More

    ಟೋಕನ್ ಕೊಟ್ಟು ವಲಸೆ ಕಾರ್ಮಿಕರ ರವಾನೆ

    ನಿಪ್ಪಾಣಿ: ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದಲ್ಲಿರುವ ವಲಸಿಗ ಕನ್ನಡಿಗರಿಗೆ ಕೇವಲ ಒಂದು ಕಾಗದದ ತುಣುಕು (ಟೋಕನ್) ನೀಡಿ ಕಳುಹಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ಪುಣೆಯ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಬದುಕು ಕಟ್ಟಿಕೊಂಡಿದ್ದ ರಾಜ್ಯದ ರಾಯಚೂರು, ಬಳ್ಳಾರಿ, ಬೀದರ, ಬಾಗಲಕೋಟೆ ಇನ್ನಿತರ ಜಿಲ್ಲೆಗಳ 11 ಮಕ್ಕಳು ಸೇರಿ 53 ಜನರನ್ನು ಪುಣೆ ಜಿಲ್ಲಾಡಳಿತವು ನಿಪ್ಪಾಣಿಗೆ ತೆರಳಲು ಅನುಮತಿ ನೀಡಿದ್ದರಿಂದ ಅವರೆಲ್ಲ ನಿಪ್ಪಾಣಿ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದಾರೆ.

    ಒಂದು ಕಾಗದದ ಟೋಕನ್‌ನೊಂದಿಗೆ ಎರಡು ಬಸ್‌ಗಳ ಮೂಲಕ ಇವರೆಲ್ಲ ಗಡಿಭಾಗದ ಕಾಗಲ್‌ವರೆಗೆ ಬಂದಿದ್ದಾರೆ. ಬಳಿಕ ಬಸ್ ಚಾಲಕರು, ಇಲ್ಲಿಂದ ನೀವೇ ಮುಂದೆ ಹೋಗಿ ಎಂದಿದ್ದಾರೆ. ಆದರೆ, ಯಾರೂ ಬಸ್‌ನಿಂದ ಇಳಿದಿಲ್ಲ. ನಂತರ ಆ ಚಾಲಕರು ಮಹಾರಾಷ್ಟ್ರ ಪೊಲೀಸರ ಮೂಲಕ ಹೇಳಿಸಿದರೂ ಕನ್ನಡಿಗರು ಇಳಿದಿರಲಿಲ್ಲ. ಹೀಗಾಗಿ ಬಸ್ ಚಾಲಕರು, ಮತ್ತೆ ವಾಪಸ್ ಹೋಗಿ ಮುರ್ಗುಡ್ ಮಾರ್ಗದ ಮೂಲಕ ನಗರದ ಪಕ್ಕದಲ್ಲಿರುವ ತಾಲೂಕಿನ ಗಡಿ ಗ್ರಾಮವಾದ ಗಾಯಕನವಾಡಿ ಸಮೀಪ ಬಂದು ಬಸ್‌ನಿಂದ ಇಳಿಸಿದ್ದಾರೆ.

    ಗಾಯಕನವಾಡಿಯಿಂದ ಸುಮಾರು 8- 10 ಕಿ.ಮೀ. ನಡೆದುಕೊಂಡು ಬಂದ ಕಾರ್ಮಿಕರು, ಶನಿವಾರ ಸಂಜೆ ನಿಪ್ಪಾಣಿ ನಗರದ ದೇವಚಂದ್ ಕಾಲೇಜ್ ಬಳಿಯ ಚೆಕ್‌ಪೋಸ್ಟ್‌ವರೆಗೆ ಬಂದಿದ್ದಾರೆ. ಇಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಅವರ ಬಳಿ ಅನುಮತಿ ಪತ್ರ ಕೇಳಿದ್ದಾರೆ. ಕಾರ್ಮಿಕರು ತಮ್ಮಲ್ಲಿದ್ದ ಟೋಕನ್ ತೋರಿಸಿದಾಗ ಮಹಾರಾಷ್ಟ್ರ ಸರ್ಕಾರ ಮಾಡಿದ ತಪ್ಪು ಕಂಡು ಬಂದಿದೆ. ಇನ್ನು ಅದೆಷ್ಟೋ ಜನರು ರಾಜ್ಯದಲ್ಲಿ ನುಸುಳಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಸದ್ಯ ಎಲ್ಲ ವಲಸೆ ಕಾರ್ಮಿಕರಿಗೂ ಅನುಮತಿ ಪತ್ರಕ್ಕಾಗಿ ಈಗ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪಾಸ್ ಲಭ್ಯವಾದ ಬಳಿಕ ತಾಲೂಕಾಡಳಿತದಿಂದ ಇವರಿಗೆ ಬಸ್ ವ್ಯವಸ್ಥೆ ಮಾಡಿ ಅವರವರ ಗ್ರಾಮಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಹಾವೀರ ಬೋರಣ್ಣವರ ಹಾಗೂ ಸಿಪಿಐ ಸಂತೋಷ ಸತ್ಯನಾಯಿಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts