More

    ಕೊಬ್ಬರಿ ಖರೀದಿಗೂ ಲಂಚ

    ವಿಜಯವಾಣಿ ಸುದ್ದಿಜಾಲ ತಿಪಟೂರು
    ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ರೈತರಿಂದ ಹಣಕ್ಕೆ ಬೇಡಿಕೆ ಇಡುವ ಸಿಬ್ಬಂದಿ ವಿರುದ್ಧ ರೈತರು ಬುಧವಾರ ತಿರುಗಿಬಿದ್ದರು.
    ದಿನೇದಿನೆ ಇಳಿಕೆ ಹಾದಿಯಲ್ಲಿ ಸಾಗಿದ್ದ ಕೊಬ್ಬರಿ ಬೆಲೆ ಹತೋಟಿಗೆ ತರುವ ಸಲುವಾಗಿ ಕೇಂದ್ರ ಸರ್ಕಾರ ಫೆ.2ರಿಂದ ನಗರದ ಎಪಿಎಂಸಿ ಮಾರುಕಟ್ಟೆ ಆವರಣದ ಫೆಡರೇಷನ್ ಗೋದಾಮಿನಲ್ಲಿ ಕ್ವಿಂಟಾಲ್ ಕೊಬ್ಬರಿಗೆ 11,750 ರೂಪಾಯಿ ನಿಗದಿ ಮಾಡಿ, ಪ್ರತಿ ರೈತರಿಂದ ಕನಿಷ್ಠ ಎಕರೆಗೆ 6 ಕ್ವಿಂಟಾಲ್, ಗರಿಷ್ಠ 20 ಕ್ವಿಂಟಾಲ್ ಖರೀದಿಗೆ ಆದೇಶಿಸಿದ್ದು, ನೋಂದಣಿಗಾಗಿ ಪ್ರತ್ಯೇಕ ಕೌಂಟರ್, ಖರೀದಿಗಾಗಿ ಫೆಡರೇಷನ್‌ನ ಎರಡು ಗೋದಾಮುಗಳಲ್ಲಿ ಖರೀದಿ ವ್ಯವಸ್ಥೆ ಮಾಡಲಾಗಿದೆ. ನಫೆಡ್ ದರಕ್ಕಿಂತ ಮುಕ್ತ ಹರಾಜಿನಲ್ಲಿ ಇನ್ನೂ ಹೆಚ್ಚಿನ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ಪ್ರಾರಂಭದ ದಿನಗಳಲ್ಲಿ ಹೆಚ್ಚು ನೋಂದಣಿ ಮಾಡಿಸುವ ಗೋಜಿಗೆ ಹೋಗಲಿಲ್ಲ. ಆದರೆ ಕಾಲ ಕ್ರಮೇಣ ಮುಕ್ತ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ 9,500 ರೂಪಾಯಿಗಿಂತ ಕಡಿಮೆಗೆ ಇಳಿದಿದ್ದರಿಂದ, ಬೇರೆ ದಾರಿ ಕಾಣದ ನಫೆಡ್‌ನತ್ತ ಮುಖ ಮಾಡತೊಡಗಿದ್ದಾರೆ.
    ಕೊಬ್ಬರಿ ಖರೀದಿಗೆ ಹಣಕ್ಕೆ ಬೇಡಿಕೆ: ನೋಂದಣಿ ಚೀಟಿಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ ದಿನದಂದು ಕೊಬ್ಬರಿ ತಂದ ರೈತರಿಗೆ ಇಲ್ಲದ ಸಬೂಬು ಹೇಳಿ, ಇಂದು ನಿಮ್ಮ ಕೊಬ್ಬರಿ ಖರೀದಿಸಲಾಗುವುದಿಲ್ಲ. ಮೂರ‌್ನಾಲ್ಕು ದಿನ ಬಿಟ್ಟು ತನ್ನಿ ಎನ್ನುತ್ತಾರೆ. ಕಷ್ಟಪಟ್ಟು ಸುಲಿದು ತಂದ ಕೊಬ್ಬರಿ ಬಿಸಿಲಿನಲ್ಲಿ ಒಣಗುತ್ತಿರುವುದನ್ನು ನೋಡಿ ರೈತರು ಹತಾಶ ಸ್ಥಿತಿಗೆ ತಲುಪುವಂತೆ ಮಾಡಿ ಕಡೆಗೆ ಅವರಿಗೆ ಸಹಾಯ ಮಾಡುವ ನೆಪದಲ್ಲಿ 3 ರಿಂದ 5 ಸಾವಿರ ರೂಪಾಯಿ ಕೊಟ್ಟರೆ ಇಂದೇ ಕೊಬ್ಬರಿ ಖರೀದಿಸುವುದಾಗಿ ಖರೀದಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದು ರೈತರನ್ನು ಕೆರಳಿಸಿತು. ಆಕ್ರೋಶ ವ್ಯಕ್ತಪಡಿಸಿದ ರೈತರಿಗೆ ನೋಂದಣಿ ಪ್ರಕ್ರಿಯೆಯನ್ನೇ ನಿಲ್ಲಿಸಲಾಗುವುದೆಂದು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಕೆ.ಷಡಕ್ಷರಿ, ಹೆಚ್ಚಿನ ಖರೀದಿಗೆ ಸ್ಥಳ ಅಭಾವದ ನೆಪ ಹೇಳಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಜಿಲ್ಲಾಧಿಕಾರಿ ಮತ್ತು ಫೆಡರೇಷನ್ ಎಂ.ಡಿ.ಗೆ ಕರೆ ಮಾಡಿ ತಕ್ಷಣ ಹೆಚ್ಚುವರಿ ಮೂರು ಗೋದಾಮುಗಳ ವ್ಯವಸ್ಥೆ ಮಾಡುವಂತೆ ಮನವಿ ಮಾಡಿ, ರೈತರನ್ನು ಸುಲಿಗೆ ಮಾಡದಂತೆ ಎಚ್ಚರಿಸಿದರು.

    ಹೋಳು ಕೊಬ್ಬರಿ ನಿರಾಕರಿಸಲಿ, ಆದರೆ ಉಂಡೆ ಕೊಬ್ಬರಿ ನಿರಾಕರಿಸುವಂತಿಲ್ಲ. ಇಲ್ಲಿನ ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ಅವಲೋಕಿಸುವಂತೆ ಎಂಡಿಗೆ ಮಾತಾಡಿದ್ದೇನೆ. ತಕ್ಷಣ ಹೆಚ್ಚುವರಿ ಗೋದಾಮಿನ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
    ಕೆ.ಷಡಕ್ಷರಿ ಮಾಜಿ ಶಾಸಕ

    3 ಕೌಂಟರ್ ತೆರೆಯಲು ಆದೇಶ: ಈ ಎಲ್ಲ ಬೆಳವಣಿಗೆಗಳ ನಂತರ, ಬುಧವಾರ ಸಂಜೆ, ರಾಜ್ಯ ಸಹಕಾರ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರು ತಿಪಟೂರು ತಾಲೂಕಿನಲ್ಲಿ ಹೆಚ್ಚುವರಿಯಾಗಿ ಕೊಬ್ಬರಿ ಖರೀದಿಸಲು 3 ಕೌಂಟರ್ ತೆರೆಯಲು ಆದೇಶಿಸಿದ್ದಾರೆ.

    ಹಣ ಪಾವತಿ ಆಗಿಲ್ಲ: ಫೆ.2 ರಿಂದ ಮಾರ್ಚ್ 23ರವರೆಗೆ ಒಟ್ಟು 4,075 ರೈತರು 67,618.70 ಕ್ವಿಂಟಾಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಆದರೆ ಮಾರ್ಚ್ 23 ರವರೆಗೆ 479 ರೈತರಿಂದ 7,990 ಕ್ವಿಂಟಾಲ್ ಕೊಬ್ಬರಿ ಖರೀದಿಸಲಾಗಿದೆ. ನಿಯಮಾನುಸಾರ ಖರೀದಿಸಿದ 72 ಗಂಟೆಗಳ ಒಳಗೆ ರೈತರಿಗೆ ಹಣ ಪಾವತಿಸಬೇಕೆನ್ನುವ ನಿಯಮ ಉಲ್ಲಂಘಿಸಲಾಗಿದ್ದು, ಇಲ್ಲಿವರೆಗೂ ಯಾವೊಬ್ಬ ರೈತರಿಗೂ ಹಣ ಪಾವತಿಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts