More

    ರಟ್ಟಿಹಳ್ಳಿಯಲ್ಲಿ ಇನ್ನೂ ತೆರೆಯದ ಖಜಾನೆ

    ರಟ್ಟಿಹಳ್ಳಿ: ತಾಲೂಕು ಮಟ್ಟದಲ್ಲಿ ಖಜಾನೆ ಇಲಾಖೆ ಇರುವುದು ಅತ್ಯಗತ್ಯ. ಎಲ್ಲ ಸರ್ಕಾರಿ ನೌಕರರಿಗೆ, ನಿವೃತ್ತ ನೌಕರರಿಗೆ ಖಜಾನೆ ಮೂಲಕವೇ ಪ್ರತಿ ತಿಂಗಳ ವೇತನ, ನಿವೃತ್ತಿ ವೇತನ ಪಾವತಿಯಾಗುತ್ತದೆ. ಆದರೆ, ರಟ್ಟಿಹಳ್ಳಿ ತಾಲೂಕು ಘೊಷಣೆಯಾಗಿ ಮೂರು ವರ್ಷವಾದರೂ ಖಜಾನೆ ಹಿರೇಕೆರೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರತಿ ತಿಂಗಳು ನೌಕರರು, ವೃದ್ಧರು ಅಲೆದಾಡುವಂತಾಗಿದೆ.

    ರಟ್ಟಿಹಳ್ಳಿಯಲ್ಲಿ ತಾಲೂಕು ಕಚೇರಿ ಸೇರಿ, ವಿವಿಧ ಇಲಾಖೆ ಕಳೆದ 2 ವರ್ಷಗಳಿಂದ ವಿವಿಧೆಡೆ ಸೇವೆ ಆರಂಭಿಸಿದೆ. ಆದರೆ, ಎಲ್ಲ ಇಲಾಖೆಗಳಿಗೆ ಅಗತ್ಯವಾಗಿರುವ ಖಜಾನೆ ಇಲಾಖೆ ಮಾತ್ರ ಸ್ಥಾಪನೆ ಮಾಡದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

    ವರ್ಷವಾದರೂ ಪ್ರಾರಂಭವಾಗದ ಕಚೇರಿ: ರಟ್ಟಿಹಳ್ಳಿಯಲ್ಲಿ 2020 ಜನವರಿಯಲ್ಲಿ ಖಜಾನೆ ಇಲಾಖೆಗಾಗಿ ಪಟ್ಟಣದ ಭಗತ್​ಸಿಂಗ್ ವೃತ್ತದಲ್ಲಿನ ಶಿವ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಟ್ಟಡದ ಮೊದಲನೇ ಮಹಡಿಯನ್ನು ಕಚೇರಿಗಾಗಿ ಕಾಯ್ದಿರಿಸಲಾಗಿದೆ. ಹಂತಹಂತವಾಗಿ ಈ ಕಚೇರಿಗೆ ಅವಶ್ಯವಿರುವ ಪೀಠೋಪಕರಣಗಳು, 4-5 ಕಂಪ್ಯೂಟರ್​ಗಳು, ಬ್ಯಾಟರಿಗಳನ್ನು ಸಹ ಇಡಲಾಗಿದೆ. ಕಚೇರಿಯ ಪ್ರಾರಂಭಕ್ಕೆ ಅವಶ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಕಳೆದ 7 ತಿಂಗಳಿಂದ ಕಚೇರಿ ತೆರೆಯದ ಕಾರಣ ಪೂರೈಕೆ ಮಾಡಿರುವ ಎಲ್ಲ ಸಾಮಗ್ರಿಗಳು ಧೂಳು ತಿನ್ನುತ್ತಿವೆ.

    ಹಿರೇಕೆರೂರರಲ್ಲಿ ಪ್ರತ್ಯೇಕ ಸೇವೆ: ರಟ್ಟಿಹಳ್ಳಿಗೆ ತಾಲೂಕು ಖಜಾನೆ ಅಧಿಕಾರಿ, ಮುಖ್ಯ ಲೆಕ್ಕಿಗರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕ ಮತ್ತು ಡಿ ಗ್ರುಪ್ ಸೇರಿ ಒಟ್ಟು 5 ಹುದ್ದೆಗಳು ಮಂಜೂರಾಗಿವೆ. ಇವರೆಲ್ಲ ಹಿರೇಕೆರೂರು ತಾಲೂಕು ಕಚೇರಿಯಲ್ಲಿರುವ ಖಜಾನೆ ಇಲಾಖೆಯಲ್ಲಿ ಪ್ರತ್ಯೇಕವಾಗಿ ರಟ್ಟಿಹಳ್ಳಿ ತಾಲೂಕಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ರಟ್ಟಿಹಳ್ಳಿಯಲ್ಲಿ ಈಗಾಗಲೇ ಕಚೇರಿ ವ್ಯವಸ್ಥೆ ಮಾಡಿದ್ದರೂ ಖಜಾನೆ ಇಲಾಖೆಯನ್ನು ಸ್ಥಳಾಂತರ ಮಾಡದಿರುವುದು ನೌಕರರಲ್ಲಿ ಅಸಮಾಧಾನ ಉಂಟು ಮಾಡಿದೆ.

    ತಪ್ಪದ ಅಲೆದಾಟ: ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಸುಮಾರು 16 ಕಿ.ಮೀ. ಅಂತರವಿದ್ದು, ಪ್ರತಿ ತಿಂಗಳು ಸರ್ಕಾರಿ ಮತ್ತು ನಿವೃತ್ತ ನೌಕರರು ತಮ್ಮ ವೇತನಕ್ಕಾಗಿ ಹಿರೇಕೆರೂರಿಗೆ ಅಲೆದಾಡಬೇಕಿದೆ. ಸರ್ಕಾರದಿಂದ ಕೆಲವು ಯೋಜನೆಗಳಿಗೆ ನೀಡಲಾಗುವ ಅನುದಾನಗಳ ಮಾಹಿತಿಗಾಗಿ, ಭದ್ರತೆಯ ಸಾಮಗ್ರಿಗಳನ್ನು ಇಡಲು ಮತ್ತು ಕೆಲವು ಇಲಾಖೆಗಳ ಬ್ಯಾಂಕ್ ಚಲನ್ ತುಂಬಲು ನೌಕರರು ಹಿರೇಕೆರೂರಿಗೆ ಅಲೆಯುವುದು ತಪ್ಪುತ್ತಿಲ್ಲ.

    ರಟ್ಟಿಹಳ್ಳಿಯಲ್ಲಿ ಈಗಾಗಲೇ ಎಸ್​ಬಿಐ ಬ್ಯಾಂಕ್ ಇದೆ. ಪ್ರತಿ ತಿಂಗಳು ನಮ್ಮ ನಿವೃತ್ತ ವೇತನಕ್ಕಾಗಿ ಹಿರೇಕೆರೂರಿಗೆ ಹೋಗಬೇಕಾಗಿದೆ. ವೃದ್ಧರು ತಮಗೆ ಓಡಾಡಲು ತೊಂದರೆ ಇರುವದರಿಂದ ವೇತನ ಪಡೆಯಲು ಖಾಸಗಿ ವಾಹನಗಳ ಮೂಲಕ ಹಿರೇಕೆರೂರಿಗೆ ಆಗಮಿಸುತ್ತಿದ್ದಾರೆ. ರಟ್ಟಿಹಳ್ಳಿಯಲ್ಲಿ ಖಜಾನೆ ಇಲಾಖೆ ಪ್ರಾರಂಭವಾದರೆ ನಮಗೆ ಇಲ್ಲಿಯೇ ನಿವೃತ್ತ ವೇತನ ದೊರೆಯುತ್ತದೆ. ಇದರಿಂದ ವೃದ್ಧರಿಗೆ ಅನುಕೂಲವಾಗಲಿದೆ.
    | ಎನ್.ಸಿ.ಕಠಾರೆ, ನಿವೃತ್ತ ಪ್ರಾಚಾರ್ಯರು


    ರಟ್ಟಿಹಳ್ಳಿಯಲ್ಲಿ ಈಗಾಗಲೇ ಖಜಾನೆ ಇಲಾಖೆಗೆ ಕಚೇರಿಯನ್ನು ನಿಗದಿ ಮಾಡಿ ಅವಶ್ಯವಿರುವ ಸಾಮಗ್ರಿಗಳನ್ನು ಪೂರೈಸಲಾಗಿದೆ. ಕಚೇರಿಗೆ ಅವಶ್ಯವಿರುವ ಬಿ.ಎಸ್.ಎನ್.ಎಲ್. ಇಂಟರ್ನೆಟ್ ವ್ಯವಸ್ಥೆ ಮಾಡಬೇಕಾಗಿದೆ. ಕರೊನಾ ಹಾವಳಿಯ ಹಿನ್ನೆಲೆಯಿಂದಾಗಿ ಕಚೇರಿ ಪ್ರಾರಂಭ ವಿಳಂಬವಾಗಿದ್ದು, ಹಿರೇಕೆರೂರು ಖಜಾನೆ ಇಲಾಖೆಯಲ್ಲಿ ರಟ್ಟಿಹಳ್ಳಿಗೆ ಸಂಬಂದಿಸಿದಂತೆ ಪ್ರತ್ಯೇಕವಾಗಿ ಕೆಲಸ ಮಾಡಲಾಗುತ್ತಿದೆ. ಒಂದು ವಾರದಲ್ಲಿ ರಟ್ಟಿಹಳ್ಳಿಯಲ್ಲಿ ಕಚೇರಿಯನ್ನು ಪ್ರಾರಂಭಿಸಲಾಗುವುದು.
    | ಎಸ್.ಕೆ. ಕರೀಂಖಾನ್, ಹಿರೇಕೆರೂರು-ರಟ್ಟಿಹಳ್ಳಿ ತಾಲೂಕು ಖಜಾನೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts