More

    ಶೇ.80 ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ; ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ

    ತಿಪಟೂರು: ಸರ್ಕಾರಿ ಶಾಲಾ ಮಕ್ಕಳಿಗೆ ಈವರೆಗೆ ಶೇ.80 ಪುಸ್ತಕ ವಿತರಣೆ ಮಾಡಲಾಗಿದೆ. ಉಳಿದ ಶೇ. 20 ಮಕ್ಕಳಿಗೆ ಸೆ. 15ರೊಳಗೆ ಪೂರೈಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

    ನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾದಿಂದ ಪುಸ್ತಕ ಮುದ್ರಣ ಸಾಮಗ್ರಿ, ಕಾಗದ ಪೂರೈಕೆಯಲ್ಲಿ ಹಿನ್ನಡೆ ಜತೆಗೆ ಶಾಲೆ ತೆರೆಯುವ ಬಗ್ಗೆ ಅನಿಶ್ಚಿತತೆ ಕಾಡುತ್ತಿದ್ದ ಪರಿಣಾಮ ಸಕಾಲದಲ್ಲಿ ಶಾಲಾ ಮಕ್ಕಳ ಪುಸ್ತಕಗಳನ್ನು ಮುದ್ರಿಸಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

    ಶಾಲೆ ತೆರೆಯುವ ಬಗ್ಗೆ ಸರ್ಕಾರ ನಿಲುವು ಪ್ರಕಟಿಸಿದ ನಂತರ ಪುಸ್ತಕ ಮುದ್ರಣ ಸಾಧ್ಯವಾಗದ ಕಾರಣ, ಶಾಲೆ ಪ್ರಾರಂಭಕ್ಕೂ ಮುಂಚೆ ಮಕ್ಕಳಿಗೆ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ಇದರ ಜತೆಗೆ ವಿಶೇಷ ಮುತುವರ್ಜಿ ವಹಿಸಿದ ಕೆಲ ಶಿಕ್ಷಕರು, 9 ಮತ್ತು 10 ನೇ ತರಗತಿ ಪೂರೈಸಿದ ಮಕ್ಕಳಿಂದ ಹಳೇ ಪುಸ್ತಕಗಳನ್ನು ಸಂಗ್ರಹಿಸಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡಿರುವುದು ನಿಜಕ್ಕೂ ಅಭಿನಂದನೀಯ. ಆದಾಗ್ಯೂ ಅಂತರ್ಜಾಲದಲ್ಲಿ ಮಕ್ಕಳಿಗೆ ಬೇಕಾದ ವಿಷಯ ಆಯ್ಕೆ ಮಾಡಿಕೊಂಡು ಇ-ಪುಸ್ತಕ ಪ್ರತಿ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ನಾವೆಲ್ಲ ಶಾಲೆ ಕಲಿಯುತ್ತಿದ್ದಾಗ ಅಣ್ಣ ಓದಿದ ಪುಸ್ತಕವನ್ನು ತಮ್ಮ ಅಥವಾ ತಂಗಿ, ಬಳಸುವ ಪರಿಪಾಠವಿತ್ತು. ಈ ಪ್ರಕ್ರಿಯೆ 2-3 ವರ್ಷ ಮುಂದುವರಿಯುತ್ತಿತ್ತು. ಇದೀಗ ನಾವು ಕೂಡ ಈ ಪರಿಪಾಠವನ್ನು ಅಳವಡಿಸಿಕೊಂಡರೆ ಪ್ರಕೃತಿಗೆ ನಮ್ಮದೇ ಆದ ಕೊಡುಗೆ ನೀಡಿದಂತಾಗುತ್ತದೆ. ಪ್ರಕೃತಿ ನಿರ್ಮಿತ ಯಾವುದೇ ವಸ್ತುವನ್ನು ಕಟ್ಟ, ಕಡೆಯವರೆಗೂ ಬಳಸುವುದು ಒಳ್ಳೆಯದು. ಇದರಿಂದ ಪ್ರಕೃತಿ ನಾಶ ತಪ್ಪುತ್ತೆ. ಪುಸ್ತಕ ಮುದ್ರಣಕ್ಕೆ ಬೇಕಾದ ಕಚ್ಚಾ ವಸ್ತುವನ್ನು ನಾವು ಪ್ರಕೃತಿಯಿಂದಲೇ ಪಡೆಯಬೇಕೆಂಬುದು ನಿಮಗೆ ತಿಳಿದಿರಲಿ ಎಂದರು.
    ಶಾಲಾ ಮುಖ್ಯಶಿಕ್ಷಕ ಉಮೇಶ್ ಗೌಡ, ನಗರಸಭಾ ಅಧ್ಯಕ್ಷ ಪಿ.ಜೆ. ರಾಮಮೋಹನ್, ನಗರಸಭಾ ಸದಸ್ಯೆ ಯಮುನಾ, ಎಸ್‌ಡಿಎಂಸಿ ಸದಸ್ಯರು, ಮುಖಂಡ ಬಿಸಲೇಹಳ್ಳಿ ಜಗದೀಶ್ ಉಪಸ್ಥಿತರಿದ್ದರು.

    ಪ್ರಕೃತಿಗೆ ಹಾನಿ ತಪ್ಪಿಸಬೇಕಾದರೆ ನಾವು ಕಲಿತು ಮುಂದಿನ ತರಗತಿಗೆ ಹೋಗುವಾಗ ನಮ್ಮ ಪಠ್ಯ, ಪುಸ್ತಕಗಳನ್ನು ಹೊಸ ವಿದ್ಯಾರ್ಥಿಗಳಿಗೆ ಕೊಡಬೇಕು. ಅವರು ಕಲಿತು ಇತರರಿಗೆ ಕೊಡಬೇಕು. ಇದು ಸಾಧ್ಯವಾದಾಗ ಮಾತ್ರ ನಾವು ಪ್ರಕೃತಿ ಸಂರಕ್ಷಣೆಗೆ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ. ಪ್ರಕೃತಿಯಿಂದ ನಿರ್ಮಿತವಾದ ಯಾವುದೇ ವಸ್ತುವನ್ನು ಕಟ್ಟ, ಕಡೆಯವರೆಗೂ ಬಳಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
    ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts