More

    ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೇ ಮೀಸಲಾತಿ; ಗೊತ್ತುವಳಿ ಸ್ವೀಕರಿಸಲು ಮಹಾ ಅಧಿವೇಶನದಲ್ಲಿ ನಿರ್ಧಾರ

    ದಾವಣಗೆರೆ: ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತು ಡಿ.24ರಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನವನ್ನು ಆಯೋಜಿಸಲಾಗಿದೆ.

    ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಅಧಿವೇಶನ ನಡೆಯಲಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ತೆಲಂಗಾಣ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಒಂದು ಲಕ್ಷ ಜನರು ಪಾಲ್ಗೊಳ್ಳುವರು.

    ಅಧಿವೇಶನದ ಅಂಗವಾಗಿ ರಾಜ್ಯದ 150ಕ್ಕೂ ಅಧಿಕ ವೀರಶೈವ ಮುಖಂಡರ ಸಮ್ಮುಖದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಬಳಿಕ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಸಮಾಜ ಸಂಘಟನೆ, ಒಳಪಂಗಡಗಳ ಭೇದ ಮರೆತು ಒಗ್ಗಟ್ಟು ಪ್ರದರ್ಶನ, ಸಮಸ್ತ ವೀರಶೈವ ಲಿಂಗಾಯತರಿಗೆ ಮೀಸಲು, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮಹಿಳಾ ಸಬಲತೆ ಸೇರಿ ಪ್ರಮುಖ ವಿಷಯಗಳ ಕುರಿತು ಅಧಿವೇಶನದಲ್ಲಿ ಗೊತ್ತುವಳಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು. ಉಳಿದಂತೆ ಜ್ವಲಂತ ಸಮಸ್ಯೆಗಳ ಚರ್ಚೆ ಜತೆಗೆ ಕೃಷಿ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಯುವ, ಮಹಿಳಾ ಗೋಷ್ಠಿ ಹಾಗೂ ಉದ್ದಿಮೆ ಮತ್ತು ಕೈಗಾರಿಕೆ ಕುರಿತು ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರಿಸಿದರು.

    ಅಧಿವೇಶನದ ಯಶಸ್ಸಿಗೆ ಹತ್ತಕ್ಕೂ ಹೆಚ್ಚು ಸಮಿತಿಗಳನ್ನು ನೇಮಿಸಿ ಜವಾಬ್ದಾರಿ ನೀಡಲಾಗುತ್ತಿದೆ. ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವರು. ಎರಡನೇ ದಿನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಲಾಗಿದೆ. ಕೊನೆಯ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಮಠಾಧೀಶರಿಗೂ ಆಮಂತ್ರಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಮೀಸಲು ಶೇ.27ರಷ್ಟಿದೆ. ವೀರಶೈವ ಲಿಂಗಾಯತರಲ್ಲೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿದ್ದಾರೆ, ಹೀಗಾಗಿ ಸಮಾಜಕ್ಕೆ ಮೀಸಲು ಅಗತ್ಯವಿದೆ. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ವೀರಶೈವ ಸಮಾಜ ಇಂದು ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದರು.

    ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೇ ಮೀಸಲಾತಿ; ಗೊತ್ತುವಳಿ ಸ್ವೀಕರಿಸಲು ಮಹಾ ಅಧಿವೇಶನದಲ್ಲಿ ನಿರ್ಧಾರ
    ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸುದ್ದಿಗೋಷ್ಠಿ ನಡೆಸಿದರು. ಬಾಲ್ಕಿಯ ಶ್ರೀ ಶಿವಯೋಗೇಶ್ವರ ಶ್ರೀ, ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ , ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ ಇತರರಿದ್ದರು.

    ದಾವಣಗೆರೆಯಲ್ಲಿ ಎರಡನೇ ಬಾರಿ: ವೀರಶೈವ ಮಹಾಸಭಾ ಸ್ಥಾಪನೆಯಾಗಿ 118 ವರ್ಷಗಳಲ್ಲಿ 22 ಮಹಾ ಅಧಿವೇಶನ ನಡೆದಿವೆ. ಈ ಹಿಂದೆ 1917ರ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ನಡೆದ ಬಳಿಕ ಇದೀಗ ಎರಡನೇ ಬಾರಿ ದಾವಣಗೆರೆ ಆತಿಥ್ಯ ವಹಿಸುವ ಅವಕಾಶ ಸಿಕ್ಕಿದೆ. ಹನ್ನೊಂದು ವರ್ಷಗಳ ಹಿಂದೆ ಮೈಸೂರಿನಲ್ಲಿ 22ನೇ ಮಹಾ ಅಧಿವೇಶನ ನಡೆದಿತ್ತು ಎಂದು ಖಂಡ್ರೆ ತಿಳಿಸಿದರು.

    ಮಠಗಳಿಗೆ ನೀತಿ ಸಂಹಿತೆ: ಮಠ ಮಾನ್ಯಗಳು ಸರಿ ದಾರಿಯಲ್ಲಿ ನಡೆಯಬೇಕು ಎಂಬುದು ಎಲ್ಲರ ಆಶಯ. ಇತ್ತೀಚೆಗೆ ಅಲ್ಲೊಂದು- ಇಲ್ಲೊಂದು ಆರೋಪ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ನೀತಿ ಸಂಹಿತೆ ರೂಪಿಸುವ ಕುರಿತು ಮಹಾ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

    ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಭಾಕರ ಕೋರೆ, ಅಥಣಿ ಎಸ್. ವೀರಣ್ಣ, ಅಣಬೇರು ರಾಜಣ್ಣ, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್, ಬಾಲ್ಕಿಯ ಶ್ರೀ ಶಿವಯೋಗೇಶ್ವರ ಶ್ರೀ, ಬಾ ಮಾ ಬಸವರಾಜಯ್ಯ ಮತ್ತಿತರರು ಇದ್ದರು.

    ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

    ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts