ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದರೆ ಅದ್ಭುತಗಳು ನಡೆಯುತ್ತವೆ ಎಂಬ ಮಾತಿಗೆ ನೀರಜ್ ಚೋಪ್ರಾ ತಾಜಾ ದೃಷ್ಟಾಂತ. ಹರಿಯಾಣದ ಖಾಂಡ್ರಾ ಗ್ರಾಮದಲ್ಲಿ ಜನಿಸಿದ್ದ ನೀರಜ್ ಚೋಪ್ರಾ ಬಾಲ್ಯದಲ್ಲಿ ತಿಂಡಿಪೋತ. ದಢೂತಿ. ಅವರು ಸಣ್ಣ ಆಗಲೆಂದು ತಂದೆ ಸತೀಶ್ ಕುಮಾರ್ ಪಾಣಿಪತ್ನ ಜಿಮ್ೆ ಸೇರಿಸಿದ್ದರು. ಪಕ್ಕದಲ್ಲೇ ಇದ್ದ ಸಾಯ್ ಕೇಂದ್ರಕ್ಕೆ ಹೋಗುತ್ತಿದ್ದರು. ಅಲ್ಲಿ ಜಾವೆಲಿನ್ ಥ್ರೋಪಟು ಜೈವೀರ್ ಚೌಧರಿ ಅವರ ಅಭ್ಯಾಸ ವೀಕ್ಷಿಸುತ್ತಿದ್ದ ನೀರಜ್ಗೆ ತಾವೂ ಒಮ್ಮೆಅದನ್ನು ಎಸೆಯಬೇಕೆಂಬ ಆಸೆ ಹುಟ್ಟಿತು. ಜೈವೀರ್ರಿಂದ ಜಾವೆಲಿನ್ ಪಡೆದು ನಿರಾಯಾಸವಾಗಿ 40 ಮೀಟರ್ಗೂ ದೂರ ಎಸೆದಿದ್ದರು. ಇದರಿಂದ ಪ್ರಭಾವಿತರಾದ ಜೈವೀರ್ ಚೌಧರಿ, ನೀರಜ್ ಮನೆಯವರ ಬಳಿ ಮಾತನಾಡಿ ಫಿಟ್ನೆಸ್ ಜತೆಗೆ ಜಾವೆಲಿನ್ ಎಸೆತದಲ್ಲೂ ತೊಡಗಿಕೊಳ್ಳುವಂತೆ ಮಾಡಿದ್ದರು. ತಾವೇ ಅವರ ಮೊದಲ ಕೋಚ್ ಆಗಿದ್ದರು. ಅಲ್ಲಿಂದ 50, 55, 60, 65 ಮೀಟರ್ವರೆಗೆ ಅವರ ಜಾವೆಲಿನ್ ಎಸೆತಗಳು ಪ್ರಗತಿ ಕಾಣಲಾರಂಭಿಸಿದವು. 2012ರಲ್ಲಿ ಜೂನಿಯರ್ ರಾಷ್ಟ್ರೀಯ ಕೂಟದಲ್ಲಿ 68.40 ಮೀಟರ್ಗಳ ರಾಷ್ಟ್ರೀಯ ದಾಖಲೆ ಬರೆದರೆ, ಅದರ ಮರುವರ್ಷ ವಿಶ್ವ ಯೂತ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದರು. 2014ರಲ್ಲಿ ಯೂತ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕ ಒಲಿಸಿಕೊಂಡಿದ್ದರು. 2015ರಲ್ಲಿ 80 ಮೀ.ಗೂ ದೂರ ಜಾವೆಲಿನ್ ಎಸೆಯಲಾರಂಭಿಸಿದ ನೀರಜ್ಗೆ ಪಟಿಯಾಲದ ಎನ್ಐಎಸ್ನಲ್ಲಿ ರಾಷ್ಟ್ರೀಯ ಶಿಬಿರ ಸೇರಿಕೊಳ್ಳುವಂತೆ ಆಹ್ವಾನ ಬಂದಿತು. ಅಲ್ಲಿ ಕನ್ನಡಿಗ ಕಾಶಿನಾಥ್ ನಾಯ್್ಕ ಗರಡಿಯಲ್ಲಿ ಪಳಗಿದ ನೀರಜ್ 2016ರ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 86.48 ಮೀ. ಜಾವೆಲಿನ್ ಎಸೆದು ಜೂನಿಯರ್ ವಿಭಾಗದ ವಿಶ್ವದಾಖಲೆ ಬರೆದಿದ್ದರು. ಆದರೆ ಈ ಸ್ಪರ್ಧೆ ಜುಲೈ 23ರಂದು ನಡೆದಿದ್ದರೆ, ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಡುವು ಜುಲೈ 11ಕ್ಕೆ ಮುಗಿದಿತ್ತು. ಇದರಿಂದಾಗಿ ಒಲಿಂಪಿಕ್ಸ್ ಸ್ಪರ್ಧೆಗೆ 5 ವರ್ಷ ಹೆಚ್ಚುವರಿಯಾಗಿ ಕಾಯುವ ನಡುವೆ ನೀರಜ್, 2018ರ ಏಷ್ಯಾಡ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದು ಬೀಗಿದ್ದರು, 2019ರಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಜತೆಗೆ ಜರ್ಮನಿಯ ಬಯೋಮೆಕಾನಿಕ್ಸ್ ತಜ್ಞ ಕ್ಲೌಸ್ ಬಟೋನಿಜ್ ಅವರ ಗರಡಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ 16 ತಿಂಗಳ ಕಾಲ ಕಠಿಣ ತರಬೇತಿ ಪಡೆದಿದ್ದರು. ಇದರಿಂದಾಗಿ 85 ಮೀಟರ್ಗೂ ಅಧಿಕ ದೂರ ಎಸೆಯುವ ಸಾಮರ್ಥ್ಯ ಸಂಪಾದಿಸಿದ್ದ ನೀರಜ್, ಟೋಕಿಯೊದಲ್ಲಿ 87.58 ಮೀ. ಎಸೆದು ಚಿನ್ನಕ್ಕೆ ಮುತ್ತಿಕ್ಕಿದ್ದರು. ನೀರಜ್ ಎಂದೂ ಪದಕದ ಬಗ್ಗೆ ಯೋಚಿಸುವುದಿಲ್ಲವಂತೆ. ಅವರಿಗೆ ಪರಿಪೂರ್ಣವಾದ ಎಸೆತ ಎಸೆಯುವುದಷ್ಟೇ ಮಹತ್ವವಾದುದು. ಆದರೆ, ಒಮ್ಮೆ ಆ ಪರಿಪೂರ್ಣ ಎಸೆತ ಎಸೆದಾದ ಬಳಿಕ ಅವರು ಪದಕದ ಸಹಿತ ಎಲ್ಲವನ್ನೂ ಬೋನಸ್ ಆಗಿ ಸ್ವೀಕರಿಸುತ್ತಾರಂತೆ!