More

    ಸುವ್ಯವಸ್ಥಿತ ಪರ್ಯಾಯೋತ್ಸವಕ್ಕೆ ಕ್ರಮ: ಪೂರ್ವಭಾವಿ ಸಭೆಯಲ್ಲಿ ಸಚಿವ ಸುನೀಲ್ ಕುಮಾರ್ ಸೂಚನೆ

    ಉಡುಪಿ: ಪರ್ಯಾಯ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಜಿಲ್ಲಾಡಳಿತದಿಂದ ಮೂಲಸೌಕರ್ಯ ಹಾಗೂ ಸುವ್ಯಸ್ಥಿತ ಪರ್ಯಾಯೋತ್ಸವಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಭಾನುವಾರ ಜಿಪಂ ಸಭಾಂಗಣದಲ್ಲಿ ಕೃಷ್ಣ ಮಠದ ಪರ್ಯಾಯ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪರ್ಯಾಯ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ವಾಹನಗಳ ಸುಗಮ ಸಂಚಾರ, ನಿಲುಗಡೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಮುಖ್ಯಮಂತ್ರಿ ಜತೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

    ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ತ್ಯಾಜ್ಯ ವಿಲೇ ವಾಹನಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆಯಬಹುದು. ಹೆಚ್ಚುವರಿ ಶೌಚಗೃಹಗಳ ನಿರ್ಮಾಣ ಮಾಡಿ ನೀರಿನ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ರಸ್ತೆ ನಿರ್ಮಾಣ ಸೇರಿದಂತೆ ದುರಸ್ತಿ ಕಾರ್ಯಗಳನ್ನು ಜ.10 ರೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

    ಆಯ್ದ ಸ್ಥಳಗಳಲ್ಲಿ ಸಿಸಿಟಿವಿ: ಪೊಲೀಸ್ ಇಲಾಖೆ ವಾಹನಗಳ ಸುಗಮ ಸಂಚಾರ ಸೇರಿದಂತೆ ನಿಲುಗಡೆಗೆ ಸೂಕ್ತ ಸ್ಥಳಗಳನ್ನು ಗುರುತಿಸಿ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜನೆಗೊಳಿಸಬೇಕು. ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು ಎಂದು ಸೂಚನೆ ನೀಡಿದರು.

    ಪರ್ಯಾಯ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಟ್ಯಾಬ್ಲೋ ಸಿದ್ಧಪಡಿಸಿ ಭಾಗವಹಿಸಬೆೇಕು. ರಾಜ್ಯ ಹಾಗೂ ಹೊರರಾಜ್ಯದ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಉಡುಪಿ ಶಾಸಕ ಹಾಗೂ ಪರ್ಯಾಯ ಸಮಿತಿ ಗೌರವಾಧ್ಯಕ್ಷ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಒ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

    ಭಕ್ತರಿಗೆ ಕೋವಿಡ್ ಲಸಿಕೆ ಕಡ್ಡಾಯ: ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಮಾಸ್ಕ್ ಧಾರಣೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಚ್ಚರವಹಿಸಬೇಕು ಎಂದು ಸಚಿವ ಸುನೀಲ್ ಹೇಳಿದರು. ಕೋವಿಡ್ ಸಂದರ್ಭ ಜಿಲ್ಲಾಡಳಿತಕ್ಕೆ ವಿವಿಧ ದಾನಿಗಳು ಮತ್ತು ಸಂಘ ಸಂಸ್ಥೆಗಳು ನೀಡಿರುವ 11 ಆಂಬುಲೆನ್ಸ್‌ಗಳ ನಿರ್ವಹಣೆಯ ಜವಾಬ್ದಾರಿ ಜಿಲ್ಲೆಯ ವಿವಿಧ ಕೋ ಆಪರೇಟಿವ್ ಸೊಸೈಟಿಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts