More

    ವ್ಯವಸ್ಥೆ ದಾರಿ ತಪ್ಪಿರುವುದು ಭ್ರಷ್ಟ ರಾಜಕಾರಣಿಗಳಿಂದ

    ಬಾಳೆಹೊನ್ನೂರು: ಇಂದು ರಾಜಕಾರಣಿ, ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಎಲ್ಲ ವ್ಯವಸ್ಥೆಗಳು ದಾರಿ ತಪ್ಪುತ್ತಿರುವುದು ಇವರಿಂದಲೇ. ಮತದಾರರು ಕೂಡ ಹಣ ಇಲ್ಲದೆ ಮತ ಚಲಾವಣೆ ಮಾಡುವುದಿಲ್ಲ ಎನ್ನುವ ಹಂತಕ್ಕೆ ಬಂದಿದ್ದಾರೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಬೀಳಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಪಟ್ಟಣದ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಲೋಕಸ್ಪಂದನ ಕಾರ್ಯಕ್ರಮವನ್ನು ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಪೊಲೀಸ್ ಇಲಾಖೆ ಸಿಬ್ಬಂದಿ ಪ್ರಕರಣಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ಕಾನೂನಿಗೆ ಗೌರವ ಬರಲಿದೆ. ಆಡಳಿತಾತ್ಮಕ ಸುಧಾರಣೆಗಾಗಿ ಪೊಲೀಸ್ ಇಲಾಖೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಪೊಲೀಸರ ಕಾರ್ಯವೈಖರಿ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಲೋಕಸ್ಪಂದನ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು.
    ಈ ಹಿಂದೆ ಪೊಲೀಸ್ ಠಾಣೆಗಳಿಗೆ ಬರಲು ಜನರು ಭಯ ಬೀಳುತ್ತಿದ್ದರು. ಕಾನೂನುಗಳು ಬಿಗಿಯಾದಷ್ಟು ಕಾನೂನಿಗೆ ಗೌರವ ಕೊಡುವುದು ಕಡಿಮೆಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆದಾಗ ಮಾತ್ರ ಸಾರ್ವಜನಿಕರು ನ್ಯಾಯಕ್ಕಾಗಿ ಠಾಣೆಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ನೊಂದವರ ಪರ ನಿಲ್ಲಬೇಕು ಎಂದು ಸಲಹೆ ನೀಡಿದರು.
    ಕೆಲವು ಠಾಣೆಗಳಲ್ಲಿ ಪೊಲೀಸರು ದೂರು ಪಡೆಯಲು ಹಿಂದೇಟು ಹಾಕುತ್ತಿದ್ದು, ಯಾವುದೇ ಕಾರಣಕ್ಕೂ ದೂರು ನೀಡಲು ಬಂದಾಗ ಈ ರೀತಿ ಆಗಬಾರದು. ಯಾರೇ ದೂರು ನೀಡಲು ಬಂದರು ಸೂಕ್ತವಾಗಿ ಪರಿಶೀಲಿಸಿ ಸ್ಪಂದಿಸಬೇಕು. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳು ಕಡಿಮೆಯಾಗುತ್ತವೆ. ಸಾರ್ವಜನಿಕರು, ಪೊಲೀಸರ ನಡುವೆ ಹೆಚ್ಚು ಬಾಂಧವ್ಯ ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದರು.
    ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಮಾತನಾಡಿ, ಸಾರ್ವಜನಿಕರೊಂದಿಗೆ ಪೊಲೀಸರು ಯಾವ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಇಲಾಖೆ ಹಿರಿಯ ಅಧಿಕಾರಿಗಳು ರಾಜ್ಯಾದ್ಯಂತ ಲೋಕಸ್ಪಂದನ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಇಲಾಖೆಯ ಸಿಬ್ಬಂದಿ ಕರ್ತವ್ಯದ ಕುರಿತು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಅದರಲ್ಲಿ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳಬಹುದು. ಈ ಅಭಿಪ್ರಾಯಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುವರು. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ.
    ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಮಾಜಿ ಸದಸ್ಯ ಇಫ್ತೆಖಾರ್ ಆದಿಲ್, ಪ್ರಮುಖರಾದ ಮಹಮ್ಮದ್ ಹನೀಫ್, ಸಂತೋಷ್‌ಕುಮಾರ್, ಟಿ.ಎಂ.ಉಮೇಶ್, ಮಹೇಶ್ ಆಚಾರ್ಯ, ಇಬ್ರಾಹಿಂ ಶಾಫಿ, ಹಿರಿಯಣ್ಣ, ಬಿ.ಕೆ.ಮಧುಸೂದನ್, ರವಿಚಂದ್ರ, ಎಂ.ಸಿ.ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts