More

    ಎಲ್ಲೆಡೆ ಲಕ್ಷ್ಮೀಪೂಜೆಯ ಸಂಭ್ರಮ

    ಹುಬ್ಬಳ್ಳಿ: ದೀಪಾವಳಿ ಅಂಗವಾಗಿ ನಗರದ ಅಂಗಡಿ, ದೇವಸ್ಥಾನ ಹಾಗೂ ಮನೆಗಳಲ್ಲಿ ಭಾನುವಾರ ಶ್ರದ್ಧೆ, ಭಕ್ತಿಯಿಂದ ಲಕ್ಷ್ಮೀದೇವಿಯ ಪೂಜೆ ನೆರವೇರಿತು.

    ಪೂಜೆ ಅಂಗವಾಗಿ ಝುಗಮಗಿಸುವ ವಿದ್ಯುತ್ ದೀಪ, ಅಲಂಕಾರದ ಹೂವು, ತಳಿರು, ತೋರಣಗಳಿಂದ ಅಂಗಡಿ ಹಾಗೂ ದೇವಸ್ಥಾನಗಳನ್ನು ಶೃಂಗರಿಸಲಾಗಿತ್ತು.

    ಸ್ಟೇಶನ್ ರಸ್ತೆ, ಮರಾಠಾ ಗಲ್ಲಿ, ದುರ್ಗದಬೈಲ್, ಕೊಪ್ಪಿಕರ ರಸ್ತೆ, ಜನತಾ ಬಜಾರ್, ಎಂ.ಜಿ. ಮಾರ್ಕೆಟ್, ಗೋಕುಲ ರಸ್ತೆ, ವಿದ್ಯಾನಗರ, ಕೇಶ್ವಾಪುರ, ಉಣಕಲ್ಲ ಸೇರಿ ವಿವಿಧೆಡೆ ಅಂಗಡಿಗಳಲ್ಲಿ ಬೆಳಗ್ಗೆಯೇ ಪೂಜೆ ಮಾಡಲಾಯಿತು. ಇನ್ನೂ ಕೆಲವರು ಸಂಜೆ ಹೊತ್ತಿಗೆ ಪೂಜೆ ಮಾಡಿದ್ದೂ ಕಂಡುಬಂದಿತು. ಸಂಬಂಧಿಗಳು, ಸ್ನೇಹಿತರು ಅಂಗಡಿಗಳಿಗೆ ಆಗಮಿಸಿ, ವ್ಯಾಪಾರಸ್ಥರಿಗೆ ಶುಭ ಹಾರೈಸುತ್ತಿದ್ದುದು ಸಾಮಾನ್ಯವಾಗಿತ್ತು. ಕರೊನಾ ಕಾರಣದಿಂದ ಜನಸಂದಣಿ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆ ಇತ್ತು. ಕೆಲ ವ್ಯಾಪಾರಸ್ಥರು ಶನಿವಾರವೇ ಲಕ್ಷ್ಮೀ ಪೂಜೆ ಮಾಡಿದ್ದಾರೆ. ಇನ್ನು ಕೆಲವರು ಸೋಮವಾರ ಮಾಡಲಿರುವುದರಿಂದ ಪೂಜೆಯ ತಯಾರಿಯಲ್ಲಿ ತೊಡಗಿದ್ದರು.

    ಕೇಶ್ವಾಪುರ, ದಾಜಿಬಾನಪೇಟೆ ಹಾಗೂ ಇತರೆಡೆಯ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಲಕ್ಷ್ಮೀದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದರು.

    ದೀಪಾವಳಿ ಅಮಾವಾಸ್ಯೆ ಅಂಗವಾಗಿ ವಾಹನಗಳ ಪೂಜೆಯೂ ನಡೆಯಿತು.

    ಪಟಾಕಿ ಕಡಿಮೆ: ಪ್ರತಿವರ್ಷ ದೀಪಾವಳಿಗಿಂತ ಈ ಸಲ ಪಟಾಕಿ ಅಬ್ಬರ ಕಡಿಮೆ ಇದ್ದುದು ಕಂಡುಬಂತು. ಕರೊನಾ, ಸರ್ಕಾರದ ನಿರ್ಬಂಧಗಳು, ಪರಿಸರ ಜಾಗೃತಿ ಇತ್ಯಾದಿ ಕಾರಣದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಸಿಡಿಮದ್ದುಗಳನ್ನು ಕೊಂಡುಕೊಂಡಿರಲಿಲ್ಲ.

    ಮೂವರ ಕಣ್ಣಿಗೆ ಪಟಾಕಿ ಪೆಟ್ಟು: ಪಟಾಕಿ ನೋಡುತ್ತ ನಿಂತ ಮೂವರ ಕಣ್ಣಿಗೆ ಪೆಟ್ಟಾಗಿರುವ ಘಟನೆ ಹುಬ್ಬಳ್ಳಿ ನಗರದ ವಿವಿಧೆಡೆ ನಡೆದಿದೆ.

    ತಬೀಬ್​ಲ್ಯಾಂಡ್​ನ 28 ವಯಸ್ಸಿನ ವ್ಯಕ್ತಿ ಪಟಾಕಿ ಸಿಡಿ ಯುವುದನ್ನು ನೋಡುತ್ತ ನಿಂತಾಗ ಹಾರಿದ ಕಿಡಿ ಬಲಗಣ್ಣಿಗೆ ಬಿದ್ದಿದೆ. ಕಣ್ಣಿನಿಂದ ರಕ್ತಸ್ರಾವ ಆಗಿದ್ದು, ತೀವ್ರ ತೊಂದರೆ ಇರುವುದರಿಂದ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನಡೆಯುತ್ತಿದೆ.

    ಎಸ್.ಎಂ. ಕೃಷ್ಣ ನಗರದ 31 ವರ್ಷದ ವ್ಯಕ್ತಿಗೂ ಎಡಗಣ್ಣಿಗೆ ಪೆಟ್ಟು ಬಿದ್ದಿದೆ.

    ಸಿಡಿದ ಪಟಾಕಿಯಲ್ಲಿನ ಕಲ್ಲಿನ ಪುಡಿ ಮೂರು ವರ್ಷದ ಬಾಲಕನ ಕಣ್ಣಿಗೆ ಸೇರಿರುವ ಘಟನೆ ಕೇಶ್ವಾಪುರ ಮನೋಜ ಪಾರ್ಕ್​ನಲ್ಲಿ ಸಂಭವಿಸಿದೆ. ಈ ಮೂವರೂ ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಪಟಾಕಿ ಸಿಡಿಸಿ ಖುಷಿ ಪಡುವುದೇನೊ ಸರಿ. ಆದರೆ, ಬೇರೆಯವರ ಕಣ್ಣು ಕಳೆಯುವುದು ಖಂಡಿತ ಸಲ್ಲ. ಈ ಮೂವರು ಪಟಾಕಿ ಸಿಡಿಸಲು ಹೋಗಿಲ್ಲ. ನೋಡುತ್ತ ನಿಂತಾಗ ಕಣ್ಣಿಗೆ ಪೆಟ್ಟಾಗಿದೆ. ಸರ್ಕಾರ ಪಟಾಕಿ ನಿರ್ಬಂಧಿಸಿ ಹಸಿರು ಪಟಾಕಿಗೆ ನಿಶಾನೆ ತೋರಿಸಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts