More

    ಕರೊನಾ ತೊಲಗುವವರೆಗೂ ಇಲ್ಲಿ ಛತ್ರಿಯದ್ದೇ ಕಾರುಬಾರು! ಇದರ ಗುಟ್ಟು ಬಲ್ಲಿರಾ?

    ಆಲಪ್ಪುಳ (ಕೇರಳ): ಕೇರಳದ ಆಲಪ್ಪುಳ ನಗರದ ತುಂಬೆಲ್ಲಾ ಈಗ ಬಣ್ಣ ಬಣ್ಣದ ಛತ್ರಿಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಅಲ್ಲಿ ಕೊಡೆ ಹಿಡಿದವರೇ. ಹಾಗೆಂದು ಇವರು ಛತ್ರಿ ಹಿಡಿದುಕೊಂಡಿದ್ದು, ಮಳೆಗಾಗಲಿ ಅಥವಾ ಬಿಸಿಲಿಗಾಗಲಿ ಅಲ್ಲವೇ ಅಲ್ಲ. ಹಾಗಿದ್ದರೆ ಅದ್ಯಾಕೆ?

    ಅಲ್ಲೇ ಇರುವುದು ಕುತೂಹಲ. ಛತ್ರಿ ಹಿಡಿದಿರುವುದಕ್ಕೆ ಕಾರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು! ಹೌದು. ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತು. ಕರೊನಾ ಸೋಂಕು ತಗುಲಬಾರದು ಎಂದರೆ ಸೋಷಿಯಲ್​ ಡಿಸ್​ಟೆನ್ಸ್​ ಕಾಯ್ದುಕೊಳ್ಳುವುದು ಅತಿ ಮುಖ್ಯ. ಆದರೆ ಏನೇ ಅಂದುಕೊಂಡರೂ ಇದನ್ನು ಕೆಲವು ಸಮಯದಲ್ಲಿ ಪಾಲನೆ ಮಾಡುವುದು ಕಷ್ಟವಾಗಿಬಿಡುತ್ತದೆ. ಇದೇ ಕಾರಣಕ್ಕೆ, ಛತ್ರಿ ಹಿಡಿದುಕೊಂಡರೆ ಹೇಗೆ ಎಂಬ ಯೋಚನೆ ಬಂದಿದೆ ಈ ನಗರಿಗರಿಗೆ.

    ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳನ್ನು ಬಿಡಿಸಿಕೊಂಡು ನಿಲ್ಲುವುದರಿಂದ ಸೂಕ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳು ಸಾಧ್ಯ. ಅಂಗಡಿ ಅಥವಾ ಇನ್ನಾವುದೇ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಲ್​ಗಳನ್ನು ಹಾಕಿರಲಾಗುತ್ತದೆ. ಆದರೆ ತರಾತುರಿಯಲ್ಲಿ ಅದನ್ನು ಪಾಲನೆ ಮಾಡುವುದು ಕಷ್ಟವಾಗುತ್ತದೆ. ಇನ್ನು ಸ್ನೇಹಿತರು ಸಿಕ್ಕರಂತೂ ಮುಗಿದೇ ಹೋಯಿತು. ಅಂತರದ ಮಾತು ಬಲು ದೂರ. ಆದ್ದರಿಂದ ಇವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು.

    ಇಂಥದ್ದೊಂದು ಐಡಿಯಾದ ರೂವಾರಿ ಕೇರಳ ಹಣಕಾಸು ಸಚಿವರಾಗಿರುವ ಥಾಮಸ್ ಐಸಾಕ್. ಆಲಪ್ಪುಳದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಅಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹುಮುಖ್ಯವಾಗಿತ್ತು. ನಾನಾ ವಿಧವಾದ ನಿಯಮಗಳನ್ನು ತಂದರೂ ಅದು ಪಾಲನೆ ಆಗುತ್ತಿರಲಿಲ್ಲ. ಆದ್ದರಿಂದ ಛತ್ರಿಯ ಐಡಿಯಾ ಅವರು ಕೊಟ್ಟಿದ್ದಾರೆ.

    ಇಬ್ಬರು ವ್ಯಕ್ತಿಗಳು ಛತ್ರಿಗಳನ್ನು ಬಿಡಿಸಿಕೊಂಡು ನಿಂತರೆ ಅವರ ನಡುವೆ ಕನಿಷ್ಠ ಒಂದು ಮೀಟರ್​ ಅಂತರ ಸೃಷ್ಟಿಯಾಗುತ್ತದೆ. ಇದು ಜನರು ತಾವಾಗಿಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುತ್ತದೆ ಎನ್ನುತ್ತಾರೆ ಪಂಚಾಯತ್ ಅಧಿಕಾರಿ ರೀಮಾ.

    ಹೀಗಾಗಿ, ಜನರು ತಮ್ಮ ಮನೆಯಿಂದ ಹೊರಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಛತ್ರಿಗಳನ್ನು ಹಿಡಿದುಕೊಂಡೇ ಬರಬೇಕೆಂದು ಇಲ್ಲಿನ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ. ಇದರಿಂದ ಸೋಂಕಿನ ಪ್ರಮಾಣ ಕಡಿಮೆ ಆಗಬಹುದು ಎಂಬ ವಿಶ್ವಾಸವನ್ನು ಸಚಿವರು ಹೊಂದಿದ್ದಾರೆ. ಆದ್ದರಿಂದ ಕರೊನಾ ಮಹಾಮಾರಿ ಸಂಪೂರ್ಣ ತೊಲಗುವವರೆಗೂ ಛತ್ರಿಯನ್ನು ಇಲ್ಲಿ ಕಡ್ಡಾಯ ಮಾಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts