More

    ಜನ ಈಗ ಪಶ್ಚಾತ್ತಾಪ ಹೆಚ್ಚು ಪಡುತ್ತಿದ್ದಾರೆ

    ಮುದ್ದೇಬಿಹಾಳ: ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ನನ್ನನ್ನು ಆಯ್ಕೆಮಾಡದಿರುವ ಪಶ್ಚಾತ್ತಾಪ ಜನರಲ್ಲೀಗ ಕಂಡು ಬರುತ್ತಿದೆ. ನಾನು ಸೋತಾಗ ಪಟ್ಟದ್ದಕ್ಕಿಂತಲೂ ಹೆಚ್ಚು ಪಶ್ಚಾತ್ತಾಪವನ್ನು ಜನ ಸಾಮಾನ್ಯರು ಈಗ ಪಡುತ್ತಿದ್ದಾರೆ ಎಂದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

    ಇಲ್ಲಿನ ಬನಶಂಕರಿ ನಗರದಲ್ಲಿ ಶುಕ್ರವಾರ ಸಂಜೆ ಯಡಿಯೂರಪ್ಪನವರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣದಲ್ಲಿ ಶೇ. 40 ಮುಸ್ಲಿಂ, ಶೇ. 60 ಹಿಂದುಗಳ ಮತಗಳಿವೆ. ಶೇ. 40 ಇದ್ದವರು ಶೇ. 80ರಷ್ಟು ಮತದಾನ ಮಾಡಿ ಏಕಪಕ್ಷೀಯವಾಗಿ ಕಾಂಗ್ರೆಸ್ ಬೆಂಬಲಿಸಿದರು. ಶೇ.60 ಮತಗಳಿರುವವರಲ್ಲಿ ಶೇ. 75 ನನಗೆ, ಶೇ. 25 ಕಾಂಗ್ರೆಸ್‌ಗೆ ಓಟ್ ಹಾಕಿದರು. ಹೀಗಾಗಿ ಸೋಲನುಭವಿಸಬೇಕಾಯಿತು ಎಂದರು.

    ಜೊತೆಗೆ ಮೀಸಲಾತಿ ಗೊಂದಲ, ಗ್ಯಾರಂಟಿ ಭರವಸೆಗಳು ಇನ್ನಿತರ ಕಾರಣಗಳೂ ನನ್ನ ಸೋಲಿನಲ್ಲಿರಬಹುದು. ನಾನು ಸೋತರೂ ನನ್ನ ಜನಪ್ರಿಯತೆ ಕುಗ್ಗಿಲ್ಲ. ಈಗಲೂ ಮತಕ್ಷೇತ್ರದಲ್ಲಿ ಸರ್ವೇ ನಡೆಸಿದರೆ ಜನಪರ ಇರುವ ವ್ಯಕ್ತಿ ನಡಹಳ್ಳಿ ಎಂದೇ ಬಹುಸಂಖ್ಯಾತ ಜನರು ಹೇಳುತ್ತಾರೆ. ಪ್ರತಿಯೊಂದು ವಿಷಯದಲ್ಲಿ ನಡಹಳ್ಳಿ ಸೇವೆಯನ್ನು ಜನ ಸ್ಮರಿಸುತ್ತಿದ್ದಾರೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ನಗರ ಪ್ರದೇಶದಲ್ಲಿ ವಾಸವಿರುವ ಮುಸ್ಲಿಂ ಸಮಾಜದ ಪ್ರದೇಶಗಳಿಗೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವದ್ಧಿ ಕೆಲಸ ಮಾಡಿದ್ದೆ. ಮುದ್ದೇಬಿಹಾಳದ ಮಹಿಬೂಬನಗರ ಬಡಾವಣೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಸಿಸಿ ರಸ್ತೆಗಳನ್ನು ಮಾಡಿಸಿ ಇವತ್ತಿಗೂ ಅದರ ಮೇಲೆ ನಡೆಯುವ ಜನ ನನ್ನನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದೆ. ಆಗ ನಾನು ಜಾತಿ, ಧರ್ಮ ನೋಡಲಿಲ್ಲ. ಮುಸ್ಲೀಮರು ವಾಸಿಸುವ ಪ್ರದೇಶಗಳಲ್ಲಿ ನಾನು ಮಾಡಿದಷ್ಟು ಅಭಿವದ್ಧಿ ಕೆಲಸವನ್ನು ಬೇರಾರೂ ಮಾಡಿಲ್ಲ. ಆದರೂ ವಿಧಾನಸಭೆ ಚುನಾವಣೆಯಲ್ಲಿ ತಾವು ಬಿಜೆಪಿ ವಿರೋಧಿಗಳು ಅನ್ನೋದನ್ನು ಬಹಿರಂಗಪಡಿಸಿದರು. ನನಗೆ ಮುಸ್ಲೀಮರು ಓಟ್ ಹಾಕಿಲ್ಲ ಅಂತ ಬೇಜಾರಿಲ್ಲ. ಆದರೆ ವಾಸ್ತವ ಅರಿತು ನಡೆಯಲಿಲ್ಲವಲ್ಲ ಎನ್ನುವ ಬೇಜಾರು ಮೂಡಿದೆ ಎಂದರು.

    ನಾನು ಶಾಸಕನಾಗಿದ್ದಾಗ ಮಾಡಿದಷ್ಟು ಕೆಲಸವನ್ನು ಈಗಿನ ಶಾಸಕರಿಂದ ಮಾಡಿಸಿಕೊಳ್ಳುವುದು ಸಾಧ್ಯವೇ? ಎಂದು ಮುಸ್ಲೀಮರಿಗೆ ಚಾಲೆಂಜ್ ಮಾಡುತ್ತೇನೆ. ನೀವು ವಾಸಿಸುವ ಪ್ರದೇಶಗಳಿಗೆ ಮುಳ್ಳುಕಂಟಿ ಹಚ್ಚುವವರು ಬೇಕೋ, ಹೂವಿನ ಗಿಡಗಳನ್ನು ಹಚ್ಚುವವರು ಬೇಕೋ. ನೀವೇ ನಿರ್ಧರಿಸಿ ಎಂದು ಬಿಸಿ ಮುಟ್ಟಿಸಿದರು.

    ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಮುಖಂಡರಾದ ಅಶೋಕ ರಾಠೋಡ ನೇಬಗೇರಿ, ಶ್ರೀಶೈಲ ದೊಡಮನಿ, ಸಿದ್ದರಾಜ ಹೊಳಿ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ರವೀಂದ್ರ ಬಿರಾದಾರ, ಸಂಗನಗೌಡ ಪಾಟೀಲ, ಸಂತೋಷ ಬಾದರಬಂಡಿ, ಗಿರೀಶ ಇಲ್ಲೂರ, ಪುರಸಭೆ ಸದಸ್ಯ ಬಸವರಾಜ ಮುರಾಳ, ಎಂ.ಆರ್. ಪಾಟೀಲ ವಕೀಲರು ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts