More

    ಪ್ರಕೃತಿಗೆ ಟಿಶ್ಯೂ ದೊಡ್ಡ ಇಶ್ಯೂ: ನಿಯಂತ್ರಣಕ್ಕೆ ಕರವಸ್ತ್ರವೇ ಅಸ್ತ್ರ..

    ಇತ್ತೀಚಿಗೆ ತರಹೇವಾರಿ ಟಿಶ್ಯೂ ಪೇಪರ್​ಗಳಿಂದ ಜನರು ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಡ್ರೖೆ ಟಿಶ್ಯೂ, ವೆಟ್ ಟಿಶ್ಯೂ ಅತಿ ಹೆಚ್ಚು ಬಳಕೆಯಲ್ಲಿದೆ. ಟಿಶ್ಯೂ ಇಲ್ಲದೆ ದಿನವೇ ಸಾಗದು ಎಂಬ ಮನಸ್ಥಿತಿ ಉಂಟಾಗಿದೆ. ಮುಖ, ಕೈ, ಟೇಬಲ್, ಮೊಬೈಲ್​ಫೋನ್-ಟಿವಿ ಒರೆಸಲು ಕೂಡ ಟಿಶ್ಯೂ ಬೇಕಾಗಿದೆ. ಹೋದಲ್ಲಿ ಬಂದಲ್ಲಿ ಎಲ್ಲೆಡೆ ಇದೀಗ ಟಿಶ್ಯೂ ಹಾವಳಿ. ದೈನಂದಿನ ಕೆಲಸಕ್ಕೆ ಬಳಸಿ ಬಿಸಾಡುವ ಟಿಶ್ಯೂ ಪ್ರಕೃತಿ ಮೇಲೆ ಬೀರುತ್ತಿರುವ ಪರಿಣಾಮ, ಮುಂದಿನ ದಿನಗಳಲ್ಲಿ ಒಂದೊಂದು ಟಿಶ್ಯೂವಿನ ಬೆಲೆಯನ್ನು ಯಾವ ರೂಪದಲ್ಲಿ ತೆರಬೇಕಿದೆ ಎಂಬುದರ ಕುರಿತ ಪ್ರಶ್ನೆಗಳಿಗೆಲ್ಲ ಉತ್ತರ ರೂಪದ ಪ್ರಯತ್ನವೇ ಈ ಲೇಖನ.

    | ಮೋಹನ್ ಶೆಟ್ಟಿ

    ಸಾಮಾನ್ಯವಾಗಿ ಪೇಪರ್ ತಯಾರಿಕೆಗೆ ಮರಗಳನ್ನು ಧರೆಗೆ ಉರುಳಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಎಲ್ಲ ಬಗೆಯ ಪೇಪರ್ ತಯಾರಿಸಲ ಮರಗಳನ್ನು ಬಳಸುವುದು ಈ ಹಿಂದಿನ ಪ್ರಕ್ರಿಯೆ. ಒಮ್ಮೆ ಬಳಸಿದ ಶೀಟ್​ಗಳನ್ನು ಮರುಬಳಕೆ ಮಾಡಬಹುದು. ಇದಕ್ಕೆ ಹಲವಾರು ವಿಧಾನಗಳು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ತಂತ್ರಜ್ಞಾನಗಳು ಮರಗಳ ನಾಶದ ಪ್ರಮಾಣವನ್ನು ಆದಷ್ಟೂ ಕಡಿಮೆಗೊಳಿಸಿದೆ. ಆದರೆ ಪೇಪರ್ ತಯಾರಿಕೆಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಮರಗಳು ಟಿಶ್ಯೂ ತಯಾರಿಕೆಗೆ ಬಳಕೆ ಆಗುತ್ತಿದೆ. ಯೂಸ್ ಆಂಡ್ ಥ್ರೋ ಟಿಶ್ಯೂಗೆ ಅದೆಷ್ಟೋ ಬೃಹತ್ ಮರಗಳನ್ನೇ ಕಡಿಯಲಾಗುತ್ತದೆ ಎಂಬುದು ತೀವ್ರ ಬೇಸರದ ಸಂಗತಿ.

    ಸಾಫ್ಟ್ ಟಿಶ್ಯೂಗೆ ಬೇಕು ಮರದ ಫ್ರೆಶ್ ಪಲ್ಪ್: ಟಿಶ್ಯೂ ಪೇಪರ್ ಮರುಬಳಕೆಗೆ ಯೋಗ್ಯವಲ್ಲ. ಅದನ್ನು ತಯಾರಿಸಲು ಹೊಸ ಮರಗಳನ್ನೇ ಕತ್ತರಿಸಬೇಕಾಗುತ್ತದೆ. ಹೆಚ್ಚಾಗಿ ಸಾಫ್ಟ್ ಟಿಶ್ಯೂ ತಯಾರಿಕೆಗೆ ಮರದ ಫ್ರೆಷ್ ಪಲ್ಪ್ ಬಳಸಲಾಗುತ್ತದೆ. ಇದಕ್ಕಾಗಿಯೇ ಒಂದು ದಿನಕ್ಕೆ 27,000 ಮರಗಳನ್ನು ಕಡಿಯಲಾಗುತ್ತದೆ. ಒಂದು ದಿನಕ್ಕೆ 27 ಸಾವಿರ ಮರಗಳು ಎಂದಾದರೆ ವರ್ಷಕ್ಕೆ 1 ಕೋಟಿ ಮರಗಳು ಕೇವಲ ಟಿಶ್ಯೂ ತಯಾರಿಕೆಗೆಂದು ನಾಶವಾಗುತ್ತವೆ. ಇದೇ ರೀತಿ ಮುಂದುವರಿದರೆ ಮುಂದಿನ 100 ವರ್ಷಗಳಲ್ಲಿ ಮಾನವನ ಉಳಿವು ಖಂಡಿತ ಅನುಮಾನ ಎಂದು ಸ್ಪೀಕಿಂಗ್ ಟ್ರೀ.ಇನ್ ವರದಿ ತಿಳಿಸಿದೆ.

    ಟಿಶ್ಯೂ ತಯಾರಿಗೆ ಮರಗಳ ಮಾರಣಹೋಮ: ಜಗತ್ತಿನಾದ್ಯಂತ ಟಿಶ್ಯೂ ಪೇಪರ್ ಮತ್ತು ಕಾಗದ ತಯಾರಿಸಲು ಒಂದು ವರ್ಷಕ್ಕೆ 1 ಕೋಟಿ ಮರಗಳನ್ನು ನಾಶ ಮಾಡಲಾಗುತ್ತದೆ. ಮಾನವನಿಗೆ ಆರಾಮದಾಯಕ ಉಸಿರಾಟ ನಡೆಸಲು ಕನಿಷ್ಠ ಶೇ.33 ಮರಗಳಿಂದ ಕೂಡಿರುವ ನಿಸರ್ಗದ ಅಗತ್ಯವಿದೆ ಎಂದು ವರದಿ ಹೇಳುತ್ತದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವ ಟಿಶ್ಯೂ ಪೇಪರ್​ಗೆ ವೈಟ್ ಶೀಟ್​ಗಳ ತಯಾರಿಕೆಗೆ ಅಗತ್ಯವಿರುವ ಮರಗಳನ್ನು ಮೀರಿ ಕಡಿಯಲಾಗುತ್ತಿದೆ ಎಂಬುದರ ಜತೆಗೆ ಟಿಶ್ಯೂ ಮರುಬಳಕೆಗೆ ಯೋಗ್ಯವಿಲ್ಲ, ಅದು ಕೇವಲ ‘ಒನ್ ಟೈಮ್ ಯ್ಯೂಸ್’ ಎಂಬ ಸಂಗತಿ ಸದ್ಯ ಪರಿಸರದ ಮೇಲೆ ಭಾರಿ ಒತ್ತಡ ಹೇರಿದೆ. ಒಂದು ದಟ್ಟ ಅರಣ್ಯದಲ್ಲಿ ಬೃಹತ್ ಮರಗಳು ಕ್ಷೀಣಿಸುತ್ತ ಹೋದರೆ ಮತ್ತೆ ಅದೇ ರೀತಿ ಮರಗಳು ಬೆಳೆದು ನಿಲ್ಲಲು ಹಲವಾರು ವರ್ಷಗಳೇ ಬೇಕಿವೆ.

    ಯುವಜನತೆಯಿಂದಲೇ ಹೆಚ್ಚು ಬಳಕೆ!

    ಸಾರ್ವಜನಿಕವಾಗಿ ಟಿಶ್ಯೂ ಪೇಪರ್ ಬಳಸದೇ ಹೋದರೆ ಅದೇನೋ ಗೌರವ ಕಡಿಮೆಯಾದಂತೆ ಎಂಬ ಭಾವ ಇಂದಿನ ಹಲವಾರು ಯುವಕ-ಯುವತಿಯರಲ್ಲಿ ಮೂಡಿದೆ. ಹೋಟೆಲ್​ನಲ್ಲಿ ಊಟ ಮಾಡಿದಾಗ ಬಾಯಿ ಒರೆಸಲು, ಕೈ ಒರೆಸಲು, ಮುಖ ಒರಸೆಲು ಟಿಶ್ಯೂ ಬೇಕು. ಒಟ್ಟಾರೆ ಅಗತ್ಯವಿಲ್ಲದಿದ್ದರೂ ಟಿಶ್ಯೂ ಪೇಪರ್ ಬಳಕೆ ಮಾಡುವುದರಲ್ಲಿ ಯುವಜನತೆ ಎತ್ತಿದ ಕೈ. ಅದರಲ್ಲೂ ವಿದ್ಯಾಭ್ಯಾಸ ಮಾಡುತ್ತಿರುವ ಯುವಕ-ಯುವತಿಯರು, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಟಿಶ್ಯೂ ಬಳಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಬ್ಯಾಗ್, ಪರ್ಸ್​ಗಳಲ್ಲಿ ಚಿಕ್ಕ ಪೊಟ್ಟಣ ಗಾತ್ರದಲ್ಲಿ ಲಭ್ಯವಾಗುವ ಡ್ರೖೆ ಮತ್ತು ವೆಟ್ ಟಿಶ್ಯೂಗಳನ್ನು ಕೊಂಡೊಯ್ದು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಹಾಗಾದರೆ ಟಿಶ್ಯೂ ಪೇಪರ್ ಉಪಯೋಗಿಸುವುದೇ ತಪ್ಪಾ? ಟಿಶ್ಯೂ ಬಳಸಲೇಬಾರದು ಎಂಬ ಹೇರಿಕೆನಾ? ಇಲ್ಲ. ಇದಕ್ಕೆ ಪರ್ಯಾಯ ಏನು ಎಂಬುದನ್ನು ನಾವು ಅರಿಯಬೇಕು.

    ಪರ್ಯಾಯವೇನು? ನಿಯಂತ್ರಣ ಹೇಗೆ?

    ಟಿಶ್ಯೂ ಅಸ್ತಿತ್ವಕ್ಕೂ ಮುನ್ನ ಎಲ್ಲರ ಬಳಿಯೂ ಕರವಸ್ತ್ರ ಬಳಕೆಯಲ್ಲಿತ್ತು. ಇಂದಿಗೂ ಹಲವರು ಮುಖ, ಕೈ ಒರೆಸಲು ಕರವಸ್ತ್ರವನ್ನೇ ಬಳಸುತ್ತಿದ್ದಾರೆ. ಇದೇ ಪ್ರವೃತ್ತಿ ಈಗ ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಂದುವರಿದರೆ ಪ್ರಾಯಶಃ ಟಿಶ್ಯೂ ಬಳಕೆಯನ್ನು ನಿಯಂತ್ರಿಸಬಹುದು. ನಮ್ಮ ಶುಚಿತ್ವ ಕಾಪಾಡಿಕೊಳ್ಳಲು ನಮ್ಮೊಂದಿಗೆ ಸದಾ ಕರವಸ್ತ್ರ ಇಟ್ಟುಕೊಳ್ಳುವುದರಿಂದ ಅನಗತ್ಯ ಟಿಶ್ಯೂ ಪೇಪರ್ ಬಳಕೆಗೆ ಫುಲ್ ಸ್ಟಾಪ್ ಇಡಬಹುದು.

    ಅಂಕಿ-ಅಂಶಗಳು ಹೇಳುವುದೇನು?

    ವಿಶ್ವಾದ್ಯಂತ ಅಮೆರಿಕನ್ನರು ವರ್ಷಕ್ಕೆ 141 ಟಿಶ್ಯೂ ರೋಲ್ ಬಳಕೆ ಮಾಡುತ್ತಾರೆ. ಅಂದರೆ 12.7 ಕೆಜಿಯಷ್ಟು ಬಳಸುತ್ತಾರೆ. ಈ ಮುಖೇನ ಟಾಯ್ಲೆಟ್ ಪೇಪರ್ ಬಳಕೆಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಜರ್ಮನಿ ದ್ವಿತೀಯ ಸ್ಥಾನದಲ್ಲಿದೆ ಮತ್ತು ಯುಕೆ ಮೂರನೇ ಸ್ಥಾನ ಗಳಿಸಿದೆ. ಜರ್ಮನಿಯಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 134 ರೋಲ್​ಗಳನ್ನು ಬಳಸುತ್ತಾನೆ. ಅಂದರೆ ಆತ 12.1 ಕೆಜಿ ಟಾಯ್ಲೆಟ್ ಪೇಪರ್ ಬಳಸುತ್ತಾನೆ. ಒಟ್ಟಾರೆ 2018ರಲ್ಲಿ ಜರ್ಮನಿ ಒಟ್ಟು 1.45 ಮಿಲಿಯನ್ ಟನ್ ಟಾಯ್ಲೆಟ್ ಪೇಪರ್ ಬಳಸಿದೆ. ಯುನೈಟೆಡ್ ಕಿಂಗ್​ಡಮ್ ಪ್ರತಿ ವ್ಯಕ್ತಿ 127 ರೋಲ್ ಅಂದರೆ 11.4 ಕೆಜಿ ಟಾಯ್ಲೆಟ್ ಪೇಪರ್ ಬಳಸಿದ್ದಾರೆ. 2018ರಲ್ಲಿ ಒಟ್ಟು 1.12 ಮಿಲಿಯನ್ ಟನ್​ಗಳನ್ನು ಉಪಯೋಗಿಸಿದೆ ಎಂದು ಸೈನ್ಸ್ ಡೈರೆಕ್ಟ್ ವರದಿ ಹೇಳುತ್ತದೆ. ಟಿಶ್ಯೂ ಬಳಕೆಯಲ್ಲಿ ಅಮೆರಿಕ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತ ಸ್ವಲ್ಪ ದೂರದಲ್ಲಿದೆ ಅಷ್ಟೇ. ಸದ್ಯ ಭಾರತದಲ್ಲಿ ಯಾವುದೇ ಅಂಕಿ-ಅಂಶಗಳು ಇಲ್ಲಿಯವರೆಗೂ ದಾಖಲಾಗಿಲ್ಲ. ಇದಕ್ಕೆ ಸೂಕ್ತ ಸಮೀಕ್ಷೆ ಇನ್ನೂ ನಡೆದಿಲ್ಲ. ಆರ್​ಐಎಸ್​ಐ (ರಿಸೋರ್ಸ್ ಇನ್​ಫಾಮೇಷನೇ ಸಿಸ್ಟಮ್್ಸ ಇಂಕ್) ಪ್ರಕಾರ 2026ರ ವೇಳೆಗೆ ಭಾರತದಲ್ಲಿ ಸರಾಸರಿ ಒಂದು ವರ್ಷಕ್ಕೆ ಒಬ್ಬ ವ್ಯಕ್ತಿ ಗರಿಷ್ಠ ಎಂದರೆ 55 ಕೆಜಿ ಟಿಶ್ಯೂ ಬಳಕೆ ಮಾಡುತ್ತಾನೆ. ಭಾರತದಲ್ಲಿ ಇದೇ ರೀತಿ ಟಿಶ್ಯೂ ಬಳಕೆ ಯಥೇಚ್ಛವಾಗಿ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಬಂಜರೂ ಭೂಮಿ ನೋಡುವಂಥ ಪರಿಸ್ಥಿತಿ ಎದುರಾಗುವುದರಲ್ಲಿ ಅನುಮಾನವೇ ಇಲ್ಲ.

    ಪ್ರಕೃತಿಗೆ ಟಿಶ್ಯೂ ದೊಡ್ಡ ಇಶ್ಯೂ: ನಿಯಂತ್ರಣಕ್ಕೆ ಕರವಸ್ತ್ರವೇ ಅಸ್ತ್ರ..

    ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಟಿಶ್ಯೂ ಪೇಪರ್ ಬಳಕೆ ಸದ್ಯದ ಮಟ್ಟಿಗೆ ಕಡಿಮೆ ಇದೆ. ಆದರೆ ಯುಎಸ್ ಮತ್ತು ಯುಕೆಗೆ ಹೋಲಿಸಿದರೆ ಭಾರತ ಮೂರು ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವುದರಿಂದ ಭವಿಷ್ಯದಲ್ಲಿ ಟಿಶ್ಯೂ ಬಳಕೆ ಅಧಿಕವಾಗಬಹುದು. ಜೀವನಶೈಲಿಯಲ್ಲಿ ಬದಲಾವಣೆ ಎಂಬ ಹೆಸರಿನಲ್ಲಿ ಪರಿಸರ ಸಂರಕ್ಷಣೆಯ ಪರಿಕಲ್ಪನೆಗಳಿಗೆ ಅನುಚಿತ ವಿಷಯಗಳನ್ನು ಪರಿಚಯಿಸಬೇಡಿ. ಮಾರುಕಟ್ಟೆಯಲ್ಲಿ ಕಣ್ಣಿಗೆ ಕಾಣುವ ಅಥವಾ ಕೈಗೆ ಲಭ್ಯವಾಗುವ ವಸ್ತುಗಳನ್ನು ಬಳಸುವ ಮೊದಲು ಭಾರತೀಯರು ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಏಕೆಂದರೆ ಹೆಚ್ಚಿನ ಕಂಪನಿಗಳು ಭಾರತೀಯ ಮಾರುಕಟ್ಟೆಯತ್ತ ಹೆಚ್ಚು ಆಕರ್ಷಿತವಾಗಿವೆ. ಕಾರಣ ನಮ್ಮಲ್ಲಿನ ಜನಸಂಖ್ಯೆ! ಇದನ್ನು ತಮ್ಮ ಲಾಭದ ಸಲುವಾಗಿ ಉಪಯೋಗಿಸಿಕೊಳ್ಳುತ್ತಾರೆ. ಪರಿಸರಕ್ಕೆ ಅನುಗುಣವಾಗುವಂತೆ ಸಾಂಪ್ರದಾಯಿಕ ವಸ್ತುಗಳನ್ನು ಬಳಕೆ ಮಾಡುವ ಮುಖೇನ ಇಂಥ ಸಮಸ್ಯೆಗಳಿಗೆ ತೆರೆ ಎಳೆಯೋಣ.
    | ಡಾ. ಆರ್.ಲತಾಮಣಿ, ಪ್ರಾಧ್ಯಾಪಕರು, ಪರಿಸರ ಅಧ್ಯಯನ, ಮೈಸೂರು

    ಅರಣ್ಯಕ್ಕೆ ಕೊಡಲಿ ಪೆಟ್ಟು

    ಟಿಶ್ಯೂ ಪೇಪರ್ ಹೇಗೆ ಉತ್ಪಾದನೆಯಾಗುತ್ತದೆ? ಒಂದು ರೋಲ್ ತಯಾರಿಸಲು ಕನಿಷ್ಠ 1.5 ಪೌಂಡ್ ಅಂದರೆ 0.68 ಕೆಜಿ ಮರದ ಅಗತ್ಯವಿದೆ. ಮುಖ್ಯವಾಗಿ ಪೇಪರ್ ಮೃದುವಾಗಿರಲು ಮರದ ಫೈಬರ್ ತಿರುಳು ಅಥವಾ ಮರದ ಫೈಬರ್ ಪಲ್ಪ್ ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಹೊಸ ಮರಗಳನ್ನೇ ಕತ್ತರಿಸುತ್ತಾರೆ. ಅಧಿಕವಾಗಿ ಕೆನಡದ ಬೋರಿಯಲ್ ಮತ್ತು ಸ್ವೀಡನ್​ನ ಗ್ರೇಟ್ ನಾರ್ದರ್ನ್ ಅರಣ್ಯಪ್ರದೇಶಗಳಲ್ಲಿನ ಮರಗಳನ್ನು ನಾಶ ಮಾಡಲಾಗುತ್ತದೆ.

    ಪರಿಸರದ ಸಮತೋಲನದ ಮೇಲೂ ಪರಿಣಾಮ

    ಒಂದೆಡೆ ಟಿಶ್ಯೂ ಪೇಪರ್ ತಯಾರಿಸಲು ಮರದ ನಾಶ ಹೆಚ್ಚುತ್ತಿದ್ದು, ನೈಸರ್ಗಿಕ ಅರಣ್ಯ ವಲಯ ಮರೆಯಾಗುತ್ತಿದೆ. ಟಿಶ್ಯೂ ಪೇಪರ್​ಗಳನ್ನು ಮರದ ಪಲ್ಪ್ ಮತ್ತು ಸಂಶ್ಲೇಷಿತ ವಸ್ತುಗಳ ಮಿಶ್ರಣದಿಂದ ತಯಾರಿಸುವ ಕಾರಣ, ಇದು ಒಳಚರಂಡಿ ವ್ಯವಸ್ಥೆಯಲ್ಲೂ ಸಮಸ್ಯೆಯನ್ನು ಉಂಟುಮಾಡುತ್ತದೆ. ಅದರಲ್ಲೂ ನಮ್ಮೆಲ್ಲರಿಗೂ ತಿಳಿದಿರುವಂತೆ ಇಂದಿಗೂ ಒಳಚರಂಡಿ ಯೋಜನೆ ನಿರ್ವಹಣೆಯು ಅಧಿಕಾರಿಗಳಿಗೆ ಟಿಶ್ಯೂ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಈ ರೀತಿಯ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಬದಲು ಅಗತ್ಯವಿದ್ದಲ್ಲಿ ಮಾತ್ರ ಡ್ರೖೆ ಮತ್ತು ವೆಟ್ ಟಿಶ್ಯೂಗಳನ್ನು ಬಳಸುವ ಮೂಲಕ ಸಮಾಜಕ್ಕೆ ಉಂಟಾಗುವ ತೊಂದರೆಗಳನ್ನು ತಪ್ಪಿಸೋಣ ಮತ್ತು ಪರಿಸರ ಸಮತೋಲನವನ್ನು ಕಾಪಾಡೋಣ.

    ಕರವಸ್ತ್ರ ಇಟ್ಟುಕೊಳ್ಳುವುದು ಕಷ್ಟವೇ?

    ಆರು ಇಂಚಿನ ಮೊಬೈಲ್​ಫೋನ್ ಇಟ್ಟುಕೊಳ್ಳುವ ನಮಗೆ ಅಂಗೈ ಅಗಲದ ಕರವಸ್ತ್ರ ಇಟ್ಟುಕೊಳ್ಳುವುದು ಕಷ್ಟವೇ? ದಿನನಿತ್ಯ 10 ಟಿಶ್ಯೂ ಉಪಯೋಗಿಸುವವರು ಕರವಸ್ತ್ರ ಬಳಸಿ ಅದನ್ನು 3-4ಕ್ಕೆ ಇಳಿಸಿಕೊಳ್ಳಬಹುದು ಇಲ್ಲವೇ ಟಿಶ್ಯೂ ಬಳಕೆಯನ್ನೇ ಸಂಪೂರ್ಣವಾಗಿ ತಪ್ಪಿಸಬಹುದು. ಬಹಳಷ್ಟು ಮಂದಿ ಇದನ್ನು ಅನುಸರಿಸುವ ಮೂಲಕ ಟಿಶ್ಯೂ ಬಳಕೆಯಲ್ಲಿ ಕ್ರಮೇಣವಾಗಿ ಭಾರಿ ಇಳಿಮುಖ ನೋಡಬಹುದು. ಮರಗಳಿಗೆ ಮಾರಕವಾಗದಿರುವ ಮೂಲಕ ಪರಿಸರಕ್ಕೆ ಒಂದು ಅತ್ಯಮೂಲ್ಯ ಕೊಡುಗೆ ನೀಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts