More

    ರಾಜಕೀಯ ಲೆಕ್ಕಾಚಾರ ಆರಂಭ ; ಜಿಪಂ, ತಾಪಂ ಚುನಾವಣೆಗೆ ಕರಡು ಮೀಸಲು ಪಟ್ಟಿ ಪ್ರಕಟ ; ಹಲವು ಕ್ಷೇತ್ರಗಳ ವರ್ಗ

    ತಿಪಟೂರು : ಜಿಪಂ, ತಾಪಂ ಚುನಾವಣೆಗೆ ಕರಡು ಮೀಸಲು ಪಟ್ಟಿ ಪ್ರಕಟವಾಗಿದ್ದು, ತಾಲೂಕಿನೆಲ್ಲೆಡೆ ರಾಜಕೀಯ ಲೆಕ್ಕಾಚಾರ ಆರಂಭವಾಗಿವೆ. ಐತಿಹಾಸಿಕ ಕ್ಷೇತ್ರಗಳಾದ ಗುರುಪರದೇಶೀಕೇಂದ್ರ ಸ್ವಾಮೀಜಿ ಸುಕ್ಷೇತ್ರ ರಂಗಾಪುರ, ಆದಿಚುಂಚನಗಿರಿ ಶಾಖಾ ಮಠ ಹಾಗೂ ಚೌಡೇಶ್ವರಿ ದೇವಿಯ ಪುಣ್ಯ ಕ್ಷೇತ್ರ ದಸರೀಘಟ್ಟ ಸೇರಿದ್ದ ರಂಗಾಪುರ ಜಿಪಂ ಕ್ಷೇತ್ರ ಅಸ್ವಿತ್ವ ಕಳೆದುಕೊಂಡಿದೆ. ಮತದಾರರ ಸಂಖ್ಯೆ ಆಧಾರದಲ್ಲಿ ಈಚನೂರಿಗೆ ಕ್ಷೇತ್ರವನ್ನು ವರ್ಗಾಯಿಸಲಾಗಿದೆ.

    ಹುಚ್ಚಗೊಂಡನಹಳ್ಳಿ ಕ್ಷೇತ್ರವನ್ನು ಹಾಲ್ಕುರಿಕೆಗೆ ಬದಲಾಯಿಸಲಾಗಿದೆ. ನೊಣವಿನಕೆರೆ, ಕಿಬ್ಬನಹಳ್ಳಿ, ಹೊನ್ನವಳ್ಳಿ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಕರಡು ಮೀಸಲುಪಟ್ಟಿ ಪ್ರಕಾರ ಕಳೆದ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಹೊನ್ನವಳ್ಳಿ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಕಿಬ್ಬನಹಳ್ಳಿ ಬಿಸಿಎಂಎ ಮಹಿಳೆಗೆ, ಹುಚ್ಚಗೊಂಡನಹಳ್ಳಿ (ಹಾಲ್ಕುರಿಕೆ) ಒಬಿಸಿ ಮಹಿಳೆಗೆ ಬದಲಿಗೆ ಸಾಮಾನ್ಯ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ನೊಣವಿನಕೆರೆ ಕ್ಷೇತ್ರ ಎಸ್ಸಿಗೆ ಹಾಗೂ ಒಬಿಸಿಎಗೆ ಮೀಸಲಾಗಿದ್ದ ರಂಗಾಪುರ (ಈಚನೂರು) ಕ್ಷೇತ್ರ ಈ ಬಾರಿ ಬಿಸಿಎಂ(ಬಿ)ಗೆ ಮೀಸಲಾಗಿದೆ.

    ಮೀಸಲು ಬದಲಾವಣೆ ಹಿನ್ನೆಲೆಯಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಎಲ್ಲರೂ ಈ ಬಾರಿ ಕ್ಷೇತ್ರ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಹೊನ್ನವಳ್ಳಿಯಿಂದ ಸ್ಪರ್ಧಿಸಿದ್ದ ಜಿ.ನಾರಾಯಣ್, ಈ ಬಾರಿ ನೊಣವಿನಕೆರೆ ಕ್ಷೇತ್ರ ತನಗೆ ಅನುಕೂಲವಾಗುವುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮೀಸಲಾತಿ ಸಿಗದೆ ನಿರಾಶರಾಗಿ, ಕಡೆಗೆ ಕೈತಪ್ಪಲಿರುವ ಹೊನ್ನವಳ್ಳಿ ಕ್ಷೇತ್ರದಿಂದ ಪತ್ನಿಯನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಭವಿಷ್ಯದ ದೃಷ್ಟಿಯಿಂದ ತಮ್ಮ ಅತ್ತಿಗೆಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

    ರಂಗಾಪುರ ಕ್ಷೇತ್ರಕ್ಕೆ ಎಸ್ಸಿ ಮೀಸಲಾತಿ ಖಚಿತ ಎಂದು ನಂಬಿ, ಅಲ್ಲಿ ಹಗಲಿರುಳೂ ಜನರ ಜತೆ ಗುರುತಿಸಿಕೊಂಡಿದ್ದ ಬಿಜೆಪಿ ಕಟ್ಟಾಳು, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗಂಗರಾಜು ತೀವ್ರ ನಿರಾಶೆಗೊಂಡಿದ್ದು, ಈಗ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನೊಣವಿನಕೆರೆ ಕ್ಷೇತ್ರದತ್ತ ಮುಖ ಮಾಡುತ್ತಾರೆ ಎನ್ನಲಾಗಿದೆ.

    ಷಡಕ್ಷರಿ ಸಹೋದರ ಪುತ್ರ ಕಣಕ್ಕೆ : ಹುಚ್ಚಗೊಂಡನಹಳ್ಳಿಯಿಂದ ಹಾಲ್ಕುರಿಕೆಗೆ ಬದಲಾಗಿರುವ ಕ್ಷೇತ್ರಕ್ಕೆ ಮಾಜಿ ಶಾಸಕ ಕೆ.ಷಡಕ್ಷರಿ ಸಹೋದರನ ಪುತ್ರ ಯುವ ಮುಖಂಡ ನಿಖಿಲ್ ರಾಜಣ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ನಿರೀಕ್ಷೆ ಇದೆ. ಈಚನೂರು ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ಹಾಗೂ ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್, ಕಾಂಗ್ರೆಸ್‌ನಿಂದ ತ್ರಿಯಂಬಕ ಸ್ಪರ್ಧಿಸುವ ನಿರೀಕ್ಷೆ ಇದೆ.

    ತಾಪಂ ಮಾಜಿ ಅಧ್ಯಕ್ಷ ಎನ್.ಎಂ.ಸುರೇಶ್ ನಡೆ ನಿಗೂಢವಾಗಿದೆ. ಷಡಕ್ಷರಿ ಹಾಕಿದ ಗೆರೆ ದಾಟದ ಸುರೇಶ್ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ನಿರ್ಧಾರವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕರಡು ಮೀಸಲಾತಿ ಪ್ರಶ್ನಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

    ಸಹೋದರ ರಾಜಶೇಖರ್, ಜಿಪಂ ಚುನಾವಣೆ ಗೆದ್ದರೂ ಸ್ಥಾನ ಅಲಂಕರಿಸುವ ಮುಂಚೆ ಅಕಾಲ ಮರಣಕ್ಕೆ ತುತ್ತಾದರು. ತಾಯಿಯ ಆಣತಿಯಂತೆ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯಕ್ಕೆ ತರಲಿಲ್ಲ. ಸಹೋದರನ ಸ್ಥಾನ ತುಂಬುತ್ತಾನೆ ಎಂಬ ಭರವಸೆ ಮೇಲೆ ನಿಖಿಲ್ ರಾಜಣ್ಣನಿಗೆ ಈ ಬಾರಿ ಹಾಲ್ಕುರಿಕೆ (ಹುಚ್ಚಗೊಂಡನಹಳ್ಳಿ) ಕ್ಷೇತ್ರದಿಂದ ಸ್ಪರ್ಧೆಗಿಳಿಸುತ್ತೇವೆ.
    ಕೆ.ಷಡಕ್ಷರಿ, ಮಾಜಿ ಶಾಸಕ, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts