More

  ಚರಂಡಿಯಲ್ಲಿ ತುಂಬಿದೆ ಹೂಳು

  ಅನ್ಸಾರ್ ಇನೋಳಿ ಉಳ್ಳಾಲ

  ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯಾಡಳಿತ ಹೆಚ್ಚಾಗಿ ಗಮನ ಹರಿಸಿದ್ದು, ಕಂಡು ಬರುತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಜನಶಿಕ್ಷಣ ಟ್ರಸ್ಟ್ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದೆ. ಒಂದೇ ಮಳೆಗೆ ಚರಂಡಿಗಳು ಬ್ಲಾಕ್ ಆಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತಗಾರರನ್ನು ಈಗಲೇ ಎಚ್ಚರಿಸಿ ಮುಂದಾಗುವ ತೊಂದರೆಗಳನ್ನು ತಪ್ಪಿಸುವಂತೆ ಅಧಿಕಾರಿಗೆ ಮನವಿ ಮಾಡಲಾಗಿದೆ.

  ಬಿಸಿಲ ಬೇಗೆಗೆ ತತ್ತರಿಸಿರುವ ಜನ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ ಬಂದ ಸಣ್ಣ ಮಳೆಗೇ ತ್ಯಾಜ್ಯ ವಸ್ತುಗಳು ಚರಂಡಿಯಲ್ಲಿ ಹರಿದು ಅಲ್ಲಲ್ಲಿ ರಾಶಿ ಬಿದ್ದಿವೆ. ಆದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳದಿರುವುದು ಆಯಾ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

  ಪ್ರತಿವರ್ಷವೂ ಮಳೆಗಾಲದ ಆರಂಭದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸಬೇಕಾಗುತ್ತದೆ. ಮೊದಲ ಮಳೆ ಬಂದಾಗ ರಸ್ತೆಬದಿಯಿರುವ ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ. ಇದಕ್ಕೆ ಕಾರಣ, ಮಳೆಗಾಲ ಮುಗಿದ ಬಳಿಕ ಈ ಚರಂಡಿಗಳಲ್ಲಿ ಮಣ್ಣು, ಕಸ ಸೇರುವುದು. ಇದರಿಂದಾಗಿ ಪ್ರಥಮ ಮಳೆಗೇ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯಲ್ಲೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ.

  ಇಂಥ ಪರಿಸ್ಥಿತಿ ಪ್ರತಿ ವರ್ಷ ತೊಕ್ಕೊಟ್ಟಿನಲ್ಲಿ ಉದ್ಭವಿಸುತ್ತದೆ. ಕಲ್ಲಾಪುವಿನಿಂದ ತೊಕ್ಕೊಟ್ಟುವರೆಗಿನ ಸರ್ವೀಸ್ ರಸ್ತೆಗೆ ತಾಗಿಕೊಂಡಿರುವ ಮುಚ್ಚಿದ ಚರಂಡಿ ಮೊದಲ ಮಳೆಗೆ ತುಂಬಿ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ಇದರಿಂದಾಗಿ ಚರಂಡಿ ಮತ್ತು ರಸ್ತೆಯ ಯಾವುದು ಎನ್ನುವ ಗೊಂದಲ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಎದುರಾಗಿ ಅಪಘಾತಗಳಾಗುವುದೂ ಇದೆ. ಇತ್ತೀಚೆಗೆ ಬಂದ ಸಣ್ಣ ಮಳೆಯ ಸಂದರ್ಭದಲ್ಲೇ ಕೃತಕ ನೆರೆ ಸೃಷ್ಟಿಯಾಗಿತ್ತು. ಆದರೂ ಸ್ಥಳೀಯಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ.

  ಇದೇ ಪರಿಸ್ಥಿತಿ ಗ್ರಾಮೀಣ ಪ್ರದೇಶದಲ್ಲೂ ಇದೆ. ನಾಟೆಕಲ್, ಕಲ್ಕಟ್ಟ ಸಹಿತ ಕೆಲವು ಕಡೆಗಳಲ್ಲಿ ರಸ್ತೆಬದಿಯ ಚರಂಡಿಯಲ್ಲಿ ಹೂಳಿನ ಬದಲು ತ್ಯಾಜ್ಯದ ಕಟ್ಟುಗಳು ತುಂಬಿವೆ. ರಸ್ತೆಯಲ್ಲಿ ಹೋಗುವವರು ಮನೆಯಿಂದ ತರುವ ತ್ಯಾಜ್ಯ ಕಟ್ಟುಗಳನ್ನು ರಸ್ತೆಬದಿ ಅಥವಾ ಪಕ್ಕದಲ್ಲೇ ಇರುವ ಚರಂಡಿಗೆ ಎಸೆದು ಹೋಗುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದರಿಂದಾಗಿ ಇತ್ತೀಚಿನ ಮಳೆಗೆ ನೀರಿನೊಂದಿಗೆ ತ್ಯಾಜ್ಯದ ಕಟ್ಟುಗಳೂ ಹರಿದು ಬಂದು ಚರಂಡಿ ರಾಶಿಬಿದ್ದಿವೆ. ಆದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಂಡಿಲ್ಲ. ಇನ್ನೊಂದು ಮಳೆ ಬಂದರೆ ಒಂದೂ ನೀರು ರಸ್ತೆಯಲ್ಲಿ ಹರಿಯಲಿದೆ, ಇಲ್ಲವೇ ನೀರಿನಲ್ಲಿ ತ್ಯಾಜ್ಯ ಕಟ್ಟುಗಳು ಹರಿದು ಯಾರದ್ದೋ ಮನೆಯಂಗಳ ಸೇರಲಿವೆ.

  ಜನಶಿಕ್ಷಣ ಟ್ರಸ್ಟ್ ಪತ್ರ

  ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯಾಡಳಿತ ಹೆಚ್ಚಾಗಿ ಗಮನ ಹರಿಸಿದ್ದು, ಕಂಡು ಬರುತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಜನಶಿಕ್ಷಣ ಟ್ರಸ್ಟ್ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದೆ. ಒಂದೇ ಮಳೆಗೆ ಚರಂಡಿಗಳು ಬ್ಲಾಕ್ ಆಗಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತಗಾರರನ್ನು ಈಗಲೇ ಎಚ್ಚರಿಸಿ ಮುಂದಾಗುವ ತೊಂದರೆಗಳನ್ನು ತಪ್ಪಿಸುವಂತೆ ಅಧಿಕಾರಿಗೆ ಮನವಿ ಮಾಡಲಾಗಿದೆ.

  ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಯನ್ನಾಧರಿಸಿ ಎಲ್ಲ ಪಂಚಾಯಿತಿಗಳಿಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪತ್ರ ಕಳಿಸಿ ತಕ್ಷಣ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದಾರೆ. ಅದರಂತೆ ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ.
  – ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಭಾರಿ

  ಮಳೆಗಾಲ ಆರಂಭಗೊಳ್ಳುವ ಮೊದಲೇ ಸ್ಥಳೀಯಾಡಳಿತ ಚರಂಡಿಯ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯುವ ಅವಕಾಶ ಕಲ್ಪಿಸಬೇಕು. ಅದು ಬಿಟ್ಟು ಮಳೆ ಬರುವುದನ್ನು ಕಾಯುವುದು ಸರಿಯಲ್ಲ. ಏಕಾಏಕಿ ಮಳೆ ಬಂದರೆ ಚರಂಡಿಯ ತ್ಯಾಜ್ಯ ಮನೆಯಂಗಳ, ವ್ಯಾಪಾರಿ ಸ್ಥಳದಲ್ಲಿ ರಾಶಿಬಿದ್ದು ಸಮಸ್ಯೆ ಆದರೆ ಹೊಣೆ ಯಾರು?
  – ಬಾದುಶಾ ಸಾಂಬಾರ್‌ತೋಟ ಸಾಮಾಜಿಕ ಕಾರ್ಯಕರ್ತ

  ಎರಡು ದಿನಗಳಿಂದ ಹಿಟಾಚಿಗಳನ್ನು ಬಳಸಿ ಉಳ್ಳಾಲಬೈಲ್ ರಾಜಕಾಲುವೆ ಮೂಲಕ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ. ಮ್ಯಾನುವೆಲ್‌ಗಳನ್ನೂ ಶುದ್ಧೀಕರಿಸಲಾಗುವುದು. ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್‌ವರೆಗೆ ರಾಷ್ಟ್ರೀಯ ಹೆದ್ದಾರಿಯವರು ಚರಂಡಿಯ ಹೂಳೆತ್ತಿಸಬೇಕಿದ್ದರೂ ಅವರು ಆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನಗರಸಭೆಯಿಂದಲೇ ಮಾಡಿಸಲಾಗುವುದು.
  – ಯು.ಪಿ.ಅಯೂಬ್ ಮಂಚಿಲ ಉಳ್ಳಾಲ ನಗರಸಭೆ ಉಪಾಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts