪತ್ನಿ ದೀಪಿಕಾ ಭರ್ಜರಿ ಯಶಸ್ಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts