

ಪಾಟ್ನಾ: ಲಂಡನ್ ಮೂಲದ ಮಹಿಳೆಯೊಬ್ಬರು ಬಿಹಾರದ ರಾಜಕೀಯದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದೇ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ತಾನು ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಲಂಡನ್ನಲ್ಲಿ ವಾಸವಿರುವ ಪುಷ್ಪಮ್ ಪ್ರಿಯಾ ಚೌಧರಿ ಇಂತದ್ದೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯ ದಿನದಂದು (ಮಾ.8) ಅನೇಕ ರಾಷ್ಟ್ರೀಯ ಪತ್ರಿಕೆಗಳಲ್ಲಿ ತಾನು ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಜಾಹಿರಾತನ್ನು ಪ್ರಿಯಾ ಚೌಧರಿ ನೀಡಿದ್ದಾರೆ. ಈಕೆ ಜನತಾದಳ ಯುನೈಟೆಡ್ನ ಮಾಜಿ ಎಮ್ಎಲ್ಸಿ ವಿನೋಧ್ ಚೌಧರಿಯವರ ಮಗಳು ಎನ್ನುವುದು ವಿಶೇಷ.
ಸಿಎಂ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಪ್ರಿಯಾ ಚೌಧರಿ, ನೀವು ಬಿಹಾರನ್ನು ಪ್ರೀತಿಸುತ್ತಿದ್ದು ರಾಜಕೀಯವನ್ನು ದ್ವೇಷಿಸುತ್ತಿದ್ದರೆ ನನ್ನೊಂದಿಗೆ ಕೈ ಜೋಡಿಸಿ ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ. ಒಂದು ವೇಳೆ ಜನರು ಆಕೆಯನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾದಲ್ಲಿ 2025ರೊಳಗೆ ಬಿಹಾರ್ನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವುದಾಗಿ ಆಕೆ ಆಶ್ವಾಸನೆ ನೀಡಿದ್ದಾರೆ.
ಲಂಡನ್ನ ಸಸೆಕ್ಟ್ ವಿಶ್ವವಿದ್ಯಾಲಯದಲ್ಲಿ ಡೆವಲಪ್ಮೆಂಟ್ ಸ್ಟಡೀಸ್ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಪ್ರಿಯಾ ಚೌಧರಿ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್ನಲ್ಲಿ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ಬಿಹಾರದಲ್ಲಿ ಬಿಜೆಪಿ, ಜೆಡಿಯು ಮತ್ತು ಎಲ್ಜೆಪಿ ಪಕ್ಷದ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿದ್ದಾರೆ. (ಏಜೆನ್ಸೀಸ್)