More

    ಕರೊನಾ ಕಾಲದಲ್ಲಿ ಬ್ರಾಡ್ಮನ್ ಸ್ಫೂರ್ತಿಯಾಗಲಿ ಎಂದು ತೆಂಡುಲ್ಕರ್ ಹೇಳಿದ್ದೇಕೆ?

    ನವದೆಹಲಿ: ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ 112ನೇ ಜನ್ಮದಿನದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಸ್ಮರಿಸಿಕೊಂಡಿರುವ ದಿಗ್ಗಜ ಸಚಿನ್ ತೆಂಡುಲ್ಕರ್, ಕರೊನಾ ಕಾಲದಲ್ಲಿ ಕ್ರಿಕೆಟಿಗರಿಗೆ ಬ್ರಾಡ್ಮನ್ ಅವರು ಸ್ಫೂರ್ತಿಯಾಗಬೇಕು ಎಂದಿದ್ದಾರೆ. ಯಾಕೆ ಗೊತ್ತೇ?

    2ನೇ ಮಹಾಯುದ್ಧದಿಂದಾಗಿ ಬ್ರಾಡ್ಮನ್ ಹಲವು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬಂದಿತ್ತು. ಆದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯಧಿಕ ಸರಾಸರಿಗೆ ಯಾವುದೇ ತೊಂದರೆಯಾಗಲಿಲ್ಲ ಎಂದಿರುವ ಸಚಿನ್ ತೆಂಡುಲ್ಕರ್, ಕರೊನಾ ಸಮಯದಲ್ಲಿ ಅನಿಶ್ಚಿತತೆ, ಕಳವಳ ಎದುರಿಸುತ್ತಿರುವ ಮತ್ತು ಸುದೀರ್ಘ ಬಿಡುವು ಪಡೆದಿರುವ ಕ್ರೀಡಾಪಟುಗಳಿಗೂ ಅವರೇ ಸ್ಫೂರ್ತಿಯಾಗಬೇಕು ಎಂದಿದ್ದಾರೆ. ಜತೆಗೆ ‘ಹ್ಯಾಪಿ ಬರ್ತ್‌ಡೇ ಸರ್ ಡಾನ್’ ಎಂದೂ ಟ್ವೀಟಿಸಿದ್ದಾರೆ.

    1939ರಿಂದ 1945ರವರೆಗೆ 8 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡದಿದ್ದರೂ, ಬ್ರಾಡ್ಮನ್ ಅವರ ಬ್ಯಾಟಿಂಗ್ ಲಯ ಕಳೆದುಕೊಂಡಿರಲಿಲ್ಲ. ಅವರ ರನ್‌ದಾಹವೂ ಕುಗ್ಗಿರಲಿಲ್ಲ. ಇದರಿಂದಾಗಿ ಅವರು 52 ಟೆಸ್ಟ್ ಪಂದ್ಯಗಳ ವೃತ್ತಿಜೀವನವನ್ನು ದಾಖಲೆಯ 99.94 ಸರಾಸರಿಯೊಂದಿಗೆ ಮುಗಿಸಿದ್ದರು.

    ಮುಂಬರುವ ಐಪಿಎಲ್ ಟೂರ್ನಿಗೆ ಮುನ್ನ, ಕರೊನಾ-ಲಾಕ್‌ಡೌನ್‌ನಿಂದಾಗಿ ಸರಿಸುಮಾರು 6 ತಿಂಗಳ ಕಾಲ ಬಿಡುವು ಪಡೆದಿರುವ ಕ್ರಿಕೆಟಿಗರಿಗೆ ಬ್ರಾಡ್ಮನ್ ಸ್ಫೂರ್ತಿಯಾಗಬೇಕು ಎಂಬ ಅರ್ಥದಲ್ಲಿ ಸಚಿನ್ ಹೇಳಿದ್ದಾರೆ. 1908ರ ಆಗಸ್ಟ್ 27ರಂದು ಜನಿಸಿದ್ದ ಬ್ರಾಡ್ಮನ್ ಆಸ್ಟ್ರೇಲಿಯಾ ಪರ 29 ಶತಕಗಳ ಸಹಿತ 6,996 ರನ್ ಬಾರಿಸಿದ್ದರು. ವೃತ್ತಿಜೀವನದ ಕೊನೆಯ ಇನಿಂಗ್ಸ್‌ನಲ್ಲಿ ಅವರು 4 ರನ್ ಗಳಿಸಿದ್ದರೆ 100ರ ಸರಾಸರಿ ಸಾಧಿಸುತ್ತಿದ್ದರು. ಆದರೆ ಅವರು ಶೂನ್ಯಕ್ಕೆ ಔಟಾಗಿದ್ದರು. 2001ರ ಫೆಬ್ರವರಿ 25ರಂದು 92ನೇ ವಯಸ್ಸಿನಲ್ಲಿ ಅವರು ತೀರಿಕೊಂಡಿದ್ದರು.

    ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿ ಇತಿಹಾಸ ಬರೆದ ಡ್ವೇನ್ ಬ್ರಾವೊ

    ಸಚಿನ್ ತೆಂಡುಲ್ಕರ್ ಆಟವನ್ನು ಟಿವಿಯಲ್ಲಿ ನೋಡಿ, ನನ್ನಂತೆಯೇ ಬ್ಯಾಟಿಂಗ್ ಮಾಡುತ್ತಾನೆ ಎಂದು ಬ್ರಾಡ್ಮನ್ ಹೇಳಿಕೊಂಡಿದ್ದರು. ಬಳಿಕ 1998ರಲ್ಲಿ ಬ್ರಾಡ್ಮನ್ ಅವರ 90ನೇ ಜನ್ಮದಿನಾಚರಣೆಯ ವೇಳೆ ಸಚಿನ್ ತೆಂಡುಲ್ಕರ್, ಅವರನ್ನು ಭೇಟಿಯಾಗಿದ್ದರು.

    ಯುವರಾಜ್ ಸಿಂಗ್ ಕೂಡ ಬ್ರಾಡ್ಮನ್ ಅವರನ್ನು 112ನೇ ಜನ್ಮದಿನದಂದು ನೆನೆಸಿಕೊಂಡಿದ್ದು, ‘ಕ್ರಿಕೆಟ್ ಆಟವನ್ನು ಆಡಿದ ಅತ್ಯುತ್ತಮ ಬ್ಯಾಟ್ಸ್‌ಮನ್. ಅವರ ವ್ಯಕ್ತಿತ್ವ ಮತ್ತು ವಿನಯದಿಂದಾಗಿ ಮೈದಾನದೊಳಗೆ ಮತ್ತು ಹೊರಗೆ ಎಲ್ಲರಿಂದಲೂ ಪ್ರೀತಿಸಲ್ಪಡುತ್ತಿದ್ದರು ಮತ್ತು ಗೌರವ ಪಡೆಯುತ್ತಿದ್ದರು’ ಎಂದು ಬೆರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts