ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಖ್ಯಾತ ಗಾಯಕರೊಬ್ಬರ ಜಾಗವನ್ನು ಭೂಮಾಫಿಯಾದವರು ಕಬಳಿಸಿದ್ದು, ಅದಕ್ಕೆ ರೋಹಿಣಿ ಸಿಂಧೂರಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೆ ಇದು ಯಾರೋ ಮೂರನೆಯವರು ಮಾಡಿರುವ ಆರೋಪವಲ್ಲ. ಖ್ಯಾತ ಗಾಯಕ ಲಕ್ಕಿ ಅಲಿ ಅವರೇ ಈ ಆರೋಪವನ್ನು ಮಾಡಿದ್ದಾರೆ.
ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರಗೊಂಡಿರುವ ಲಕ್ಕಿ ಅಲಿ ಸೋಷಿಯಲ್ ಮೀಡಿಯಾ ಮೂಲಕ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ನಾನು ಮಕ್ಸೂದ್ ಮಹಮೂದ್ ಅಲಿ, ದಿವಂಗತ ಹಿರಿಯ ನಟ ಮಹಮೂದ್ ಅಲಿ ಅವರ ಪುತ್ರ, ನಾನು ಲಕ್ಕಿ ಅಲಿ ಎಂದೂ ಕರೆಯಲ್ಪಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿರುವ ಅವರು, ಸದ್ಯ ನಾನು ದುಬೈನಲ್ಲಿದ್ದು, ಇದು ತುರ್ತು ಪ್ರಕರಣ ಎಂದು ನ್ಯಾಯಕ್ಕಾಗಿ ಡಿಜಿಪಿ ಅವರಲ್ಲಿ ಮೊರೆ ಇಟ್ಟಿದ್ದಾರೆ.
ಟ್ರಸ್ಟ್ ಪ್ರಾಪರ್ಟಿ ಆಗಿರುವ ನನ್ನ ತೋಟ ಬೆಂಗಳೂರಿನ ಯಲಹಂಕದ ಕೆಂಚೇನಹಳ್ಳಿಯಲ್ಲಿದ್ದು, ಅದನ್ನು ಬೆಂಗಳೂರಿನ ಲ್ಯಾಂಡ್ ಮಾಫಿಯಾದ ಸುಧೀರ್ ರೆಡ್ಡಿ ( ಮತ್ತು ಮಧು ರೆಡ್ಡಿ) ಒತ್ತುವರಿ ಮಾಡಿಕೊಂಡಿದ್ದು, ಅದಕ್ಕೆ ಅವರ ಪತ್ನಿ ಐಎಎಸ್ ಅಧಿಕಾರಿ ಆಗಿರುವ ರೋಹಿಣಿ ಸಿಂಧೂರಿ ನೆರವಾಗಿದ್ದಾರೆ ಎಂದು ಲಕ್ಕಿ ಅಲಿ ಬಹಿರಂಗವಾಗಿಯೇ ಆರೋಪ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಡಿ.7ರಂದು ಅಂತಿಮ ವಿಚಾರಣೆ ಇದ್ದು, ಒತ್ತುವರಿ ಮಾಡಿಕೊಂಡಿರುವ ಆ ಜಾಗವನ್ನು ಅವರು ತಮ್ಮದೇ ಎಂದು ಸಾಬೀತುಪಡಿಸಲು ಯತ್ನಿಸುತ್ತಿದ್ದು ಇದನ್ನು ತಡೆಯುವಲ್ಲಿ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಸ್ಥಳೀಯ ಪೊಲೀಸರಿಂದ ನನಗೆ ಸಹಾಯ ಸಿಗುತ್ತಿಲ್ಲ. ಅದರಲ್ಲೂ ಅವರು ಒತ್ತುವರಿದಾರರ ಪರವಾಗಿಯೇ ಇದ್ದು ನಮ್ಮ ಪರಿಸ್ಥಿತಿ ಮತ್ತು ಕಾನೂನು ಸ್ಥಿತಿಗತಿಗೆ ವಿರುದ್ಧವಾಗಿ ಇದ್ದಾರೆ. ಹೀಗಾಗಿ ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳದೆ ನನಗೆ ಬೇರೆ ದಾರಿ ಇಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಕಳೆದ ಐವತ್ತು ವರ್ಷಗಳಿಂದ ಆ ಆಸ್ತಿ ನಮ್ಮ ವಶದಲ್ಲಿದೆ, ನಾವು ಅಲ್ಲಿ ನೆಲೆಸಿದ್ದರೂ ಅವರು ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಅದರೊಳಗೆ ಬರಲು ಅವರಿಗೆ ಹಕ್ಕು ಇಲ್ಲ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ನನ್ನ ಕಾನೂನು ಸಲಹೆಗಾರರೂ ತಿಳಿಸಿದ್ದಾರೆ. ಅದಾಗ್ಯೂ ಅವರು ನಮ್ಮ ತೋಟದೊಳಗೆ ಅತಿಕ್ರಮವಾಗಿ ಹಾಗೂ ಕಾನೂನುಬಾಹಿರವಾಗಿ ಪ್ರವೇಶ ಮಾಡಿದ್ದು, ಸಂಬಂಧಿತ ದಾಖಲೆ ಕೊಡಿ ಎಂದರೆ ನೀಡಲೂ ನಿರಾಕರಿಸುತ್ತಿದ್ದಾರೆ. ಮಾತ್ರವಲ್ಲ ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲಕ್ಕಿ ಅಲಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಾನು ದುಬೈಗೆ ಹೊರಡುವ ಮುನ್ನ ನಿಮ್ಮನ್ನು ಭೇಟಿ ಮಾಡಿ ಮಾತನಾಡಬೇಕು ಅಂತಿದ್ದೆ, ಅದರೆ ನೀವು ಸಿಕ್ಕಿರಲಿಲ್ಲ. ಹೀಗಾಗಿ ನಮ್ಮ ವ್ಯಾಪ್ತಿಯ ಎಸಿಪಿ ಬಳಿ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಲಕ್ಕಿ ಅಲಿ ಡಿಜಿಪಿ ಅವರ ಗಮನಕ್ಕೆ ತರಲು ಯತ್ನಿಸಿದ್ದಾರೆ.
@DgpKarnataka
— Lucky Ali (@luckyali) December 4, 2022
Dear Sir,
I am Maqsood Mahmood Ali. Son of the Late Actor and Comedian Mehmood Ali. And also known as Lucky Ali
I am currently in Dubai for work, hence the urgency.
ಕೇಶ ಕಸಿಯಿಂದಾಗಿ ಪ್ರಾಣ ಕಳ್ಕೊಂಡ!; ಇಬ್ಬರು ಸರ್ಜನ್ ಸೇರಿ ನಾಲ್ವರ ಬಂಧನ..
ದೇಶದಲ್ಲಿ ಟ್ರೆಂಡಿಂಗ್ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!