More

    ಕರಿಂಕಾಳಿದೇವಿ ಮಹಿಮೆ ಅಪಾರ

    ಗೋಣಿಕೊಪ್ಪ: ಕೊಡಗು-ಕೇರಳ ಗಡಿಭಾಗದಲ್ಲಿ ಅನಾದಿ ಕಾಲದಿಂದಲೂ ಕರಿಂಕಾಳಿ ದೇವಿ ನೆಲೆ ನಿಂತಿದ್ದು, ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯದ ಭಕ್ತರನ್ನೂ ಪೋಷಿಸುತ್ತಿರುವ ದೇವಿಯ ಮಹಿಂಎ ಅಪಾರ.

    ಪ್ರಕೃತಿಯ ಮಡಿಲಲ್ಲಿ ದೇವಿ ನೆಲೆಸಿದ್ದು, ಈ ದೇವಾಲಯ ಹಿಂದಿನ ಕಾಲದ ಪ್ರಕೃತಿ ಆರಾಧನಾ ರೀತಿಯನ್ನು ಹೋಲುತ್ತದೆ. ಯಾವುದೇ ಗುಡಿ ಅಥವಾ ಗೋಪುರಗಳಿಲ್ಲದೆ ಬಯಲಿನಲ್ಲಿಯೇ ದೇವಿಯ ವಿಗ್ರಹವಿದೆ. ಮೂಲ ಕಲ್ಲು ಉದ್ಭವ ಸ್ವರೂಪಿಯಾಗಿದ್ದು, ಬಳಿಕ ದೇವಾಲಯ ನಿರ್ಮಿಸಲಾಗಿದೆ. ಪ್ರಸ್ತುತ ಕಲ್ಲಿನ ಸುತ್ತಲೂ ಕಬ್ಬಣದ ಸಲಾಕೆಯನ್ನು ಅಳವಡಿಸಲಾಗಿದೆ. ಈ ದೇವಾಲಯ ಕರಿಂಕಾಳಿ ದೇವರಕಾಡಿನಲ್ಲಿ ಸ್ಥಾಪಿತವಾಗಿದ್ದು, ಸುಮಾರು 19 ಎಕರೆ ವಿಸ್ತೀರ್ಣ ಹೊಂದಿರುವ ದೇವರ ಕಾಡು ಇದಾಗಿದೆ. ದೇವಾಲಯಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ.

    ದೇವಾಲಯ ಇತಿಹಾಸ: ಈಗ ಪೂಜೆ ಮಾಡುತ್ತಿರುವ ಕುಟುಂಬದ ಹಿರಿಯರೊಬ್ಬರು ಈ ಹಿಂದೆ ಈ ಮಾರ್ಗವಾಗಿ ತೆರಳುತ್ತಿದ್ದಾಗ ದಣಿವಾರಿಸಿಕೊಳ್ಳಲು ಒಂದು ಮರದ ಕೆಳಗೆ ಮಲಗಿದ್ದರು ಎನ್ನಲಾಗಿದೆ. ನಿದ್ದೆ ಹತ್ತಿದಾಗ ಕನಸಿನಲ್ಲಿ ಬಂದ ದೇವಿ, ನಾನು ಇಲ್ಲೇ ನೆಲೆ ನಿಲ್ಲಲಿದ್ದು, ನಿತ್ಯ ನನಗೆ ಪೂಜೆಯಾಗಬೇಕು ಎಂದು ಹೇಳಿದಂತೆ ಭಾಸವಾಗುತ್ತದೆ. ನಂತರ ನೋಡಿದಾಗ ಆ ಪ್ರದೇಶದಲ್ಲಿ ಕಲ್ಲೊಂದು ಉದ್ಭವವಾಗಿರುತ್ತದೆ. ಅದುವೇ ಈಗಲೂ ಪೂಜಿಸಿಕೊಂಡು ಬರುತ್ತಿರುವ ದೇವರ ಮೂಲ ರೂಪ. ಅಲ್ಲಿಂದ ಇಲ್ಲಿಯವರೆಗೆ ತಪ್ಪದೆ ಪೂಜೆ-ಪುನಸ್ಕಾರ, ಉತ್ಸವಗಳು ನಡೆಯುತ್ತಿವೆ. ದೂರದ ತಮಿಳುನಾಡಿನಿಂದಲೂ ಭಕ್ತರು ಬಂದು ದೇವರ ಆಶೀರ್ವಾದ ಪಡೆಯುತ್ತಾರೆ.

    ಮಾರ್ಗ: ಮೈಸೂರು ಮತ್ತು ಮಡಿಕೇರಿ ಕಡೆಯಿಂದ ಆಗಮಿಸುವವರು ಮೊದಲಿಗೆ ಗೋಣಿಕೊಪ್ಪ ತಲುಪಬೇಕು. ಅಲ್ಲಿಂದ 35 ಕಿ.ಮೀ. ಸಾಗಿದರೆ ಕುಟ್ಟ ಸಿಗುತ್ತದೆ. ಇಲ್ಲಿಯವರೆಗೂ ಬಸ್‌ಗಳ ವ್ಯವಸ್ಥೆ ಇದ್ದು, ಅಲ್ಲಿಂದ ಎರಡು ಕಿ.ಮೀ. ದೂರ ಸಾಗಿದರೆ ನಾತಂಗಲ್ಲು ಪ್ರದೇಶದಲ್ಲಿ ಕರಿಂಕಾಳಿ ದೇವಿ ದೇವಾಲಯ ಸಿಗುತ್ತದೆ.

    ಹಬ್ಬ, ಪೂಜೆ; ಪ್ರತಿ ಮಂಗಳವಾರ ಬೆಳಗ್ಗೆ 7 ರಿಂದ 12 ಗಂಟೆವರೆಗೆ ಪೂಜೆ ನಡೆಯುತ್ತದೆ. ಕುಂಕುಮಾರ್ಚನೆ ದೇವಿಗೆ ಪ್ರಿಯವಾದ ಸೇವೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. 15 ದಿನಗಳ ಕಾಲ ಉತ್ಸವ ನಡೆಯಲಿದ್ದು, ಮೊದಲ ಹತ್ತು ದಿನ ಬೆಳ್ಳಾಟ ಇರುತ್ತದೆ. ಅಂದರೆ ದೇವರ ತೆರೆ ನಡೆಯುತ್ತದೆ. ನಂತರ ಭಕ್ತರ ಹರಕೆಯ ಬೆಳ್ಳಾಟವೂ ಇರಲಿದೆ. ಪ್ರತಿದಿನ ಹರಕೆ ಹೊತ್ತ ಬರುವ ಭಕ್ತರ ಬೆಳ್ಳಾಟಗಳನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಅಲ್ಲದೇ, ತೆರೆ ಮೂಲಸ್ಥಾನಕ್ಕೆ ತೆರಳಿ ನಂತರ ಕ್ಷೇತ್ರಪಾಲಕರ ಬಳಿಯೂ ತೆರಳಿ ಭಕ್ತರ ಹರಕೆ ತೀರಿಸುತ್ತದೆ.

    ಉಳಿದಂತೆ ಮೂರು ದಿನ ದೇವರ ಉತ್ಸವ ನಡೆಯಲಿದೆ. ಮೊದಲ ದಿನದ ಪೂಜಾರಿ ಮನೆಯಿಂದ ದೇವರ ಉತ್ಸವ ಮೂರ್ತಿಯನ್ನು ಅದ್ದೂರಿಯಾಗಿ ಮರವಣಿಗೆಯಲ್ಲಿ ತರಲಾಗುತ್ತದೆ. ಈ ಹಿಂದೆ ಎರಡನೇ ದಿನದಂದು ಆನೆ ಮೇಲೆ ವಿಗ್ರಹವನ್ನು ಇರಿಸಿ ಮೆರವಣಿಗೆ ಮೂಲಕ ಪೂಜೆಕಲ್ಲು ಹೊಳೆಯವರೆಗೆ ಸಾಗಿ ಅಲ್ಲಿ ದೇವರ ಜಳಕದ ನಂತರ ಅಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ತರಲಾಗುತಿತ್ತು. 2012ರ ನಂತರ ಆನೆಯ ಮೇಲೆ ಮೆರವಣಿಗೆ ಸ್ಥಗಿತಗೊಳಿಸಲಾಗಿದೆ. ಮೂರನೇ ದಿನ ದೇವಿಯ ದೊಡ್ಡ ಮುಡಿ ತೆರೆ ನಡೆಯುತ್ತದೆ. ಇದರ ಜತೆಗೆ ಗುಳಿಗ, ಕುಟ್ಟಿಚಾತನ್ ತೆರೆಯೂ ಇರುತ್ತದೆ. ಮೊದಲು ದೀಪಾವಳಿ ಸಂದರ್ಭದಲ್ಲಿಯೂ ಬೆಳ್ಳಾಟ ನಡೆಯುತ್ತಿತ್ತು. ಕಾರಣಾಂತರಗಳಿಂದ ಈಗ ನಿಂತಿದೆ. ಮುಂದಿನ ವರ್ಷದಿಂದ ಮತ್ತೆ ಆರಂಭಿಸುವ ಇರಾದೆ ಇದೆ ಎನ್ನುತ್ತಾರೆ ಅರ್ಚಕ ಧ್ಯಾನ್ ದರ್ಶನ್.

    ಈಗ ತಿಳಿದಿರುವ ಹಾಗೆ 5 ನೇ ತಲೆಮಾರಿನವರು ಪೂಜೆ ಮಾಡುತ್ತಿದ್ದಾರೆ. ಮೊದಲು ಅಣ್ಣಯ್ಯ, ಅವರ ಮಗ ಶಿವಣ್ಣ, ನಂತರ ತಮ್ಮಯ್ಯ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ವಿ.ಟಿ ಗಣೇಶ್, ಮತ್ತೊಬ್ಬ ವಿ.ಟಿ.ರವೀಂದ್ರ. ರವೀಂದ್ರ ಅವರ ಮಗ ಧ್ಯಾನ್ ದರ್ಶನ್ ಪ್ರಸ್ತುತ ದೇವಾಲಯದ ಪೂಜಾರಿ. ವಂಶಪಾರಂಪರ್ಯವಾಗಿ ಈ ಕುಟುಂಬ ಪೂಜೆ ಮಾಡುತ್ತ ಬಂದಿದೆ. ಮೂಲತಃ ಒಕ್ಕಲಿಗರಾದರೂ ವೇದ ಉಪನಿಷತ್ತುಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ.

    ಹರಕೆ; ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಇಲ್ಲಿನ ದೇವಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಮಕ್ಕಳಾಗದಿರುವುದು, ವಾಸಿಯಾಗದ ಕಾಯಿಲೆ, ವ್ಯಾಜ್ಯಗಳು …ಹೀಗೆ ನಾನಾ ಕಾರಣಗಳಿಗೆ ಹರಕೆ ಹೊತ್ತು ಬೇಡಿಕೆ ಈಡೇರಿದ ನಂತರ ಹರಕೆ ತೀರಿಸುತ್ತಾರೆ. ತ್ರಿಶೂಲ, ಕಪ್ಪು ಬಳೆ, ಕೆಂಪು ವಸ್ತ್ರ ದೇವಿಗೆ ಪ್ರಿಯವಾದ ವಸ್ತುಗಳು. ಇವನ್ನೇ ಹರಕೆ ರೂಪದಲ್ಲಿ ನೀಡಲಾಗುತ್ತದೆ. ದೊಡ್ಡ ಹಬ್ಬದ ಮಾರನೇ ದಿನ ಪ್ರಾಣಿ ಬಲಿಯನ್ನೂ ನೀಡಲಾಗುತ್ತದೆ. ಹರಕೆ ಹೊತ್ತವರು ಬಲಿ ಸಮರ್ಪಿಸಿ ಹರಕೆ ತೀರಿಸುತ್ತಾರೆ.

    ಈ ತಾಯಿಯ ಶಕ್ತಿ ಅಪಾರ. ಭಕ್ತಿಯಿಂದ ಬೇಡಿದರವರನ್ನು ಎಂದಿಗೂ ಕೈಬಿಟ್ಟವಳಲ್ಲ. ಬೇರೆ ರಾಜ್ಯದಿಂದಲೂ ಭಕ್ತರು ಹರಕೆ ಹೊತ್ತು ಇಲ್ಲಿಗೆ ಬರುತ್ತಾರೆ. ಹಬ್ಬದ ದಿನ ಹರಕೆ ಬೆಳ್ಳಾಟಗಳೂ ಹೆಚ್ಚಾಗಿ ನಡೆಯುತ್ತದೆ. ಇದು ತಾಯಿಯ ಮೇಲೆ ಇರುವ ಭಕ್ತಿಯನ್ನು ತೋರಿಸುತ್ತದೆ. ಈ ದೇವಾಲಯ ಪ್ರಕೃತಿಯ ಸುಂದರ ಪ್ರದೇಶದಲ್ಲಿ ಇದೆ. ಬೆಳ್ಳಾಟ ಮಾಡಿಸುವವರು ಮೊದಲೇ ತಿಳಿಸಿದರೆ ಅದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು.
    ಧ್ಯಾನ್ ದರ್ಶನ್ ಅರ್ಚಕ, ಕರಿಂಕಾಳಿ ದೇವಾಲಯದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts