More

    ತಾಯಿ ಕೊಂದ ಪುತ್ರನಿಗೆ ಪ್ರಚೋದನೆ ಕೊಟ್ಟ ತಂದೆ

    ಬೆಂಗಳೂರು: ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ನಡೆದಿದ್ದ ಮಗನಿಂದಲೇ ತಾಯಿ ಹತ್ಯೆ ಪ್ರಕರಣದಲ್ಲಿ ಮೃತಳ ಪತಿಯನ್ನು ಕೆ.ಆರ್. ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಆರೋಪಿ ಚಂದ್ರಪ್ಪ ಬಂಧಿತ. ಅನೈತಿಕ ಸಂಬಂಧ ಶಂಕೆ ಮೇರೆಗೆ ತನ್ನ ಪತ್ನಿಯನ್ನು ಕೊಲೆ ಮಾಡಲು 17 ವರ್ಷದ ಮಗನಿಗೆ ಪ್ರಚೋದನೆ ನೀಡಿದ್ದ. ಕೃತ್ಯ ಎಸಗಿದ ಬಳಿಕ ಮಗನನ್ನು ಠಾಣೆಗೆ ಶರಣಾಗತಿ ಮಾಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತನಿಖೆ ವೇಳೆ ಕೃತ್ಯದಲ್ಲಿ ಈತನ ಕೈವಾಡ ಇರುವುದು ಸಾಕ್ಷಾೃಧಾರಗಳಿಂದ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬಾಗೇಪಲ್ಲಿ ತಾಲೂಕಿನ ಚಂದ್ರಪ್ಪ ಮತ್ತು ಚಿಂತಾಮಣಿ ತಾಲೂಕಿನ ನೇತ್ರಾವತಿ 25 ವರ್ಷಗಳ ಹಿಂದೆ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಜಸ್ಟಿಸ್ ಭೀಮಯ್ಯ ಲೇಔಟ್‌ನಲ್ಲಿ ಚಂದ್ರಪ್ಪ ಕುಟುಂಬ ನೆಲೆಸಿತ್ತು. ಮುಳಬಾಗಿಲು ತಾಲೂಕಿನಲ್ಲಿ 2 ಎಕರೆಯಲ್ಲಿ ಕೃಷಿ ಮಾಡುತ್ತಿದ್ದ ಚಂದ್ರಪ್ಪ, ಭೀಮಯ್ಯ ಲೇಔಟ್‌ನಲ್ಲಿ ಏಳೆಂಟು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ಬಿಟ್ಟಿದ್ದ. ವಿದೇಶದಲ್ಲಿ ಪುತ್ರಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದರೆ, ಮಗ ಮೊದಲನೇ ವರ್ಷದ ಡಿಪ್ಲೊಮಾ ಮಾಡುತ್ತಿದ್ದ. ಸಾಫ್ಟ್‌ವೇರ್ ಕಂಪನಿಯಲ್ಲಿ ನೇತ್ರಾವತಿ ಕೆಲಸ ಮಾಡುತ್ತಿದ್ದರು.

    ಪತ್ನಿ ಶೀಲ ಶಂಕಿಸಿ ಮನೆಯಲ್ಲಿ ಪದೇಪದೆ ಚಂದ್ರಪ್ಪ ಜಗಳ ಮಾಡುತ್ತಿದ್ದ. ನಿನ್ನ ತಾಯಿ ಚಾರಿತ್ರ್ಯ ಸರಿ ಇಲ್ಲ. ಅನ್ಯರ ಜತೆಗೆ ಸಲುಗೆ ಇದೆ ಎಂದು ಮಗನಿಗೂ ಎತ್ತಿಕಟ್ಟಿದ್ದ. ಕೊನೆಗೆ ತಾಯಿಯನ್ನು ಕೊಲೆ ಮಾಡಲು ಮಗ ಸಹ ಸಾಥ್ ಕೊಟ್ಟಿದ್ದ. ಬಂಧನಕ್ಕೆ ಒಳಗಾದರೆ ಅಪ್ರಾಪ್ತ ಎಂಬ ಕಾರಣಕ್ಕೆ ಸುಲಭವಾಗಿ ಜೈಲಿನಿಂದ ಹೊರಬಹುದು ಎಂದು ಮಗನನ್ನು ಒಪ್ಪಿಸಿದ್ದ. ಪೂರ್ವಸಂಚಿನಂತೆ ಶುಕ್ರವಾರ ನಸುಕಿನಲ್ಲಿ ನಿದ್ರೆಯಲ್ಲಿದ್ದ ನೇತ್ರಾವತಿ ಮೇಲೆ ಸಲಾಕೆಯಿಂದ ತಂದೆ- ಮಗ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತಿಂಡಿ ಮಾಡುವ ವಿಚಾರಕ್ಕೆ ತಾಯಿ ಜತೆ ಜಗಳವಾಯಿತು. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಅಮ್ಮನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಗಿ ಕೆ.ಆರ್. ಪುರ ಠಾಣೆಗೆ ಹೋಗಿ ಮಗ ತಪ್ಪೊಪ್ಪಿಕೊಂಡಿದ್ದ. ಬೆಳಗ್ಗೆ 6 ಗಂಟೆಗೆ ತಿಂಡಿ ವಿಷಯ ವಿಷಯಕ್ಕೆ ಜಗಳ ನಡೆಯುವ ಸಾಧ್ಯವೇ ಎಂಬ ಶಂಕೆ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದರು.

    ಪ್ರತಿದಿನ ಮುಳಬಾಗಿಲಿಗೆ ತೆರಳಿ ಸಂಜೆ ಚಂದ್ರಪ್ಪ ಮರಳುತ್ತಿದ್ದ. ಅಂತೆಯೇ ಕೃತ್ಯ ನಡೆದ ದಿನ ಸಹ 5 ಗಂಟೆಗೆ ಮುಳಬಾಗಿಲಿನ ತೋಟಕ್ಕೆ ಹೋಗಿದ್ದಾಗಿ ಚಂದ್ರಪ್ಪ ಹೇಳಿದ್ದ. ಕೃತ್ಯಕ್ಕೆ ಬಳಸಿದ್ದ ರಾಡ್ ಮೇಲೆ ಮಗನ ಬೆರಳಚ್ಚು ಮಾತ್ರವಲ್ಲದೆ, ಚಂದ್ರಪ್ಪನ ಬೆರಳಚ್ಚು ಸಹ ಪತ್ತೆಯಾಗಿತ್ತು. ಈ ಮೇರೆಗೆ ಚಂದ್ರಪ್ಪನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts