More

    ಮೇಲ್ದರ್ಜೆಗೆ ಆರ್ಥಿಕ ಸಮಸ್ಯೆ

    ಬೆಳಗಾವಿ: ಅಪರಾಧ ಪ್ರಕರಣ ಕಡಿಮೆ ಸಂಖ್ಯೆಯಲ್ಲಿರುವುದು, ಆರ್ಥಿಕ ಸಮಸ್ಯೆ ಇನ್ನಿತರ ಕಾರಣಗಳಿಂದ ಜಿಲ್ಲೆಯಲ್ಲಿ ದಶಕ ಉರುಳಿದರೂ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಜತೆಗೆ ಇರುವ ಉಪ ಠಾಣೆಗಳಿಗೆ ಮೇಲ್ದರ್ಜೆ ಭಾಗ್ಯ ಸಹ ಕೂಡಿಬರುತ್ತಿಲ್ಲ.

    ಬೆಳಗಾವಿ ನಗರದ 5.2 ಲಕ್ಷ ಜನರಿಗಾಗಿ 16 ಠಾಣೆ, ಜಿಲ್ಲೆಯ 1,191 ಹಳ್ಳಿಯ 48.5 ಲಕ್ಷ ಜನರ ರಕ್ಷಣೆಗಾಗಿ 33 ಪೊಲೀಸ್ ಠಾಣೆ, 17 ಉಪ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಒಂದು ಠಾಣೆ ವ್ಯಾಪ್ತಿಗೆ 15-20 ಹಳ್ಳಿಗಳ ನಿರ್ವಹಣೆ ಜಬಾಬ್ದಾರಿ ಇರುವುದು ಅಚ್ಚರಿಯ ವಿಚಾರವಾದರೂ ವಾಸ್ತವ ಸಂಗತಿಯಾಗಿದೆ.

    ದೂರು ನೀಡಲು ದೂರ ಸಂಚಾರ: ಗ್ರಾಮೀಣ ಭಾಗದಲ್ಲಿ ಜನರು ದೂರು ನೀಡಲು 12 ರಿಂದ 18 ಕಿ.ಮೀ. ದೂರ ಕ್ರಮಿಸಬೇಕು. ಒಂದೊಂದು ಭಾರಿ ಠಾಣೆಯಲ್ಲಿ ಅಧಿಕಾರಿಗಳು ಇಲ್ಲದ ಕಾರಣ ಜನರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಗೋಕಾಕ, ಕುಲಗೋಡ, ಮುರಗೋಡ, ಕಟಕೋಳ, ರಾಮದುರ್ಗ, ರಾಯಬಾಗ, ಕುಡಚಿ, ಅಥಣಿ, ಚಿಕ್ಕೋಡಿ, ಬೈಲಹೊಂಗಲ, ಖಾನಾಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

    ಸಿಕ್ಕಿಲ್ಲ ಅನುಮೋದನೆ: ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ 16 ಪೊಲೀಸ್ ಠಾಣೆಗಳಲ್ಲಿ ಮಾಳಮಾರುತಿ ಠಾಣೆ ಅತೀ ಹೆಚ್ಚು ವಿಸ್ತೀರ್ಣ ಪ್ರದೇಶ ಹೊಂದಿದೆ. ಅಪರಾಧ ಪ್ರಮಾಣಗಳು ಸಹ ಈ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿರುತ್ತವೆ. ಈ ಹಿನ್ನೆಲೆಯಲ್ಲಿ
    ಮಾಳಮಾರುತಿ ಠಾಣೆ ವಿಭಜಿಸಿ ಹೊಸದಾಗಿ ರಾಮತೀರ್ಥ ನಗರ ಠಾಣೆ ಸ್ಥಾಪಿಸುವ ಕುರಿತು 2017ರಲ್ಲಿ ಗೃಹ ಇಲಾಖೆಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದರು. ಆದರೆ, ಸರ್ಕಾರದಿಂದ ಇನ್ನುವರೆಗೂ ಅನುಮತಿ ಸಿಕ್ಕಿಲ್ಲ.

    ಜಿಲ್ಲೆಗಿಲ್ಲ ಮಹಿಳಾ ಠಾಣೆಗಳು: ಮಹಾನಗರ ಪಾಲಿಕೆಯಲ್ಲಿರುವ ಮಹಿಳಾ ಪೊಲೀಸ್ ಠಾಣೆಗಳಂತೆ ಪ್ರತಿ ತಾಲೂಕಿಗೊಂದು ಮಹಿಳಾ ಠಾಣೆಗಳ ನಿರ್ಮಾಣ ಅವಶ್ಯಕವಾಗಿದೆ. ಆದರೆ, ಸರ್ಕಾರ ಕಾರಣ ಮುಂದಿಟ್ಟುಕೊಂಡು ಹೊಸ ಠಾಣೆಗಳ ನಿರ್ಮಾಣಕ್ಕೆ ಮುಂದಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಜನಸಂಖ್ಯೆಗೆ ಅನುಗುಣವಾಗಿ ಠಾಣೆಗಳ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ನ್ಯಾಯವಾದಿ ಸುರೇಶ ಕುದರಿ ಆಗ್ರಹಿಸಿದ್ದಾರೆ.

    ಯರಗಟ್ಟಿ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಆದರೆ, ಆರ್ಥಿಕ ಮುಗ್ಗಟ್ಟು ಇನ್ನಿತರ ಕಾರಣಗಳಿಂದ ಅನುಷ್ಠಾನಗೊಂಡಿಲ್ಲ. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಇದೀಗ ಯರಗಟ್ಟಿ ಉಪ ಠಾಣೆಗೆ ಪಿಎಸ್‌ಐ ಹುದ್ದೆ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಠಾಣೆ ಕಾರ್ಯಾರಂಭ ಮಾಡಲಿದೆ.
    |ಆನಂದ ಮಾಮನಿ ವಿಧಾನಸಭಾ ಉಪಸಭಾಧ್ಯಕ್ಷ

    ಜಿಲ್ಲೆಯಲ್ಲಿ ಹೊಸ ಠಾಣೆಗಳ ಸ್ಥಾಪನೆ ಮತ್ತು ಉಪ ಠಾಣೆಗಳ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುಮೋದನೆ ಸಿಕ್ಕಿಲ್ಲ. ಅಥಣಿ ನಗರ ಮತ್ತು ಗ್ರಾಮೀಣ ಠಾಣೆಗಳ ಸ್ಥಾಪನೆ ಅನುಮೋದನೆ ಹಂತದಲ್ಲಿದೆ.
    | ಲಕ್ಷ್ಮಣ ನಿಂಬರಗಿ ಎಸ್‌ಪಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts