More

    ಕೊಬ್ಬರಿ ಮಾರಲು ತಪ್ಪದ ಗೋಳು

    ವಿಶೇಷ ವರದಿ ತಿಪಟೂರು
    ನಫೆಡ್ ಖರೀದಿ ಕೇಂದ್ರದ ಅವ್ಯವಸ್ಥೆಯಿಂದ ಸಕಾಲಕ್ಕೆ ಕೊಬ್ಬರಿ ಮಾರಲಾಗದ ರೈತರ ಆಕ್ರೋಶ ದಿನೇದಿನೆ ಹೆಚ್ಚುತ್ತಿದೆ. ರೈತರ
    ಹಿತ ಕಾಯಬೇಕಿದ್ದ ಜನ ಪ್ರತಿನಿಧಿಗಳೆನಿಸಿಕೊಂಡವರು ಮತ ಭಿಕ್ಷೆಯಲ್ಲಿ ತೊಡಗಿದ್ದರೆ, ತಾಲೂಕು ಆಡಳಿತ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿ ಆಗಿದೆ.
    ಕ್ವಿಂಟಾಲ್‌ಗೆ 11,750 ರೂಪಾಯಿ ಬೆಂಬಲ ಬೆಲೆಯಲ್ಲಿ ರೈತರಿಂದ ಕೊಬ್ಬರಿ ಖರೀದಿಸಲು ಮುಂದಾಗಿರುವ ನಫೆಡ್ ಮಾ.23ರಿಂದ ಅಧಿಕೃತವಾಗಿ ರೈತರಿಂದ ಕೊಬ್ಬರಿ ಖರೀದಿಸುತ್ತಿದೆ. ಆದರೆ ಕೊಬ್ಬರಿ ಮಾರಲು ನೋಂದಾಯಿಸಿಕೊಂಡಿರುವ ರೈತರು ನಫೆಡ್ ಕೇಂದ್ರಕ್ಕೆ ನಿಗದಿತ ದಿನದಂದು ಬಂದರೂ, ಕೊಬ್ಬರಿ ಮಾರಾಟ ಮಾಡಲಾಗದೆ ಮೂರ‌್ನಾಲ್ಕು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ರೈತರು ಕಷ್ಟಪಟ್ಟು ಉತ್ಪಾದಿಸಿದ ಕೊಬ್ಬರಿ ಭೀಕರ ಬಿಸಿಲಿಗೆ ಸಿಕ್ಕಿ ಒಣಗುತ್ತಾ, ಕ್ರಮೇಣ ತೂಕ ಕಳೆದುಕೊಳ್ಳುತ್ತಿದೆ. ಇನ್ನೊಂದೆಡೆ ಮನೆ, ತೋಟದ ಕೆಲಸ, ದನಕರುಗಳ ಆರೈಕೆ ಬಿಟ್ಟು ಬಂದಿರುವ ರೈತರು, ಕನಿಷ್ಠ ಕುಡಿಯಲು ನೀರೂ ಇಲ್ಲದೆ, ಬಿಸಿಲಿನಲ್ಲಿ ಒಣಗುತ್ತಿದ್ದಾರೆ. ರೈತರಿಗೆ ಬೆಂಬಲವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು ಮತ ಭಿಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆರೆ, ತಾಲೂಕು ಆಡಳಿತ ಚುನಾವಣಾ ಕರ್ತವ್ಯದ ನೆಪದಲ್ಲಿ ರೈತರ ಹಿತ ಮರೆತಿದೆ. ಪರಿಣಾಮ ಹೆಚ್ಚುವರಿ ಕೌಂಟರ್ ಪ್ರಾರಂಭವಾಗಿಲ್ಲ. ಹಾಲಿ ಇರುವ ಮೂರು ಕೌಂಟರ್‌ಗಳಿಗೆ ಸಮರ್ಪಕ ಸಿಬ್ಬಂದಿ ಇಲ್ಲದೆ ಕೇವಲ ಇಬ್ಬರು ಸಿಬ್ಬಂದಿ (ಓರ್ವ ಮೇನೇಜರ್, ಮತ್ತು ಓರ್ವ ಗ್ರೇಡರ್,) ಮೂರು ಕೌಟರ್‌ಗಳನ್ನು ನಿಭಾಯಿಸುತ್ತಿದ್ದು, ನಿಗದಿತ ದಿನದಂದು ರೈತರು ಕೊಬ್ಬರಿ
    ತಂದರೂ, ಸಿಬ್ಬಂದಿ ಕೊರತೆಯಿಂದ ಸರಿಯಾದ ಸಮಯಕ್ಕೆ ಮಾರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
    ನಫೆಡ್ ಖರೀದಿ ಕೇಂದ್ರದ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ, ಏ.30ರೊಳಗೆ ರಾಗಿ ಖರೀದಿ ಪ್ರಕ್ರಿಯೆ ಮುಗಿಯುವುದರಿಂದ, ಹೆಚ್ಚಿನ ಸಿಬ್ಬಂದಿ ಅಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಕೌಂಟರ್‌ಗೆ ಓರ್ವ ಮ್ಯಾನೇಜರ್, ಓರ್ವ ಗ್ರೇಡರ್, ಮತ್ತು ಹಮಾಲಿ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರು ಮೂರು ಕೌಂಟರ್‌ಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿಗದಿತ ದಿನಕ್ಕಿಂತ ಮುಂಚಿತವಾಗಿಯೇ ರೈತರು ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳನ್ನು ತಂದು ನಿಲ್ಲಿಸುತ್ತಿರುವುದು ಸಮಸ್ಯೆಯಾಗಿದೆ. ಸರಿಯಾದ ಸಮುಯಕ್ಕೆ ಕೊಬ್ಬರಿ ತಂದರೆ, ಎಲ್ಲವೂ ಸಸೂತ್ರವಾಗಿ ನಡೆಯುತ್ತೆ. ರೈತರು ತಾಳ್ಮೆ ಕಳೆದುಕೊಳ್ಳಬಾರದು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
    ಕೊಬ್ಬರಿ ಕಳವು ಆರೋಪ: ಭಾನುವಾರ ರಾತ್ರಿ ಸರತಿಯಲ್ಲಿ ನಿಲ್ಲಿಸಿದ್ದ ಕೊಬ್ಬರಿ ತುಂಬಿದ್ದ ಟ್ರ್ಯಾಕ್ಟರ್‌ಗಳಿಂದ 11 ಚೀಲಕ್ಕೂ ಹೆಚ್ಚು ಕೊಬ್ಬರಿ ಕಳವು ಮಾಡಲಾಗಿದೆ. ನಮಗೆ ಮತ್ತು ನಮ್ಮ ಸರಕಿಗೆ ಸೂಕ್ತ ರಕ್ಷಣೆ ಬೇಕು. ಕುಡಿಯಲು ಕನಿಷ್ಠ ನೀರಿನ ಸೌಲಭ್ಯವನ್ನೂ ಕಲ್ಪಿಸಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಆದರೆ ಕೊಬ್ಬರಿ ಕಳವಾದ ಬಗ್ಗೆ ನಗರ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

    ಜನವರಿ 27 ರಿಂದ ಪ್ರಾರಂಭಗೊಂಡು, 45 ದಿನಗಳಲ್ಲಿ ಮುಗಿಯಬೇಕಿದ್ದ ನೋಂದಣಿ ಪ್ರಕ್ರಿಯೆಯನ್ನು ರೈತರ ಅನುಕೂಲದ ದೃಷ್ಟಿಯಿಂದ ಏ.10ಕ್ಕೆ ವಿಸ್ತರಿಸಲಾಗಿತ್ತು. ಮೂರು ಕೌಂಟರ್‌ಗಳಿದ್ದು, ಬುಧವಾರ ಹೆಚ್ಚುವರಿಯಾಗಿ ಒಂದು ಕೌಂಟರ್ ತೆರೆಯಲಾಗಿದೆ. ಸಿಬ್ಬಂದಿ ಕೊರತೆ ನಿವಾರಣೆ ಆಗುತ್ತಿದ್ದಂತೆ ಮತ್ತೊಂದು ಕೌಂಟರ್ ತೆರೆಯಲಾಗುವುದು. ರೈತರು ತಾಳ್ಮೆ ವಹಿಸಬೇಕು. ರೈತರು ಆರೋಪಿಸಿದಂತೆ ಯಾವುದೇ ಕೊಬ್ಬರಿ ಕಳವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಆಗಿಲ್ಲ.
    ಎಸ್.ಬಿ.ನ್ಯಾಮಗೌಡ ಜಂಟಿ ನಿದೇಶಕ ಎಪಿಎಂಸಿ ತಿಪಟೂರು


    ಕಷ್ಟಪಟ್ಟು ಉತ್ಪಾದಿಸಿದ ಕೊಬ್ಬರಿಗೆ ಕನಿಷ್ಠ ಬೆಲೆ ಸಿಗುತ್ತಿಲ್ಲ. ನಫೆಡ್‌ಗೆ ತಂದ ಕೊಬ್ಬರಿ ಮಾರಲು ಮೂರ‌್ನಾಲ್ಕು ದಿನ ಮನೆ, ತೋಟದ
    ಕೆಲಸ ಬಿಟ್ಟು ಕಾಯಬೇಕು. ಜತೆಗೆ ಕೊಬ್ಬರಿ ಕಳವಾಗುತ್ತಿದೆ. ನಮಗೆ ಮತ್ತು ನಮ್ಮ ಸರಕಿಗೆ
    ಸೂಕ್ತ ಪೊಲೀಸ್ ರಕ್ಷಣೆ ಬೇಕು.
    ಜಯಚಂದ್ರಶರ್ಮ ಕಾರ‌್ಯದರ್ಶಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts