More

    ಆರೋಗ್ಯಕರ ಜೀವನಕ್ಕಾಗಿ 5 ಸರಳ ಡಯಟ್​ ಟಿಪ್ಸ್​…

    ಬೆಂಗಳೂರು: ಆರೋಗ್ಯಕರವಾಗಿ ಇರಲು ಭಾರೀ ಶ್ರಮ ಪಡುವ ಅಗತ್ಯವಿಲ್ಲ. ನಿಯಮಿತ ಸರಳ ವ್ಯಾಯಾಮ, ಸರಳ ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನವನ್ನು ನಾವು ಪಡೆಯಬಹುದು.

    ಆಹಾರ ಆರೋಗ್ಯ ಮತ್ತು ಫಿಟ್‌ನೆಸ್‌ನ ಎರಡು ಪ್ರಮುಖ ಭಾಗ.
    ನಿಮ್ಮ ಫಿಟ್‌ನೆಸ್ ಉಳಿಸಿಕೊಳ್ಳಲು ಈ ಸರಳ ವಿಧಾನಗಳು ನಿಮಗೆ ಸಹಾಯ ಮಾಡಬಹುದು. ಇವು ಮಸಲ್​ ಗೇನ್​ ಅಥವಾ ತೂಕ ಇಳಿಸಿಕೊಳ್ಳಲೂ ಸಹಾಯ ಮಾಡಲಿವೆ. ನಿಮ್ಮ ದಿನಚರಿಯನ್ನು ಪ್ಲಾನ್​ ಮಾಡಿ ನಿಮ್ಮ ಊಟದಲ್ಲಿ ಹೆಚ್ಚು ಪೌಷ್ಟಿಕ ಆಹಾರಗಳನ್ನು ಸೇರಿಸಿದರೆ ಅರ್ಧ ಗೆದ್ದಂತೆ. ಆರೋಗ್ಯಕರ ಜೀವನಶೈಲಿಯನ್ನು ಸಾಧಿಸಲು ಸುಲಭವಾಗಿ ಅನುಸರಿಸಬಹುದಾದ ಸರಳ ಆಹಾರ ಸಲಹೆಗಳ ಪಟ್ಟಿ ಹೀಗಿದೆ:

    1. ಪ್ರೋಬಯೋಟಿಕ್ ಆಹಾರ:

    ಪ್ರೋಬಯಾಟಿಕ್‌ ಆಹಾರ ಎಂದರೆ ಏನು ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ನಮ್ಮ ಕರುಳಿನಲ್ಲಿ ಕೋಟ್ಯಾಂತರ ಬ್ಯಾಕ್ಟೀರಿಯಾ ಜೀವಿಸುತ್ತಾ ಇರುತ್ತವೆ. ಇವುಗಳಲ್ಲಿ ಕೆಲವು ನಮಗೆ ಸಹಾಯ ಮಾಡಿದರೆ ಇನ್ನೂ ಕೆಲವು ರೋಗಗಳನ್ನು ಉಂಟು ಮಾಡುತ್ತವೆ. ನಮಗೆ ಉಪಕಾರಿ ಬ್ಯಾಕ್ಟೀರಿಯಾಗಳನ್ನು ಉಳಿಸಿಕೊಂಡು ಉಳಿದವುಗಳನ್ನು ನಾಶ ಮಾಡುವಂತಹ ಆಹಾರ ಸೇವಿಸಬೇಕು. ಮೊಸರು, ಕೊಂಬುಚಾ, ಕೆಫಿರ್ (ಹಾಲಿನ ಉತ್ಪನ್ನ)​ ಮತ್ತು ಸಣ್ಣಗೆ ಹೆಚ್ಚಿದ ಕ್ಯಾಬೇಜ್​ನಂತಹ ಆಹಾರಗಳಲ್ಲಿ ಅವುಗಳನ್ನು ಕಾಣಬಹುದು. ಈ ಆಹಾರಗಳನ್ನು ಸೇವಿಸುವುದರಿಂದ ಕರುಳನ್ನು ಆರೋಗ್ಯವಾಗಿಡಬಹುದು. ಇದರಿಂದ ಜೀರ್ಣಕ್ರಿಯೆ ಕೂಡ ಸುಧಾರಿಸುತ್ತದೆ.

    2. ನಾರಿನಂಶವಿರುವ ಆಹಾರವನ್ನು ಸೇವಿಸಿ

    ತರಕಾರಿ, ಹಣ್ಣು, ಓಟ್ಸ್, ಧಾನ್ಯಗಳು, ಕೆಂಪಕ್ಕಿ, ಬೀನ್ಸ್, ಬಟಾಣಿ ಮುಂತಾದ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಶರೀರಕ್ಕೆ ಹೆಚ್ಚಿನ ನಾರಿನ ಅಂಶ ಸೇರಿಸಿದಂತಾಗುತ್ತೆ.

    ನಾರಿನಂಶವನ್ನು ತಿನ್ನುವ ಆಹಾರದಲ್ಲಿ ಹೆಚ್ಚಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಕರುಳಿನಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆ ಮತ್ತು ಗ್ಯಾಸ್​ ಆಗುವುದನ್ನು ತಪ್ಪಿಸುತ್ತೆ. ನಾರಿನಂಶ ಕರುಳಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಸಹಕರಿಸುತ್ತೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ರಕ್ತವನ್ನು ಪ್ರವೇಶಿಸುವ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಕೊಬ್ಬು ಕರಗಿಸಲೂ ಸಹಾಯ ಮಾಡುತ್ತದೆ.

    3. ನಿಯಮಿತ ಅಂತರದಲ್ಲಿ ನೀರು ಕುಡಿಯಿರಿ

    ದೇಹದ ಪ್ರತಿಯೊಂದು ಜೀವಕೋಶ ಸರಿಯಾಗಿ ಕೆಲಸ ಮಾಡಲು ಬೇಕಾಗಿರುವ ಅಂಶವೆಂದರೆ ನೀರು. ಶರೀರದ ಎಲ್ಲಾ ಭಾಗಗಳು ವ್ಯವಸ್ಥಿತವಾಗಿ ಕೆಲಸ ಮಾಡಲು, ದೇಹದ ತಾಪಮಾನ ಕಾಪಾಡಲು ಸಹಾಯ ಮಾಡುವುದು ಇದೇ ನೀರು.

    ನಿಯಮಿತವಾಗಿ ಸಾಕಷ್ಟು ನೀರು ಕುಡಿಯುವುದರಿಂದ ಅನಗತ್ಯ ಹಸಿವನ್ನು ತಡೆಯಬಹುದು. ಇದರ ನೇರ ಪರಿಣಾಮ ಜಂಕ್​ ಫುಡ್​ ಮೇಲೆ ಆಗುತ್ತೆ. ಹೆಚ್ಚು ನೀರು ಕುಡಿಯುವುದರಿಂದ ಜಂಕ್​ ಫುಡ್​ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು. ನೀರು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರಯಾಣ ಮಾಡುವಾಗ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಸದಾ ಒಯ್ಯಿರಿ. ಆದಷ್ಟು ಸಕ್ಕರೆ ಸೇರಿಸಿದ ಕಾರ್ಬೊನೇಟೆಡ್ ಪಾನೀಯಗಳನ್ನು ತಪ್ಪಿಸಿ. ಸೋಡಾ ನೀರಿನ ಬದಲಿಗೆ ಸರಳ ನೀರನ್ನು ಆಯ್ಕೆ ಮಾಡಿ. ಇದರಿಂದ ಶರೀರದಲ್ಲಿ ಇಂಗಾಲ ಆಮ್ಲದ ಪ್ರಮಾಣ ಕಡಿಮೆ ಮಾಡಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಬಹುದು.

    4. ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿ ಹೆಚ್ಚಿರಲಿ

    ನಿಮ್ಮ ಆಹಾರದಲ್ಲಿ ಹಣ್ಣು-ತರಕಾರಿಗಳು ಹೆಚ್ಚಾಗಿರಲಿ. ಅವು ಜೀವಸತ್ವಗಳು, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್​ನಿಂದ ತುಂಬಿರುತ್ತವೆ. ಅದಲ್ಲದೇ ಈಗಾಗಲೇ ಹೇಳಿರುವಂತೆ ಹಣ್ಣು-ತರಕಾರಿಗಳು ನಾರಿನಂಶದ ಉತ್ತಮ ಮೂಲವೂ ಹೌದು.

    ನೀವು ಕೊಬ್ಬು ಕರಗಿಸಲು ಕಡಿಮೆ ಕಾರ್ಬೋಹೈಡ್ರೇಟ್​ ಇರುವ ಆರಾಹವನ್ನು ಸೇವಿಸಬೇಕು. ಇದಕ್ಕಾಗಿ ಹಣ್ಣು-ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೀವು ಅಧಿಕ ರಕ್ತದ ಸಕ್ಕರೆ ಹೊಂದಿದ್ದರೆ, ನೀವು ಮಧುಮೇಹಿಗಳಿಗೆ ಸುರಕ್ಷಿತವಾದ ಹಣ್ಣುಗಳನ್ನು ತಿನ್ನಬೇಕು. ಮಧುಮೇಹಿಗಳು ಡಯಟ್​ ಬದಲಾಯಿಸುವ ಮ,ಉನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ಉತ್ತಮ ಪ್ರಯೋಜನಗಳನ್ನು ಪಡೆಯಲು ಆ್ಯಂಟಿ ಆಕ್ಸಿಡೆಂಟ್​ ಹೆಚ್ಚಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಲು ಪ್ರಯತ್ನಿಸಿ.

    5. ಸರಿಯಾದ ಹೊತ್ತಿಗೆ ಊಟ ಮಾಡಿ

    ದಿನದಲ್ಲಿ ಸರಿಯಾದ ಹೊತ್ತಿಗೆ ತಿನ್ನುವುದು ಜೀರ್ಣಕ್ರಿಯೆಯನ್ನು ಸರಿಯಾಗಿ ಇರಿಸುತ್ತದೆ. ಸರಿಯಾದ ಸಮಯಕ್ಕೆ ತಿನ್ನುವುದರಿಂದ ಹಸಿವು ಕೂಡ ನಿಯಂತ್ರಣದಲ್ಲಿ ಇರುತ್ತದೆ. ಏನು ತಿನ್ನಬೇಕು ಎಂದು ಮುಂಚಿತವಾಗಿ ಪ್ಲಾನ್​ ಮಾಡಿ ಸಮತೋಲಿತ ಮತ್ತು ವೈವಿಧ್ಯಮಯ ಆಹಾರವನ್ನು ಸೇವಿಸಿ.

    ನಿಯಮಿತ ಸಮಯಕ್ಕೆ ಊಟ ಮಾಡುವುದರಿಂದ ನಿಮ್ಮ ಹಸಿವಿನ ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತವೆ. ಇದು ಹೊಟ್ಟೆಯಲ್ಲಿ ಗ್ಯಾಸ್​ಮತ್ತು ಅಸಿಡಿಟಿ ಆಗದಂತೆ ತಡೆಯುತ್ತದೆ. ಕಟ್ಟುನಿಟ್ಟಾದ ಆಹಾರಕ್ರಮ ಎಂದರೆ ರುಚಿಯನ್ನು ಬಿಟ್ಟುಬಿಡುವುದು ಎಂದಲ್ಲ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಬಾಯಿಚಪಲ ತೀರಿಸಿಕೊಂಡರೆ ಅಂತಹ ವ್ಯತ್ಯಾಸ ಆಗಲ್ಲ.

    ಆದರೆ ಡಯಟ್​ನಲ್ಲಿ ಏನೇ ಬದಲಾವಣೆ ಮಾಡಿಕೊಂಡರೂ ನಿಯಮಿತ ವ್ಯಾಯಾಮ ಇಲ್ಲದೆ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ ಎಂದು ನೆನಪಿಟ್ಟುಕೊಳ್ಳ ಬೇಕು. ಉತ್ತಮ ಫಲಿತಾಂಶಗಳನ್ನು ಪಡೆಯಲು ಮೇಲಿನ ಸರಳ ಆಹಾರ ಸೂತ್ರಗಳೊಂದಿಗೆ ವ್ಯಾಯಾಮ ಮಾಡಿದರೆ ಇನ್ನೂ ಒಳ್ಳೆಯದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts