More

    ತ್ರಿವಿಕ್ರಮನ ಪ್ರೀತಿ, ಪರಾಕ್ರಮ: ಸಿನಿಮಾ ವಿಮರ್ಶೆ

    • ಚಿತ್ರ: ತ್ರಿವಿಕ್ರಮ
    • ನಿರ್ದೇಶನ: ಸಹನಾ ಮೂರ್ತಿ
    • ನಿರ್ಮಾಣ: ರಾಮ್ಕೋ ಸೋಮಣ್ಣ
    • ತಾರಾಗಣ: ವಿಕ್ರಮ್ ರವಿಚಂದ್ರನ್, ಆಕಾಂಕ್ಷಾ ಶರ್ಮ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಶಿವಮಣಿ, ತುಳಸಿ ಶಿವಮಣಿ, ರೋಹಿತ್ ರಾಯ್ ಮುಂತಾದವರು

    | ಹರ್ಷವರ್ಧನ್ ಬ್ಯಾಡನೂರು

    ‘ಲವ್ ಮಾಡೋಕೆ ರೇಂಜ್ ನೋಡಬಾರದು, ಲವ್​ನೇ ರೇಂಜಲ್ಲಿ ಮಾಡಬೇಕು’ ಎಂದು ಶ್ರೀಮಂತ ಮನೆತನದ ನಾಯಕಿ ತ್ರಿಶಾಗೆ (ಆಕಾಂಕ್ಷಾ ಶರ್ಮ) ಹೇಳುತ್ತಾನೆ ಮಧ್ಯಮ ವರ್ಗದ ನಾಯಕ ವಿಕ್ರಮ್ (ವಿಕ್ರಮ್ ರವಿಚಂದ್ರನ್). ಅದೇ ರೇಂಜ್​ನಲ್ಲಿ ಆಕೆಯನ್ನು ಪ್ರೀತಿ ಮಾಡುತ್ತಾನೆ. ಆಕೆಯೂ ಅವನ ಜತೆ ‘ಪ್ರೇಮಲೋಕ’ ಸೃಷ್ಟಿಸಿಕೊಳ್ಳುತ್ತಾಳೆ. ಆದರೆ, ಅಷ್ಟರಲ್ಲಿ ಸುಳ್ಳೆಂದರೆ ದೂರ, ಹಿಂಸೆಯಿಂದ ಮಾರು ದೂರ ಓಡುವ ಶಾಂತಿ ಸಾರುವ ಜೈನ ಧರ್ಮದ ಹುಡುಗಿಗೆ ನಾಯಕನ ರಕ್ತಸಿಕ್ತ ಚರಿತ್ರೆಯ ದರ್ಶನವಾಗುತ್ತದೆ. ಅಲ್ಲಿಗೆ ಬ್ರೇಕಪ್. ಮುಂದೆ? ‘ರಣಧೀರ’ನಂತ ಹುಡುಗನಿಗೆ ಮತ್ತೆ ‘ಹೂ’ನಂತ ಹುಡುಗಿ ಜೊತೆಯಾಗುತ್ತಾಳಾ? ಸಿನಿಮಾ ನೋಡಿ.

    ವಿಕ್ರಮ್ ರವಿಚಂದ್ರನ್ ಮೊದಲ ಚಿತ್ರವಾಗಿದ್ದರೂ, ಹಾಗನಿಸುವುದಿಲ್ಲ. ಅಷ್ಟು ಲೀಲಾಜಾಲವಾಗಿ ನಟಿಸಿದ್ದಾರೆ. ಅಲ್ಲಲ್ಲಿ ಕ್ರೇಜಿಸ್ಟಾರ್ ಅವರಂತೆಯೇ ಕಾಣುತ್ತಾರೆ. ಕಣ್ಣುಗಳೇ ಅವರಿಗೆ ಪ್ಲಸ್. ಡ್ಯಾನ್ಸ್, ಆಕ್ಷನ್, ನಟನೆ, ಎಲ್ಲದರಲ್ಲೂ ಗಮನ ಸೆಳೆಯುತ್ತಾರೆ. ಆದರೆ, ಮುಂದಿನ ಚಿತ್ರಗಳಲ್ಲಿ ಅವರು ಉಚ್ಚಾರಣೆ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕು ಅಂತ ಅನ್ನಿಸದೇ ಇರದು. ನಾಯಕಿ ಆಕಾಂಕ್ಷಾ ಶರ್ಮ ಮುದ್ದಾಗಿ ಕಾಣುವುದು ಮಾತ್ರವಲ್ಲ, ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ ಅಷ್ಟೇ ಮುದ್ದಾಗಿ ನಟಿಸಿದ್ದಾರೆ ಕೂಡ. ನಾಯಕ-ನಾಯಕಿಯ ಕೆಮಿಸ್ಟ್ರಿ ಚಿತ್ರದ ಹೈಲೈಟ್​ಗಳಲ್ಲೊಂದು. ನಾಯಕ ವಿಕ್ರಂ ತಂದೆಯಾಗಿ ಸುಚೇಂದ್ರ ಪ್ರಸಾದ್, ತಾಯಿಯಾಗಿ ತುಳಸಿ ಇಷ್ಟವಾಗುತ್ತಾರೆ. ಚಿಕ್ಕಣ್ಣ, ಸಾಧು ಕೋಕಿಲ ಅಲ್ಲಲ್ಲಿ ನಗಿಸುತ್ತಾರೆ. ಜಯಪ್ರಕಾಶ್, ರೋಹಿತ್ ರಾಯ್, ಆದಿ ಲೋಕೇಶ್, ಶಿವಮಣಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

    ‘ತ್ರಿವಿಕ್ರಮ’ ಎರಡೂವರೆ ತಾಸುಗಳ ಸಿನಿಮಾ. ನಿರ್ದೇಶಕ ಸಹನಾಮೂರ್ತಿ ಕೆಲವೆಡೆ ಸಹನೆ ಪರೀಕ್ಷಿಸಿದರೂ, ಕ್ಲೈಮ್ಯಾಕ್ಸ್ ಅದೆಲ್ಲವನ್ನೂ ಮರೆಸುತ್ತದೆ. ಇನ್ನೇನು ಸಿನಿಮಾ ಮುಗಿಯಿತು ಎಂದು ಎದ್ದು ಹೊರಡುವ ವೇಳೆಗೆ ಕ್ಲೈಮ್ಯಾಕ್ಸ್ ನಲ್ಲಿ ಕೊಡುವ ಒಂದು ಟ್ವಿಸ್ಟ್ ಚಿತ್ರದ ಪ್ರಮುಖ ಆಕರ್ಷಣೆ. ಅರ್ಜುನ್ ಜನ್ಯ ಅವರ ಹಾಡುಗಳು ಕೇಳುವಂತಿವೆ. ವಿಕ್ರಮ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಉತ್ತಮ ಆಯ್ಕೆಗಳನ್ನು ಮಾಡಿಕೊಂಡಲ್ಲಿ ಉತ್ತಮ ಭವಿಷ್ಯವಿದೆ.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts