More

    ಮೂರನೇ ಬಾರಿ, ಡ್ರ್ಯಾಗನ್ ಸವಾರಿ; ಜಿನ್​ಪಿಂಗ್​ಗೆ ಮತ್ತೆ ಕೆಂಪು ಪಕ್ಷದ ನಾಯಕತ್ವ

    ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಕ್ಸಿ ಜಿನ್​ಪಿಂಗ್ ಅವರನ್ನು ಮೂರನೇ ಅವಧಿಗೆ ತನ್ನ ಸವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ನವ ಚೀನಾ ರಾಷ್ಟ್ರ ನಿರ್ವತೃ ಮಾವೋ ಝೆಡಾಂಗ್ ಅವರ ನಂತರ ಅತ್ಯಂತ ಶಕ್ತಿಶಾಲಿ ಚೀನೀ ನಾಯಕನಾಗಿ ಈ ಮೂಲಕ ಅವರು ಹೊರಹೊಮ್ಮಬಹುದಾಗಿದೆ. ಅಲ್ಲದೆ, ಮಾವೋ ರೀತಿಯಲ್ಲಿಯೇ ಜೀವನಪೂರ್ತಿ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಯೂ ಇದೆ. ಈ ಹಿಂದೆ ಕಮ್ಯುನಿಸ್ಟ್ ಪಕ್ಷ ಸವೋಚ್ಚ ನಾಯಕನಾಗಿ ಆಯ್ಕೆಯಾಗಲು ಗರಿಷ್ಠ ಎರಡು ಅವಧಿಗೆ ಅವಕಾಶ ಇತ್ತು. 2018ರಲ್ಲಿ ಈ ಮಿತಿಯನ್ನು ತೆಗೆದುಹಾಕಲಾಯಿತು.

    ಹೀಗಾಗಿ, ಪಕ್ಷದ ಮೇಲಿನ ಹಿಡಿತವನ್ನು ಬಿಗಿಗೊಳಿಸಿರುವ 69 ವರ್ಷದ ಜಿನ್​ಪಿಂಗ್ ಅವರು ತಮ್ಮ ಜೀವನಪರ್ಯಂತ ಅಧಿಕಾರದಲ್ಲಿ ಉಳಿಯುವ ಸಾಧ್ಯತೆಯಿದೆ. ಜಿನ್​ಪಿಂಗ್ ಅವರು ಪ್ರಸ್ತುತ ಮೂರು ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅವರು ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷರಾಗಿ ಚೀನಾ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್​ನ ಅಧ್ಯಕ್ಷರಾಗಿ ದೇಶದ ಸಶಸ್ತ್ರ ಪಡೆಗಳಿಗೆ ಆದೇಶ ನೀಡುವ ಅಧಿಕಾರ ಕೂಡ ಹೊಂದಿದ್ದಾರೆ. ಈ ಮೂಲಕ ಚೀನಾದ ಸವೋಚ್ಚ ನಾಯಕರಾಗಿ ರೂಪುಗೊಂಡಿದ್ದಾರೆ.

    ಈ ಪೈಕಿ ಜಿನ್​ಪಿಂಗ್ ಅವರು ಮೊದಲೆರಡು ಸ್ಥಾನಗಳಲ್ಲಿ ಮತ್ತೆ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆನಡೆಯುವ ಪಕ್ಷದ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಮಿಲಿಟರಿ ಆಯೋಗದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಮುಂಬರುವ 2023ರ ವಸಂತ ಋತುವಿನಲ್ಲಿ ಜರುಗುವ ವಾರ್ಷಿಕ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸಭೆಯಲ್ಲಿ ಚೀನಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದ್ದು, ಇಲ್ಲಿಯೂ ಅವರೇ ಪುನರಾಯ್ಕೆಯಾಗುವ ಸಾಧ್ಯತೆ ಇದೆ.

    ಕಾಂಗ್ರೆಸ್ ಸಭೆಯಲ್ಲಿ ಏನಾಗುತ್ತದೆ?: ಕಾಂಗ್ರೆಸ್​ನಲ್ಲಿ ಸುಮಾರು 2,300 ಪ್ರತಿನಿಧಿಗಳು ಭಾಗವಹಿಸುತ್ತಾರೆ. ಟಿಯಾನನ್​ವೆುನ್ ಸ್ಕೆ್ವೕರ್ ಮಹಾಸಭಾಂಗಣದಲ್ಲಿ ಒಂದು ವಾರದವರೆಗೆ ಈ ಸಭೆ ಜರುಗುತ್ತದೆ. ಇಲ್ಲಿ ಅಂದಾಜು 200 ಮಂದಿಯನ್ನು ಪಕ್ಷದ ಕೇಂದ್ರ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ. ಜತೆಗೆ ಅಂದಾಜು 170 ಪರ್ಯಾಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಕೇಂದ್ರ ಸಮಿತಿಯು 25 ಜನರನ್ನು ಪಕ್ಷದ ಪಾಲಿಟ್​ಬ್ಯೂರೊಗೆ ಆಯ್ಕೆ ಮಾಡುತ್ತದೆ. ಅಲ್ಲದೆ, ಪಾಲಿಟ್​ಬ್ಯೂರೊ ಸ್ಥಾಯಿ ಸಮಿತಿಯ ಸದಸ್ಯರನ್ನು ಪಾಲಿಟ್​ಬ್ಯೂರೊ ನೇಮಿಸುತ್ತದೆ. ಪ್ರಸ್ತುತ ಪಾಲಿಟ್​ಬ್ಯೂರೊ ಸ್ಥಾಯಿ ಸಮಿತಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿನ್​ಪಿಂಗ್ ಸೇರಿದಂತೆ ಏಳು ಸದಸ್ಯರಿದ್ದಾರೆ. ಇವರೆಲ್ಲರೂ ಪುರುಷರೇ ಆಗಿದ್ದಾರೆ. ಮಹಿಳೆಯರಿಗೂ ಇಂತಹ ಪ್ರಮುಖ ಸ್ಥಾನ ದೊರೆತಿಲ್ಲ. ಚೀನಾದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳೆಂದೇ ಇವರನ್ನು ಪರಿಗಣಿಸಲಾಗುತ್ತದೆ.

    ಆರ್ಥಿಕ ಸವಾಲು: ಇತ್ತೀಚಿನ ದಶಕಗಳಲ್ಲಿ ಚೀನಾದ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬಂದಿದೆ. ಆದರೆ, ಕೋವಿಡ್ ಲಾಕ್​ಡೌನ್​ಗಳು, ಏರುತ್ತಿರುವ ಬೆಲೆಗಳು ಮತ್ತು ಪ್ರಮುಖ ಆಸ್ತಿ ಬಿಕ್ಕಟ್ಟಿನಿಂದ ಈಗ ಚೀನಾ ಗಂಭೀರ ಆರ್ಥಿಕ ಅಡಚಣೆಯನ್ನು ಸಹ ಎದುರಿಸುತ್ತಿದೆ. ಯೂಕ್ರೇನ್ ಯುದ್ಧದಿಂದ ತಲೆದೋರಿದ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕೂಡ ಚೀನಾದ ಆತ್ಮವಿಶ್ವಾಸವನ್ನು ಹಾನಿಗೊಳಿಸಿವೆ. ಜಿನ್​ಪಿಂಗ್ ನಾಯಕತ್ವದಲ್ಲಿ ಆರ್ಥಿಕ ಬೆಳವಣಿಗೆಯು ಹಿಂದಿನ ಅಧ್ಯಕ್ಷರಾದ ಜಿಯಾಂಗ್ ಝೆಮಿನ್ ಮತ್ತು ಹು ಜಿಂಟಾವೊ ಅವರಿಗಿಂತ ಕಡಿಮೆ ಇದೆ. ಕೆಲವು ವಿಶ್ಲೇಷಕರು ಹೇಳುವಂತೆ, ಕಮ್ಯುನಿಸ್ಟ್ ಸರ್ಕಾರದ ನ್ಯಾಯಸಮ್ಮತತೆಯು ಚೀನಾದ ಕಾರ್ವಿುಕರಿಗೆ ಹೆಚ್ಚಿನ ಆದಾಯ ಮತ್ತು ಉತ್ತಮ ಉದ್ಯೋಗಗಳನ್ನು ತಲುಪಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ ಇದೇ ರೀತಿಯಲ್ಲಿ ಆರ್ಥಿಕ ಪ್ರಗತಿ ಕುಂಠಿತ ಮುಂದುವರಿದರೆ, ಜಿನ್​ಪಿಂಗ್ ಅವರು ಗಂಭೀರ ರಾಜಕೀಯ ಸಂಕಷ್ಟಕ್ಕೆ ಸಿಲುಕಬಹುದಾಗಿದೆ.

    ಏಕಪಕ್ಷ ಆಡಳಿತ: 1927ರಿಂದ 1950ರವರೆಗೆ ಚೀನಾದಲ್ಲಿ ಅಂತಃಕಲಹ ನಡೆಯಿತು. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವಿನ ಆಂತರಿಕ ಕಲಹವಾಗಿತ್ತು. ಇದು ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯತ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು. ಮಾವೋ ಝೆಡಾಂಗ್ (ಮಾವೋ ತ್ಸೆ ತುಂಗ್) ನೇತೃತ್ವದ ಚೀನಾ ಕಮ್ಯುನಿಸ್ಟ್ ಪಾರ್ಟಿಯು ಚೀನಾದ ಪ್ರಧಾನ ಭೂಮಿಯ ಬಹಳಷ್ಟು ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ 1949ರ ಅಕ್ಟೋಬರ್ 1ರಂದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಸ್ತಿತ್ವಕ್ಕೆ ಬಂದಿತು. ಏಕೈಕ ಶಾಸನಬದ್ಧ ಪಕ್ಷವಾದ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ‘ಪ್ರಜಾಪ್ರಭುತ್ವವಾದಿ ಸರ್ವಾಧಿಕಾರ’ ನಿಯಂತ್ರಣ ವ್ಯವಸ್ಥೆಯ ಸಮಾಜವಾದಿ ಪ್ರಭುತ್ವವನ್ನು ಚೀನಾದಲ್ಲಿ ಸ್ಥಾಪಿಸಲಾಯಿತು.

    ನಿರಂಕುಶಾಧಿಕಾರ ನಿಲುವು: ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಮತ್ತು ಅದರ ಪ್ರಬಲ ಸೇನಾ ಪಡೆಯ ನೇತೃತ್ವ ವಹಿಸಿರುವ ಜಿನ್​ಪಿಂಗ್ ಅವರು ಮೂರನೇ ಬಾರಿ ಮತ್ತೆ ಐದು ವರ್ಷಗಳ ಅವಧಿಗೆ ಸವೋಚ್ಚ ನಾಯಕನಾಗಿ ಆಯ್ಕೆಯಾಗುವ ಮೂಲಕ ಚೀನಾವನ್ನು ಹೆಚ್ಚು ನಿರಂಕುಶ ರಾಜಕೀಯ ನಿಲುವಿಗೆ ತಳ್ಳುವ ಸಾಧ್ಯತೆಯಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಜಿನ್​ಪಿಂಗ್ ನೇತೃತ್ವದ ಚೀನಾವು ನಿರಂಕುಶಾಧಿಕಾರದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಲಂಡನ್ ವಿಶ್ವವಿದ್ಯಾಲಯದ ಪೊ›ಫೆಸರ್ ಸ್ಟೀವ್ ತ್ಸಾಂಗ್ ಹೇಳುತ್ತಾರೆ. ಮಾವೋ ನೇತೃತ್ವದಲ್ಲಿ ಈ ಹಿಂದೆ ಚೀನಾ ದೇಶ ನಿರಂಕುಶ ವ್ಯವಸ್ಥೆಗೆ ಸಿಲುಕಿತ್ತು. ಈಗ ಜಿನ್​ಪಿಂಗ್ ನೇತೃತ್ವದಲ್ಲಿ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದೂ ಅವರು ಹೇಳುತ್ತಾರೆ.

    ವಿಸ್ತರಣಾವಾದಿ ಧೋರಣೆ: ಕ್ಸಿ ಜಿನ್​ಪಿಂಗ್ ಅವರ ಆಡಳಿತಾವಧಿಯು ಸುತ್ತಮುತ್ತಲ ದೇಶಗಳೊಂದಿಗೆ ಸೌಹಾರ್ದ ಯುತ ಸಂಬಂಧಕ್ಕೆ ಆದ್ಯತೆ ನೀಡಿಲ್ಲ; ವಿಸ್ತರಣಾವಾದಿ ಗುರಿಗಳತ್ತ ಕೆಲಸ ಮಾಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿನ ವಿವಾದಿತ ದ್ವೀಪಗಳು ಮತ್ತು ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಹಕ್ಕು ಸಾಧಿಸುವ ಮೂಲಕ ಜಪಾನ್, ಭಾರತ ಮತ್ತು ಇತರ ನೆರೆಯ ದೇಶಗಳನ್ನು ಅವರು ಕೆರಳಿಸುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ಇತ್ತೀಚಿನ ಗಲ್ವಾನ್ ಕಣಿವೆ ಘರ್ಷಣೆ ಯಾಗಿರಬಹುದು ಅಥವಾ 2017 ರ ಡೋಕ್ಲಾಮ್ ಬಿಕ್ಕಟ್ಟು ಆಗಿರಬಹುದು, ಚೀನಾವು ಭಾರತದೊಂದಿಗೆ ಗಡಿ ಕದನಗಳನ್ನು ನಡೆಸುತ್ತಿದೆ. ಗಡಿ ವಿವಾದದ ನಂತರ ಉಭಯ ರಾಷ್ಟ್ರಗಳ ಬಾಂಧವ್ಯ ನಿಧಾನವಾಗಿ ಹದಗೆಡುತ್ತಿದೆ. ಚೀನಾ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಗಡಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಅಧೀನ ರಾಷ್ಟ್ರ ಎಂಬಂತಿರುವ ಪಾಕಿಸ್ತಾನ ಮಾತ್ರ ಇದಕ್ಕೆ ಏಕೈಕ ಅಪವಾದವಾಗಿದೆ.

    ತೈವಾನ್ ಸ್ವಾಧೀನದ ಗುರಿ: ಪ್ರಜಾಸತ್ತಾತ್ಮಕ ದ್ವೀಪ ರಾಷ್ಟ್ರವಾದ ತೈವಾನ್ ಅನ್ನು ಕಮ್ಯುನಿಸ್ಟ್ ಪಕ್ಷವು ಚೀನಾದ ಭಾಗವೆಂದೇ ಪ್ರತಿಪಾದಿಸುತ್ತಿದೆ. ಜಿನ್​ಪಿಂಗ್ ಅವರು ತೈವಾನ್ ಮೇಲೆ ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಿದ್ದಾರೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು 1949ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಶತಮಾನೋತ್ಸವ ಆಚರಣೆಯು 2049ರಲ್ಲಿ ಜರುಗಲಿದೆ. ಈ ವೇಳೆಗೆ ತೈವಾನ್ ದೇಶವನ್ನು ಚೀನಾಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಜಿನ್​ಪಿಂಗ್ ಗುರಿಯಾಗಿದೆ. ಅಲ್ಲದೆ, ಇದನ್ನು ಸಾಧಿಸಲು ಬಲದ ಸಂಭವನೀಯ ಬಳಕೆಯನ್ನು ಕೂಡ ಅವರು ತಳ್ಳಿಹಾಕಿಲ್ಲ. ತೈವಾನ್ ಅನ್ನು ಚೀನಾ ಸ್ವಾಧೀನಪಡಿಸಿಕೊಂಡರೆ ಪಶ್ಚಿಮ ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಅಮೆರಿಕದ ಬಲವನ್ನು ಕುಗ್ಗಿಸಿದಂತಾಗುತ್ತದೆ ಎಂದು ಭದ್ರತಾ ತಜ್ಞರು ಹೇಳುತ್ತಾರೆ.

    ಕ್ರಿಮಿನಲ್ ಅಂದ್ಕೊಂಡು ಉದ್ಯಮಿಯ ಬಂಧನ; ಪತ್ನಿಯನ್ನು ಭಾರತಕ್ಕೆ ಕಳಿಸಿ ಪತಿಯನ್ನು ವಶಕ್ಕೆ ಪಡೆದ ಪೊಲೀಸ್..

    2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts