More

    ಇಂಥ ಬಲಿದಾನಗಳು ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸಬೇಕು!

    ಇಂಥ ಬಲಿದಾನಗಳು ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸಬೇಕು!

    ಇಡೀ ವಿಶ್ವ ಮಾರಕ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಈ ಸೋಂಕನ್ನು ನಿಯಂತ್ರಿಸಿ, ಜನಜೀವನವನ್ನು ಸಹಜಸ್ಥಿತಿಗೆ ತಂದರೆ ಸಾಕಪ್ಪ ಎಂದು ಹಾತೊರೆಯುತ್ತಿದೆ. ಇಂಥ ಕಡುಸಂಕಷ್ಟದ ಕಾಲದಲ್ಲೂ ಪಾಪಿ ಪಾಕಿಸ್ತಾನ ಭಯೋತ್ಪಾದನೆಯ ವೈರಸ್ ಅನ್ನು ರಫ್ತು ಮಾಡುತ್ತಿದೆ! ಮಾನವೀಯತೆಯ ಯಾವ ಭಾಷ್ಯವೂ ಆ ರಾಷ್ಟ್ರಕ್ಕೆ ಅರ್ಥವಾಗಲ್ಲ ಬಿಡಿ. ಹಿಂಸೆ, ರಕ್ತಪಾತ, ಅಶಾಂತಿಯನ್ನೇ ಉಸಿರಾಗಿಸಿಕೊಂಡ ಆ ರಾಷ್ಟ್ರ ಭಾರತದ ನೆಮ್ಮದಿ ಕೆಡಿಸಲು ಸದಾ ಹವಣಿಸುತ್ತದೆ.

    ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕವಂತೂ, ಪಾಕ್ ಮತ್ತಷ್ಟು ಹತಾಶವಾಗಿದೆ. ಏಪ್ರಿಲ್-ಮೇ ತಿಂಗಳು, ಗಡಿ ಭಾಗದಲ್ಲಿ ಮಂಜು ಕರಗುತ್ತದೆ. ಈ ಪರಿಸ್ಥಿತಿಯ ದುರ್ಲಾಭ ಪಡೆದು ಭಯೋತ್ಪಾದಕರನ್ನು ನುಸುಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಂಥ ದುಷ್ಟದೇಶಕ್ಕೆ ನಿರ್ಣಾಯಕ ಮತ್ತು ಕೊನೆಯ ಪಾಠ ಕಲಿಸುವ ಸಮಯ ಬಂದಿದೆ ಎಂದೆನಿಸುತ್ತದೆ.

    ಇದನ್ನೂ ಓದಿ: ಶಾಂತಿಗೆ ಮತ್ತೊಂದು ಹೆಸರು ಆನೆಗಳ ಈ ಕುಟುಂಬ!

    ಮೊನ್ನೆ ಮೇ 2 (ಶನಿವಾರ). ಜಮ್ಮು-ಕಾಶ್ಮೀರದ ಕಾಡಿನ ಅಂಚಿನಲ್ಲಿ ಭಯೋತ್ಪಾದಕರು ನುಸುಳಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭ್ಯವಾಯಿತು. ತಕ್ಷಣ ಶೋಧ ಕಾರ್ಯಾಚರಣೆ ಆರಂಭವಾಯಿತು. ಎಲ್ಲೂ ಸುಳಿವು ಸಿಗಲಿಲ್ಲ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಹಂದ್ವಾರದ ಛಾಂಜಿಮುಲ್ಲಾಹ್ ಗ್ರಾಮದ ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದು, ಆ ಮನೆಯ ಐವರು ಸದಸ್ಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ, ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಕಾರ್ಯಾಚರಣೆ ಆರಂಭವಾಯಿತು. ಮನೆಯ ಸದಸ್ಯರನ್ನು ಸುರಕ್ಷಿತವಾಗಿ ಬಿಡಿಸುವುದು ಮೊದಲ ಆದ್ಯತೆಯಾಗಿತ್ತು. ಗುಂಡಿನ ದಾಳಿ ಮುಂದುವರಿಯುತ್ತಿದ್ದಂತೆ, ಉಗ್ರರು ಮನೆಯೊಳಗಿಂದ ಓಡಿ ಬಂದು ದನದ ಕೊಟ್ಟಿಗೆಯಲ್ಲಿ ಅಡಗಿ, ಭದ್ರತಾ ಪಡೆಗಳ ಮೇಲೆ ಎರಗಿದರು. ಸಂಜೆ ಧೋ ಎಂದು ಶುರುವಾದ ಮಳೆ ರಾತ್ರಿ 11 ಗಂಟೆಯಾದರೂ ನಿಲ್ಲಲಿಲ್ಲ. ಮಳೆಯ ನಡುವೆಯೇ ಸಾಹಸದಿಂದ ಕಾದಾಡುತ್ತ, ಮನೆಯ ಸದಸ್ಯರನ್ನು ಬಿಡುಗಡೆಗೊಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು. ಇಡೀ ಕಾರ್ಯಾಚರಣೆ ಮುಗಿದಾಗ ಭಾನುವಾರ ಬೆಳಗ್ಗೆ (ಮೇ 3) 7 ಗಂಟೆಯಾಗಿತ್ತು. ದೇಶದ ಉಳಿದೆಡೆ, ಭಾರತೀಯ ಸೇನೆ ‘ಕರೊನಾ ಯೋಧರಿಗೆ’ ಗೌರವ ಸಲ್ಲಿಸಲು ಅಣಿಯಾಗಿತ್ತು. ಅತ್ತ, ಭಯೋತ್ಪಾದಕರೊಂದಿಗಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾದರು (ಜನವರಿಯಿಂದ ಈವರೆಗೆ 62 ಭಯೋತ್ಪಾದಕರು ಹತರಾಗಿದ್ದಾರೆ). ಈ ಪೈಕಿ ಒಬ್ಬ ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಹೈದರ್. ಆದರೆ, ಈ ಕಾರ್ಯಾಚರಣೆಯಲ್ಲಿ ದೇಶ ಐವರು ದಿಟ್ಟ, ಸಾಹಸಿ ಅಧಿಕಾರಿಗಳನ್ನು ಕಳೆದುಕೊಂಡಿತು!

    * ಕಮಾಂಡಿಂಗ್ ಆಫೀಸರ್ ಕರ್ನಲ್ ಆಶುತೋಷ್ ಶರ್ವ, 21 ರಾಷ್ಟ್ರೀಯ ರೈಫಲ್ಸ್, (ಆರ್​ಆರ್), 19 ಗಾರ್ಡ್ಸ್

    * ಮೇಜರ್ ಅನೂಜ್ ಸೂದ್ (31) 21 ರಾಷ್ಟ್ರೀಯ ರೈಫಲ್ಸ್, 19 ಗಾರ್ಡ್ಸ್

    * ರಾಜೇಶ್ 21 ರಾಷ್ಟ್ರೀಯ ರೈಫಲ್ಸ್, 03 ಗಾರ್ಡ್ಸ್

    * ಲಾನ್ಸ್ ನಾಯಕ ದಿನೇಶ್ 21 ರಾಷ್ಟ್ರೀಯ ರೈಫಲ್ಸ್, 17 ಗಾರ್ಡ್ಸ್

    * ಶಕೀಲ್ ಕಾಜಿ (41) ಜಮ್ಮು-ಕಾಶ್ಮೀರ ಪೊಲೀಸ್ ಪಡೆಯ ಸಬ್ ಇನ್​ಸ್ಪೆಕ್ಟರ್

    ಶೌರ್ಯ, ಸಾಹಸದಲ್ಲಿ ಈ ಐವರೂ ಅದಮ್ಯ ಶಕ್ತಿಗಳೇ. ಅವರ ದೇಶಭಕ್ತಿಯ ಕೆಚ್ಚನ್ನು, ಹೋರಾಟದ ಕಿಡಿಯನ್ನು ಬಣ್ಣಿಸಲು ಯಾವ ಪದಗಳೂ ಸಾಕಾಗುವುದಿಲ್ಲ.

    ಇದನ್ನೂ ಓದಿ: ಕರೊನಾ ಕಲಿಸಿದ ಪಾಠಗಳು!

    ಈ ತಂಡದ ನೇತೃತ್ವ ವಹಿಸಿದವರು ಕಮಾಂಡಿಂಗ್ ಆಫೀಸರ್ ಕರ್ನಲ್ ಆಶುತೋಷ್ ಶರ್ವ. ಎರಡೆರಡು ಬಾರಿ ಸೇನಾ ಪದಕದಿಂದ ಗೌರವಿಸಲ್ಪಟ್ಟ ಸಾಹಸಿಗ. ಇವರ ನೇತೃತ್ವ, ಮಾತುಗಳೇ ರಾಷ್ಟ್ರೀಯ ರೈಫಲ್ಸ್​ನ ಉಳಿದ ಸೈನಿಕರಿಗೆ ಸ್ಪೂರ್ತಿ ಕೊಡುತ್ತಿತ್ತು. ಅದೊಮ್ಮೆ, ಜಮ್ಮು-ಕಾಶ್ಮೀರದ ಪ್ರದೇಶವೊಂದರಲ್ಲಿ ಶರ್ಮಾ ತಮ್ಮ ತಂಡದೊಂದಿಗೆ ಗಸ್ತುಕಾರ್ಯದಲ್ಲಿ ನಿರತರಾಗಿದ್ದರು. ಇದ್ದಕ್ಕಿದ್ದಂತೆ ಒಬ್ಬ ಭಯೋತ್ಪಾದಕ, ಇವರ ತಂಡದ ಕಡೆ ನುಗ್ಗಿ ಬರುತ್ತಿದ್ದ. ಕ್ಷಣವೂ ವಿಳಂಬಿಸದೆ, ಉಳಿದವರಿಗೆ ಸೂಚನೆ ನೀಡದೆ ಖುದ್ದು ಆಶುತೋಷ್ ಅವರೇ ಆ ಭಯೋತ್ಪಾದಕ ಸಾಗಿಬರುತ್ತಿದ್ದ ದಿಕ್ಕಿನಲ್ಲೇ ಹೋಗಿ, ಅತಿ ಸಮೀಪದಿಂದ ಆತನಿಗೆ ಗುಂಡು ಹೊಡೆದರು. ಮರುಕ್ಷಣವೇ ಆ ಪಾಪಿ ಹೆಣವಾಗಿ ಬಿದ್ದಿದ್ದ. ಆಶುತೋಷರ ಸಮಯಪ್ರಜ್ಞೆ ಇಡೀ ತಂಡದ ಪ್ರಾಣವನ್ನು ಉಳಿಸಿತು. ಕರ್ನಲ್ ಆಶುತೋಷ್ ಮೂಲತಃ ಉತ್ತರಪ್ರದೇಶದ ಬುಲಂದ್​ಶಹರ್​ನ ಪರ್ವಾನಾ ಗ್ರಾಮದವರು. ಎಂಟು ವರ್ಷಗಳ ಹಿಂದೆ ಇವರ ಅಣ್ಣನಿಗೆ ರಾಜಸ್ಥಾನದಲ್ಲಿ ಉದ್ಯೋಗ ದೊರೆತ ಬಳಿಕ ಇಡೀ ಕುಟುಂಬ (ತಾಯಿ, ಅಣ್ಣ, ಅತ್ತಿಗೆ, ಪತ್ನಿ, ಮಗಳು) ಜೈಪುರಕ್ಕೆ ಹೋಗಿ ನೆಲೆಸಿತು. ಆಶುತೋಷ್ ಸೇನೆಗೆ ಸೇರುವ ಕನಸನ್ನು ಬಾಲ್ಯದಿಂದಲೇ ಕಟ್ಟಿಕೊಂಡಿದ್ದರು. ಇದಕ್ಕಾಗಿ, ಹಿರಿಯರಿಂದ ದೇಶಭಕ್ತಿಯ ಕಥೆಗಳನ್ನು ಆಲಿಸುತ್ತಿದ್ದರು, ರಾಷ್ಟ್ರಪ್ರೇಮದ ಸಿನಿಮಾಗಳನ್ನು ನೋಡುತ್ತಿದ್ದರು. ಬುಲಂದ್​ಶಹರ್​ನಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸೇನೆಗೆ ಸೇರಿದ್ದ ಇವರು ಪತ್ನಿ ಮತ್ತು ಮಗಳಲ್ಲಿ ಎಂಥ ಆತ್ಮಸ್ಥೈರ್ಯ ತುಂಬಿದರೆಂದರೆ, ಶರ್ಮಾ ಹುತಾತ್ಮರಾದ ಸುದ್ದಿ ಸಿಕ್ಕ ಬಳಿಕ ಪತ್ನಿ ಪಲ್ಲವಿ ಕಣ್ಣೀರು ಹಾಕಲಿಲ್ಲ! ‘ದೇಶರಕ್ಷಣೆಗಾಗಿ ಪತಿ ಹುತಾತ್ಮರಾಗಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆಯಿದೆ. ಹಾಗಾಗಿ, ಕಣ್ಣೀರು ಹಾಕುವುದಿಲ್ಲ. ಅವರ ಶೌರ್ಯ-ಸಾಹಸ-ಸ್ಪೂರ್ತಿಯಿಂದ ಸದಾ ನಮ್ಮ ಮನಸಿನಲ್ಲಿ ನೆಲೆಸಿರುತ್ತಾರೆ’ ಎಂದು ಆಶುತೋಷರ ಭಾವಚಿತ್ರವನ್ನು ಕೈಯಲ್ಲಿ ಇರಿಸಿಕೊಂಡು, ಮುಗುಳ್ನಗೆ ಚೆಲ್ಲಿದಾಗ, ಆ ದೃಶ್ಯ ನೋಡಿದವರ ಕಣ್ಣಂಚು ಒದ್ದೆಯಾಗಿತ್ತು. ಪಲ್ಲವಿಯವರ ಸ್ಥೈರ್ಯಕ್ಕೆ ಹೆಮ್ಮೆಯ ಭಾವ ಮೂಡಿತು. 12 ವರ್ಷದ ಮಗಳು ತಮನ್ನಾ, ‘ತಂದೆ ನನಗೆ ಹಲವು ಭರವಸೆ ನೀಡಿದ್ದರು. ಜತೆಯಾಗಿ ಸಿನಿಮಾ ನೋಡೋಣ ಎಂದಿದ್ದರು. ಕಳೆದ ಬಾರಿ ಅವರು ಮನೆಗೆ ಬಂದಾಗ ತೊಡೆ ಮೇಲೆ ಕೂರಿಸಿ ಆಟವಾಡಿಸಿದ್ದರು. ಈಗ ಅವರಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಮುಗ್ಧವಾಗಿ ಹೇಳುತ್ತಿದ್ದರೆ, ಎಲ್ಲರ ಮಾತುಗಳು ಮೌನವಾಗಿದ್ದವು. ಮಂಗಳವಾರ ಆಶುತೋಷರ ಅಂತ್ಯಸಂಸ್ಕಾರದ ವೇಳೆಯೂ ಪಲ್ಲವಿ ಅದೇ ದಿಟ್ಟತನ ಮೆರೆದರು. ‘ಮುಂದಿನ ಬಾರಿ ಮನೆಗೆ ಬಂದಾಗ ಹಾಕಿಕೊಳ್ಳುತ್ತೇನೆ’ ಎಂದು ಆಶುತೋಷ್ ತಂದಿಟ್ಟಿದ್ದ ಹೊಸ ಷೂಗಳನ್ನು ಅವರ ಕಾಲಿಗೆ ಹಾಕಿ, ಕೊನೆಯ ನಮನ ಸಲ್ಲಿಸಿದರು.

    ಇಂಥ ಸಾವಿರಾರು ಕುಟುಂಬಗಳು ವೀರಯೋಧರ ನೆನಪಿನಲ್ಲೇ ಜೀವನ ಸಾಗಿಸುತ್ತಿವೆ ಎಂಬುದನ್ನು ನೆನಪಿಸಿಕೊಂಡರೂ ಕರುಳು ಕಿವುಚಿದಂತಾಗುತ್ತದೆ. ದೇಶಕ್ಕಾಗಿ ಇವರ ತ್ಯಾಗ, ಬಲಿದಾನವನ್ನು ಹೇಗೆಂದು ಬಣ್ಣಿಸುವುದು?

    ಇದನ್ನೂ ಓದಿ: 7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!

    31 ವರ್ಷದ ಮೇಜರ್ ಅನೂಜ್ ಸೂದ್ ಕೂಡ ಸೇನೆಗೆ ಸೇರುವ ಕನಸನ್ನು ಬಾಲ್ಯದಿಂದಲೇ ಕಟ್ಟಿಕೊಂಡು, ಆ ನಿಟ್ಟಿನಲ್ಲಿ ತಯಾರಿ ನಡೆಸಿದವರು. ಮಂಗಳವಾರ ಅನೂಜ್ ಪಾರ್ಥಿವ ಶರೀರವನ್ನು ಪಂಚಕೂಲಾದ ಮನೆಗೆ ತಂದಾಗ, ಪತ್ನಿ ಆಕೃತಿ ಬಹಳ ಹೊತ್ತಿನವರೆಗೆ ಗಂಡನ ಮುಖವನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ‘ಇಷ್ಟು ಅವಸರವೇನಿತ್ತು?’ ಎಂಬ ಪ್ರಶ್ನೆ ಅವರ ಮುಖಭಾವದಲ್ಲಿತ್ತಾದರೂ, ಪತಿಯ ವೀರಮರಣದ ಬಗ್ಗೆ ಹೆಮ್ಮೆಯೂ ಇತ್ತು. ಅನೂಜ್​ರ ಸಹೋದರಿ ಹರ್ಷಿತಾ ಕೂಡ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅವರು, ಒಮ್ಮೆ ತಾಯಿಯನ್ನು, ಇನ್ನೊಮ್ಮೆ ಅತ್ತಿಗೆಯನ್ನು ಸಮಾಧಾನ ಪಡಿಸುತ್ತಿದ್ದರು. ಅನುಜ್ ತಂದೆ ಬ್ರಿಗೇಡಿಯರ್ (ನಿವೃತ್ತ) ಚಂದ್ರಕಾಂತ್ ಸೂದ್, ‘ಮಗ ದೇಶರಕ್ಷಣೆಗಾಗಿ ಹುತಾತ್ಮನಾಗಿದ್ದಾನೆ. ಅವನಿಗೆ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾದ ಗೌರವ ನೆಲೆಸಿದೆ’ ಎಂದರಲ್ಲದೆ, ತಾವು ಪಡೆದಿದ್ದ ಸೇನಾ ಪದಕಗಳನ್ನು ಧರಿಸಿಯೇ ಮಗನಿಗೆ ಅಂತಿಮ ನಮನ ಸಲ್ಲಿಸಿದರು. ಸೇನೆ ಇಂಥ ಕಾರ್ಯಾಚರಣೆಯಲ್ಲಿ ಐದು ವರ್ಷಗಳ ಬಳಿಕ ಕಮಾಡಿಂಗ್ ಆಫೀಸರ್​ರನ್ನು ಕಳೆದುಕೊಂಡಿದೆ. 2015ರ ನವೆಂಬರ್​ನಲ್ಲಿ ಕುಪ್ವಾರಾದ ಹಾಜಿನಾಕಾ ಕಾಡಿನಲ್ಲಿ 41 ರಾಷ್ಟ್ರೀಯ ರೈಫಲ್ಸ್​ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ ಮಹಾಡಿಕ್ ಭಯೋತ್ಪಾದಕರೊಡನೆ ಹೋರಾಡುತ್ತ ಹುತಾತ್ಮರಾದರು. ಅವರು ಮಹಾರಾಷ್ಟ್ರದ ನಿವಾಸಿ ಆಗಿದ್ದರು. ಮಹಾಡಿಕ್​ರ ಪತ್ನಿ ಸ್ವಾತಿ 2017ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದಾರೆ ಎಂಬುದು ಪ್ರೇರಣೆ ನೀಡುವ ಸಂಗತಿ.

    2015 ಜನವರಿ 27ರಂದು ಕಾಶ್ಮೀರದ ತ್ರಾಲ್​ನಲ್ಲಿ ಭಯೋತ್ಪಾದಕರೊಡನೆ ನಡೆದ ಗುಂಡಿನ ಚಕಮಕಿಯಲ್ಲಿ 42 ರಾಷ್ಟ್ರೀಯ ರೈಫಲ್ಸ್​ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮುನೀಂದ್ರನಾಥ್ ರಾಯ್ ಹುತಾತ್ಮರಾದರು. ರಾಷ್ಟ್ರೀಯ ರೈಫಲ್ಸ್ ಯೂನಿಟ್​ನ ಹೀರೋ ಆಗಿದ್ದ ರಾಯ್ ಶೌರ್ಯಪದಕ ಘೋಷಣೆಯಾದ 24 ಗಂಟೆಯೊಳಗೇ ಹುತಾತ್ಮರಾದರು. ಹೃದಯದಲ್ಲಿ ಮಡುಗಟ್ಟಿದ ದುಃಖ, ಸುರಿಯುತ್ತಿರುವ ಕಣ್ಣೀರಿನ ಮಧ್ಯೆಯೇ ಹಿರಿಯ ಮಗಳು ಅಲಕಾ ಗೂರ್ಖಾ ರೈಫಲ್ಸ್​ನ ‘ಹೋಗಾ ಕೀ ನಹೀ ಹೋಗಾ, ಹೋಕೆ ಹೀ ರಹೇಗಾ’ ಎಂಬ ಘೊಷಣೆ ಹಾಕಿ ತಂದೆಗೆ ಸೆಲ್ಯೂಟ್ ಹೊಡೆದು ‘ಪಾಪಾ ತುಮ್ ಬಹುತ್ ಯಾದ್ ಆವೋಗೆ’ (ಅಪ್ಪ, ನಿನ್ನ ನೆನಪು ತುಂಬಾ ಆಗುತ್ತೆ) ಎಂದು ಬಿಕ್ಕಿದಾಗ ದೇಶವೂ ಆ ಪುಟ್ಟಬಾಲಕಿಯ ಧೈರ್ಯಕ್ಕೆ ಸಲಾಂ ಎಂದಿತು. ಆದರೆ, ಹೀಗೆ ಇನ್ನೆಷ್ಟು ದಿನ ಪಾಪಿ ಪಾಕಿಸ್ತಾನದ ಪುಂಡಾಟಕ್ಕೆ ನಮ್ಮ ವೀರಸೈನಿಕರ ಜೀವಗಳು ಬಲಿ ಆಗಬೇಕು ಎಂಬ ಪ್ರಶ್ನೆಯನ್ನು ಇಡೀ ದೇಶ ಕೇಳುತ್ತಿದೆ. ಮೇ 2ರ ಘಟನೆ ಮರೆಯುವ ಮುನ್ನವೇ, ಕುಪ್ವಾರಾ ಜಿಲ್ಲೆಯ ಹೆದ್ದಾರಿಯಲ್ಲಿ ಉಗ್ರರ(ಮೇ 4ರ ಸಂಜೆ) ಗುಂಡಿನ ದಾಳಿಗೆ ಮೂವರು ಸಿಆರ್​ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕನ್ನಡದ ಪೂಜಾರಿ, ವಾಗ್ಮಿ ಹಿರೇಮಗಳೂರು ಕಣ್ಣನ್ (ಕಣ್ಣನ್ ಮಾಮಾ) ಸಮಾರಂಭವೊಂದರಲ್ಲಿ ಹೇಳುತ್ತಿದ್ದರು-‘ದೇವರುಗಳು ಗುಡಿಯಲ್ಲಿ ಕಾಯುತ್ತಾರೆ. ಸೈನಿಕರು ಗಡಿಯಲ್ಲಿ ಕಾಯುತ್ತಾರೆ!’ ‘ದೇವರು ಶತ್ರುಗಳ ಸಂಹಾರಕ್ಕಾಗಿ ಅವತಾರ ಎತ್ತಿ ಬಂದಿದ್ದಾರೆ ಎನ್ನುತ್ತಾರೆ. ಶತ್ರುಗಳ ಸಂಹಾರಕ್ಕಾಗಿ ಸೈನಿಕರು ಅವತಾರ ಎತ್ತಿ ನಿಂತಿದ್ದಾರೆ’. ‘ದೇವರಿಗೆ ಅಂಗರಕ್ಷರು ಜಯ-ವಿಜಯರು. ದೇಶಕ್ಕೆ ಅಂಗರಕ್ಷಕರು ಸೈನಿಕರು!’

    ಇಂಥ ಬಲಿದಾನಗಳು ವ್ಯರ್ಥವಾಗಬಾರದು. ಅವರ ಕುಟುಂಬಗಳು ಅನಾಥಪ್ರಜ್ಞೆ ಅನುಭವಿಸಬಾರದು. ದೇಶವೇ ಮೊದಲು ಎಂಬ ಭಾವ ಜಾಗೃತವಾಗಬೇಕು. ದೇಶಪ್ರೇಮದ ಪ್ರಬಲ ಕಿಡಿ, ರಾಷ್ಟ್ರಘಾತಕ ಕೃತ್ಯಗಳನ್ನು ಹೊಸಕಿ ಹಾಕಬೇಕು. ಅಂಥ ಕೆಚ್ಚೆದೆ ಪ್ರತಿ ಶ್ರೀಸಾಮಾನ್ಯನದೂ ಆಗಬೇಕು. ಆಗಲೇ, ಯೋಧರ ಬಲಿದಾನಕ್ಕೆ ಸುರಿಸಿದ ನಾಲ್ಕುಹನಿ ಕಣ್ಣೀರಿಗೆ ನಿಜವಾದ ಸಾರ್ಥಕತೆ. ಏನಂತೀರಿ?

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts