More

    ರಾಜ್ಯ ಸರ್ಕಾರ ಚುನಾವಣೆ ಬಳಿಕ ಇಕ್ಕಟ್ಟಿಗೆ

    ಹಳೇಬೀಡು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಪ್ರಸಕ್ತ ಲೋಕಸಭೆ ಚುನಾವಣೆ ಬಳಿಕ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಲಿದ್ದು, ಅದರ ಪರಿಣಾಮಗಳನ್ನು ಜನತೆ ಸ್ವತಃ ನೋಡಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

    ಸೋಮವಾರ ಹಳೇಬೀಡಿನ ಕಲ್ಪತರು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದು, ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ ಪಕ್ಷವು 50 ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಾಗಲಿದೆ. ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲೂ ಮಹತ್ತರ ಬೆಳವಣಿಗೆ ಆಗಲಿದ್ದು, ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು. ಒಂದು ದಿನವೂ ರಜೆ ಪಡೆಯದೆ ಅವಿರತವಾಗಿ ದೇಶದ ಅಭಿವೃದ್ಧಿಯನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವ ಮೋದಿ ಅವರ ವರ್ಚಸ್ಸಿಗೆ ತಕ್ಕನಾದ ಒಬ್ಬ ವ್ಯಕ್ತಿಯಾದರೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೆ ಬಹಿರಂಗವಾಗಿ ಹೆಸರಿಸಲಿ ಎಂದು ಸವಾಲು ಹಾಕಿದರು.

    92ರ ಇಳಿ ವಯಸ್ಸಿನಲ್ಲಿ ನಾನು ಚುನಾವಣಾ ಪ್ರಚಾರಕ್ಕೆ ಬಂದಿರುವುದು ಹಾಶನ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೇಳುವುದಕ್ಕಲ್ಲ, ಬದಲಾಗಿ ಎಲ್ಲ 28 ಕ್ಷೇತ್ರಗಳಲ್ಲೂ ನಮ್ಮ ಸ್ಪರ್ಧಿಗಳು ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕು ಎಂಬ ದೃಢನಿಶ್ಚಯದಿಂದ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇಂದು ನಮ್ಮ ಜತೆಗೆ ಬಂದು ಮತಯಾಚನೆ ಮಾಡುತ್ತಿರುವುದು ಅಭ್ಯರ್ಥಿಯ ಗೆಲುವಿಗೆ ದೊಡ್ಡ ಶಕ್ತಿಯಾಗಲಿದೆ. ಈ ಭಾಗದ ಶಾಸಕ ಎಚ್.ಕೆ. ಸುರೇಶ್ ಅವರು ಎನ್‌ಡಿಎ ಅಭ್ಯರ್ಥಿಗೆ ಬೇಲೂರು ಕ್ಷೇತ್ರದಿಂದ ಅತ್ಯಧಿಕ ಮುನ್ನೆಡೆ ದೊರಕಿಸಿಕೊಡುವುದಾಗಿ ಹೇಳಿದ್ದಾರೆ. ಅವರ ಶ್ರಮಕ್ಕೆ ಉತ್ತಮ ಪ್ರತಿಫಲ ಭವಿಷ್ಯದಲ್ಲಿ ದೊರಕಲಿದೆ . ನೀರಾವರಿ ಯೋಜನೆಗಳಿಗೆ ಬುನಾದಿ ಹಾಕಿದ್ದು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಎನ್ನುವುದನ್ನು ಜನತೆ ಮರೆಯದೆ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಭಾವುಕರಾಗಿ ಕೈಮುಗಿದು ವಿನಂತಿಸಿದರು.

    ನೀರಾವರಿ ಯೋಜನೆಗಳಿಗೆ ನನ್ನ ಬೆಂಬಲವಿದೆ: ಯಗಚಿ ನದಿಗೆ ನನ್ನ ಅವಧಿಯಲ್ಲೇ ಅಣೆಕಟ್ಟೆ ನಿರ್ಮಿಸಲಾಯಿತು. ಚಿಕ್ಕಮಗಳೂರು ಮತ್ತು ಬೇಲೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ಅದರ ಮೂಲ ಉದ್ದೇಶವಾಗಿತ್ತು. ಜಲಾಶಯದ ಸಂಗ್ರಹಣಾ ಸಾಮರ್ಥ್ಯವೂ ಹೆಚ್ಚೇನಿಲ್ಲ. ಹೀಗಿದ್ದರೂ ಈ ಭಾಗದ ಜನರ ಅಪೇಕ್ಷೆಯಂತೆ ಏತ ನೀರಾವರಿ ಹಾಗೂ ರಣಘಟ್ಟ ರಾಜಕಾಲುವೆ ಯೋಜನೆಯನ್ನು ಜಾರಿಗೆ ತಂದೆವು. ರಣಘಟ್ಟ ಚೆಕ್ ಡ್ಯಾಂನಿಂದ ಹಳೇಬೀಡಿನ ದ್ವಾರಸಮುದ್ರ ಕೆರೆಗೆ ನೀರು ಹರಿಸುವ ವ್ಯವಸ್ಥೆಯು ದೊಡ್ಡ ಯೋಜನೆಯಲ್ಲ. ಹಾಗಾಗಿ ನಿರೀಕ್ಷಿತ ಅವಧಿಯಲ್ಲಿ ಅದು ಮುಕ್ತಾಯವಾಗುತ್ತದೆ. ಸ್ವಾಭಾವಿಕವಾಗಿ ಪುರಾತನ ವ್ಯವಸ್ಥೆಯ ಹರಿಯುವ ನೀರನ್ನು ಕೃಷಿಗೆ ಬಳಸಿಕೊಳ್ಳಲು ಸಾಧ್ಯವಿದೆ. ಕಾಂಗ್ರೆಸ್ ಪಕ್ಷದ ಕೆಲವರು ಈ ವಿಷಯದಲ್ಲಿ ನನ್ನ ಬಗ್ಗೆ ಸಲ್ಲದ ಆಪಾದನೆಗಳನ್ನು ಮಾಡಿದ್ದರು. ನಾನದನ್ನು ಮರೆತಿಲ್ಲ, ಆದರೆ ಅವರು ಏನು ಸಾಧನೆ ಮಾಡಿದ್ದಾರೆ ಎಂಬದನ್ನು ಹೇಳಲಿ ಎಂದರು.

    ಏತನೀರಾವರಿಗೆ ಯಡಿಯೂರಪ್ಪ 15 ಕೋಟಿ ರೂ. ಕೊಟ್ಟರು. ಕುಮಾರಸ್ವಾಮಿ ರಣಘಟ್ಟ ಯೋಜನೆಗೆ 150 ಕೋಟಿ ರೂ. ಬಿಡುಗಡೆ ಮಾಡಿದರು. ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ಏನೂ ಮಾಡದೆ ಕೇವಲ ಅಪಪ್ರಚಾರ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಎಚ್‌ಡಿಡಿ ದೂರಿದರು.

    ರಾಜ್ಯದಲ್ಲಿ ಕೈ ಸರ್ಕಾರ ಸತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದ್ದು ಜನಪರ ಕೆಲಸಗಳನ್ನು ಮಾಡದೆ ಕೇವಲ ಜಾಹೀರಾತಿನ ಅಪಪ್ರಚಾರದಲ್ಲಿ ನಿರತವಾಗಿದೆ. ಇಲ್ಲಿಯವರೆಗೆ ಯಾವೊಬ್ಬ ಶಾಸಕನಿಗೂ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಸಮರ್ಪಕವಾಗಿ ನೀಡಿಲ್ಲ. ಇದರ ಬಗ್ಗೆ ಸ್ವಪಕ್ಷೀಯರಲ್ಲೇ ಅಸಮಾಧಾನವಿದೆ. ಲೋಕಸಭೆ ಚುನಾವಣೆ ಬಳಿಕ ಅಸಮಾಧಾನವು ಭಿನ್ನಮತವಾಗಿ ಸ್ಫೋಟಗೊಳ್ಳುವ ದಿನಗಳು ದೂರವಿಲ್ಲ. ದೂರದೃಷ್ಟಿಯ ನಾಯಕ ನರೇಂದ್ರಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಈಗ ಕೇವಲ ನಮ್ಮ ಗುರಿ ಇರುವುದು 400 ಸ್ಥಾನಗಳನ್ನು ತಲುಪುವುದು ಮಾತ್ರ. ಹಾಗಾಗಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ದೇಶದಲ್ಲಿ 70 ವರ್ಷ ಆಡಳಿತ ನಡೆಸಿ ಒಂದೇ ಒಂದು ಸರಿಯಾದ ಯೋಜನೆಯನ್ನೂ ಜಾರಿ ಮಾಡದೆ ಇಂದು ಜಗ ಮೆಚ್ಚಿರುವ ನರೇಂದ್ರ ಮೋದಿ ಅವರು ಅತ್ಯಂತ ಕೆಟ್ಟ ಶಬ್ದಗಳಲ್ಲಿ ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಭ್ಯತೆ, ಸಂಸ್ಕಾರ ಎನ್ನುವುದು ಇಲ್ಲ. ರಾಜಕೀಯವನ್ನು ಹೀನ ಅಪಪ್ರಚಾರದ ಮೂಲಕ ಅಧೋಗತಿಗೆ ತಳ್ಳುತ್ತಿರುವ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಇದರ ಪರಿಣಾಮವನ್ನು ಅವರು ಮುಂಬರುವ ದಿನಗಳಲ್ಲಿ ಎದುರಿಸಲಿದ್ದು, ನಮ್ಮ ವಿರುದ್ಧ ಮಾಡುವ ಎಲ್ಲ ಆಪಾದನೆಗಳಿಗೂ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಬಿಎಸ್‌ವೈ ಗುಡುಗಿದರು.

    10 ವರ್ಷದ ಬಿಜೆಪಿ ಸರ್ಕಾರ ಕೊಟ್ಟಿರುವ ಯೋಜನೆಗಳನ್ನು ಒಮ್ಮೆ ಪ್ರಾಮಾಣಿಕವಾಗಿ ಪರಾಮರ್ಶಿಸಿದರೆ ಅವರಿಗೂ ವಸ್ತುಸ್ಥಿತಿ ಅರಿವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹಾಗೂ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲ. ಏಕೆಂದರೆ ಅನನುಭವಿ ಹೈ ಕಮಾಂಡ್ ಅವರ ಕೈ ಕಟ್ಟಿಹಾಕಿ ನಿಯಂತ್ರಣದಲ್ಲಿಟ್ಟುಕೊಂಡಿದೆ. ಇಂತಹ ಬೇಜವಾಬ್ದಾರಿ ಪಕ್ಷದ ಆಡಳಿತವನ್ನು ಕಿತ್ತೊಗೆಯಲು ಎನ್‌ಡಿಎ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೈಮುಗಿದು ಮನವಿ ಮಾಡಿದರು.

    ವೇದಿಕೆ ಹತ್ತಲು ವಾಗ್ವಾದ: ಕಾರ್ಯಕರ್ತರನ್ನು ವೇದಿಕೆಗೆ ಹತ್ತಲು ಬಿಡದೆ ಪೊಲೀಸ್ ವೃತ್ತ ನಿರೀಕ್ಷಕರು ತೆಡಯುತ್ತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ವೇದಿಕೆ ಮುಂಭಾಗ ಜೋರು ಧ್ವನಿಯಲ್ಲಿ ಮಾತನಾಡಿದ ಪ್ರಸಂಗ ಸಭೆ ಆರಂಭವಾಗುತ್ತಿದ್ದಂತೆ ನಡೆಯಿತು. ಚುನಾವಣೆ ಪ್ರಚಾರಕ್ಕೆ ಅಭ್ಯರ್ಥಿಯ ಪರ ನಿಲ್ಲುವ ನಮಗೆ ವೇದಿಕೆ ಮೇಲೆ ಅವಕಾಶ ಕೊಡದೆ ಅವಮಾನ ಎಸಗಲಾಗುತ್ತಿದೆ ಎಂದು ಕೂಗಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎಚ್.ಕೆ. ಸುರೇಶ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಾರ್ಯಕರ್ತರ ಮನವೊಲಿಸಿ ಸಮಾಧಾನ ಪಡಿಸಿದರು.

    ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸ್ವಾಗತಿಸಿದರೆ ಮುಖಂಡ ಎಂ.ಸಿ.ಕುಮಾರ್ ವಂದಿಸಿದರು. ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಮುಂಖಡ ಅಡಗೂರು ಆನಂದ್, ರೇಣುಕುಮಾರ್, ಬಿ.ಎಸ್.ಸೋಮಶೇಖರ್, ಪರ್ವತಯ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts