More

    ವೀರಶೈವರಲ್ಲಿ ಬೇಕು ಏಕತೆ -ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಶಯ

    ದಾವಣಗೆರೆ: ವೀರಶೈವ ಸಮಾಜ ಒಂದಾಗಬೇಕು. ಸಮಾಜ, ಧರ್ಮ ಹಾಗೂ ಸಮಷ್ಟಿ ಪ್ರಜ್ಞೆ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಮನೋಭಾವ ಬಾರದಿದ್ದರೆ ದುರಂತ ಕಾದಿದೆ ಎಂದು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಕಾರ ಸಂಘವೊಂದರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದಲ್ಲಿ ಮಠಾಧೀಶರು, ಗಣಾಚಾರಿಗಳು, ಪಂಚಪೀಠಗಳು, ವಿರಕ್ತರು ಎಲ್ಲರೂ ಬೇಕು. ಇಂತಹ ಸಮಗ್ರ ಜಂಗಮ ಪರಂಪರೆ ಬೆಳೆಸುವ ಹೊಣೆಗಾರಿಕೆ ಎಲ್ಲರದು ಎಂದರು.
    ಹತ್ತಿಪ್ಪತ್ತು ವರ್ಷದ ಹಿಂದೆ ಹಬ್ಬ-ಹರಿದಿನ, ಶ್ರಾವಣ ಮಾಸದಲ್ಲಿ ಜಂಗಮರಿಗೆ ಗದ್ದಿಗೆ ಕಂಬಳಿ ಹಾಸಿ, ಪ್ರಸಾದ ಕಲ್ಪಿಸಿ, ದಕ್ಷಿಣೆ ನೀಡುತ್ತಿದ್ದ ಸಂಸ್ಕೃತಿ ಮರೆಯಾಗಿದೆ. ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.  
    ಶಾಸ್ತ್ರಗಳು ಹೇಳಿದಂತೆ ಗುರು- ಇಷ್ಟಲಿಂಗಕ್ಕೆ ನೀಡುವ ಗೌರವವನ್ನು ಜಂಗಮರಿಗೂ ನೀಡಬೇಕಿದೆ. ವೃತ್ತಿ ಎತ್ತರಕ್ಕೆ ಬೆಳೆಯಬಹುದು, ವ್ಯವಹಾರ ಮಾಡಬಹುದು. ಆದರೆ ಪ್ರವೃತ್ತಿಯಲ್ಲಿ ನಮ್ಮ ಸಂಸ್ಕಾರ, ಆಚರಣೆ, ಜಂಗಮತ್ವವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಬಾರದು ಎಂದು ಸೂಚ್ಯವಾಗಿ ಹೇಳಿದರು.
    ಕ್ರಿಯಾಸಾರ ಗ್ರಂಥದಲ್ಲಿ ನೀಲಕಂಠ ಶಿವಾಚಾರ್ಯರು ಹೇಳುವಂತೆ ವಿರೋಧ ರಹಿತರೇ ವೀರಶೈವರು. ಯಾರನ್ನೂ ದ್ವೇಷಿಸದ, ನೋಯಿಸದ ಗುಣ ಅವರಲ್ಲಿದೆ. ಆದರೆ ಇತ್ತೀಚೆಗೆ ಮತ್ತೊಬ್ಬರನ್ನು ಟೀಕಿಸುವ, ಕಾಲೆಳೆಯುವ ಪ್ರವೃತ್ತಿ ಬೆಳೆಯುತ್ತಿರುವುದು ದುರಂತ ಎಂಬುದಾಗಿ ಕಪ್ಪೆಗಳ ಸ್ಪರ್ಧೆಯ ನಿದರ್ಶನದೊಂದಿಗೆ ವಿವರಿಸಿದರು.
    ದುಡಿದು ಬೆಳೆಯುವವನು ನಾಯಕನಲ್ಲ. ಬದಲಾಗಿ ನನ್ನಂತೆ ಇತರೆ 10 ಜನರನ್ನು ಎತ್ತರಕ್ಕೆ ಬೆಳೆಸುವವನೇ ನಿಜವಾದ ನಾಯಕ. ಇಂದು ಜಗತ್ತಿಗೇ ಬುದ್ದಿ ಹೇಳುವ ಜಂಗಮ ಸಮಾಜದವರು ಇನ್ನೊಬ್ಬರ ಪಂಚಾಯಿತಿಗೆ ಹೋಗುವ, ಮತ್ತೊಬ್ಬರ ಬಳಿ ಬುದ್ದಿವಾದ ಹೇಳಿಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts