More

    ಟಿಕೆಟ್ ಘೋಷಣೆ, ಹಂಪಿ ವಿರೂಪಾಕ್ಷೇಶ್ವರಗೆ ವಿಶೇಷ ಪೂಜೆ

    ಹೊಸಪೇಟೆ: ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಬುಧವಾರ ಐತಿಹಾಸಿಕ ಹಂಪಿಯ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ವಿರೂಪಾಕ್ಷೇಶ್ವರನ ದರ್ಶನ ಪಡೆದರು.

    ಬೆಳಗ್ಗೆ 7.30ಕ್ಕೆ ಹಂಪಿಗೆ ಆಗಮಿಸಿದ ಸಿದ್ಧಾರ್ಥ ಸಿಂಗ್, ತಂದೆ ಸಚಿವ ಆನಂದ ಸಿಂಗ್ ಜತೆಗೂಡಿ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಮಂತ್ರಗಳ ಪಠಣದೊಂದಿಗೆ ನದಿಯಲ್ಲಿ ಮಿಂದೆದ್ದ ಈರ್ವರೂ, ಮಂಗಳ ವಾದ್ಯಗಳೊಂದಿಗೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಐದು ಮಾದರಿಯ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಿದ್ಧಾರ್ಥ ಸಿಂಗ್ ಮಹಾಮಂಗಳಾರತಿ ಪಡೆದರು. ಸಚಿವ ಆನಂದ ಸಿಂಗ್ ಸಲಹೆಯಂತೆ ಅರ್ಚಕರು, ಸಿದ್ಧಾರ್ಥ ಸಿಂಗ್‌ಗೆ ಮಂತ್ರಾಕ್ಷತೆ ನೀಡಿ, ವಿಜಯ ತಿಲಕವಿಟ್ಟು ಆಶೀರ್ವದಿಸಿದರು.

    ನಮ್ಮ ಕೆಲಸಗಳೇ ನಮಗೆ ಶ್ರೀರಕ್ಷೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ ಸಿಂಗ್, ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಶಯದಂತೆ ಯುವಕರಿಗೆ ಪಕ್ಷದಿಂದ ಮನ್ನಣೆ ಸಿಕ್ಕಿದೆ. ಹೀಗಾಗಿ ಸಿದ್ಧಾರ್ಥ ಸಿಂಗ್‌ಗೆ ಟಿಕೆಟ್ ದೊರೆತಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿವೆ. ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ಗ್ರಾಮ ವಾಸ, ಪಟ್ಟಣ ವಾಸ, ನಗರ ವಾಸದ ಮೂಲಕ ಜನರ ಮನ ಗೆದ್ದಿದ್ದಾನೆ. ಜನತೆ ಕೂಡಾ ಸಿದ್ಧಾರ್ಥ ಸಿಂಗ್ ಆಯ್ಕೆ ಬಯಸಿದ್ದಾರೆ.

    ಇದನ್ನೂ ಓದಿ: ಪುತ್ರನಿಗಾಗಿ ಸಚಿವ ಆನಂದ ಸಿಂಗ್ ಕ್ಷೇತ್ರ ತ್ಯಾಗ

    ಸದ್ಯಕ್ಕೆ ನಾನು ಮತ್ಯಾವ ಕ್ಷೇತ್ರದ ಕುರಿತು ಯೋಚಿಸಿಲ್ಲ. ನನ್ನ ಅವಧಿಯಲ್ಲಿ ನೂತನ ಜಿಲ್ಲೆಯಾಗಿರುವ ವಿಜಯನಗರ ಸದ್ಯ ಅಂಬೆಗಾಲಿಡುತ್ತಿದೆ. ಸಿದ್ಧಾರ್ಥ ಸಿಂಗ್ ಆಯ್ಕೆಯಿಂದ ಜಿಲ್ಲೆಯ ಅಭಿವೃದ್ಧಿ ಚಿರತೆಯ ವೇಗ ಪಡೆಯಲಿದೆ. ಡಬಲ್‌ಇಂಜಿನ್ ಸರ್ಕಾರದಂತೆ ನಾನು ಸಿದ್ಧಾರ್ಥ ಸಿಂಗ್ ಜಿಲ್ಲೆಯ ಅಭಿವೃದ್ಧಿಯಲ್ಲಿ ತೊಡಗುತ್ತೇವೆ ಎಂದರು.
    ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ ಕುರಿತು ಪ್ರತಿಕ್ರಿಯಿಸಿದ ಆನಂದ್ ಸಿಂಗ್, ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದು ಹೇಳಿದರು.

    ವರಿಷ್ಠರ ಆಶಯ ಈಡೇರಿಸುತ್ತೇನೆ

    ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಮಾತನಾಡಿ, ಬಿಜೆಪಿ ಟಿಕೆಟ್ ದೊರೆಯುವ ನಿರೀಕ್ಷೆಯಿರಲಿಲ್ಲ. ಪಕ್ಷದ ವರಿಷ್ಟರು ನನಗೆ ಟಿಕೆಟ್ ನೀಡಿ ಚುನಾವಣಾ ಸ್ಪರ್ಧೆಗಿಳಿಸಿರುವುದು ಅಭಿನಂದನೀಯ. ನಾನು ಕಳೆದ ಒಂದೂವರೆ ವರ್ಷದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದೇನೆ. ಜನರ ಸಮಸ್ಯೆ, ಸವಾಲುಗಳನ್ನು ಅರಿತಿದ್ದೇನೆ. ತಂದೆ ಹಾಕಿಕೊಟ್ಟಿರುವ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಮೂಲಕ ಪಕ್ಷದ ವರಿಷ್ಠರ ಆಶಯ ಈಡೇರಿಸುತ್ತೇನೆ ಎಂದು ಹೇಳಿದರು.

    ಇದನ್ನೂ ಓದಿ: ಜನ ಪ್ರೀತಿ, ಗೌರವ ತೋರಿಸಿದ್ದಾರೆ.. ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ಧ; ಹೈಕಮಾಂಡ್​ಗೆ ಖಡಕ್ ಸಂದೇಶ ರವಾನಿಸಿದ ಜಗದೀಶ್ ಶೆಟ್ಟರ್

    ಬಿಜೆಪಿ ಮಂಡಲ ಅಧ್ಯಕ್ಷ ಕಾಸಟ್ಟಿ ಉಮಾಪತಿ, ನಗರಸಭೆ ಸದಸ್ಯರಾದ ಬಿ.ಜೀವರತ್ನಂ, ಪಕ್ಷದ ಪ್ರಮುಖರಾದ ಗುಜ್ಜಲ್ ಹನುಮೇಶಿ, ಹಂಪಿ ಗ್ರಾಪಂ ಮಾಜಿ ಅಧ್ಯಕ್ಷೆ ಸ್ವಾತಿ ಸಿಂಗ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts