More

    ದೇಗುಲಗಳು ಸನಾತನ ಧರ್ಮದ ನಂಬಿಕೆಯ ಮೂಲ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

    ಸಾಗರ: ನಮ್ಮ ಸನಾತನ ಧರ್ಮದ ಶಕ್ತಿ ಹಣದ ಮೇಲಾಗಲಿ, ತೋಳ್ಬಲದ ಮೇಲಾಗಲಿ ನಿಂತಿಲ್ಲ. ಪರಂಪರೆಯ ಮೂಲ ಸತ್ವದಲ್ಲಿ ಹುದುಗಿದೆ. ಅದು ಯಾವಾಗಬೇಕಾದರೂ ಯಾರಿಗೆ ಬೇಕಾದರೂ ಪ್ರೇರಣೆ ಉಂಟು ಮಾಡಿ ಸಮಾಜದಲ್ಲಿ ಉತ್ತಮ ಕಾರ್ಯಕ್ಕೆ ನಾಂದಿಯಾಗಲಿದೆ. ಅದಕ್ಕೆ ಇಂದು ಲೋಕಾರ್ಪಣೆಗೊಂಡ ಶ್ರೀ ಶಂಭುಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯವೇ ಸಾಕ್ಷಿ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
    ಶುಕ್ರವಾರ ಸಮೀಪದ ಮಂಕಳಲೆಯಲ್ಲಿ ಪುನರ್ನವ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಶಂಭುಲಿಂಗೇಶ್ವರ, ಶ್ರೀ ಮಹಾಕಾಳಿ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ನಂತರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
    ಜಗತ್ತಿನಲ್ಲಿ ಹೆಸರು ಮಾಡಿದ ಅದೆಷ್ಟೋ ಸಾಮ್ರಾಜ್ಯಗಳು ಪತನಗೊಂಡು ಮತ್ತೆ ಎದ್ದು ಬಂದ ದಾಖಲೆಯೇ ಇಲ್ಲ. ಎಷ್ಟೇ ವೈಭವವಿದ್ದರೂ ಪತನ ಪತನವೆ. ಆದರೆ ನಮ್ಮ ಸನಾತನ ಧರ್ಮದ ನಂಬಿಕೆಯ ಮೂಲ ದೇವಾಲಯಗಳು. ಬೇರೆ ಕಾರಣಕ್ಕೆ ಅಂದು ಪತನಗೊಂಡಿದ್ದರೂ ಮತ್ತೆ ಎದ್ದು ನಿಂತಿರುವುದು ನಮ್ಮ ಸಂಸ್ಕೃತಿಯ ಮೂಲ ಬೇರು. ಆಧ್ಯಾತ್ಮದ ಶಕ್ತಿಯ ಮಹತ್ವವನ್ನು ತಿಳಿಸಲು ಎಷ್ಟೋ ವರ್ಷಗಳ ನಂತರವೂ ತಲೆ ಎತ್ತಿ ನಿಂತಿದೆ. ಇದೇ ನಿಜವಾದ ವಿಜ್ಞಾನ. ಸನಾತನ ಸಂಸ್ಕೃತಿ ಯಾರೊಬ್ಬರ ಮೇಲೂ ಸವಾರಿ ಮಾಡಿ ಬೆಳೆದಿದ್ದಲ್ಲ. ಮೂಲದ ಅಂತಃಸತ್ವವೆ ಅಷ್ಟು ಗಟ್ಟಿ ಹಾಗಾಗಿ ಅದು ಎದ್ದು ಬರಲಿದೆ ಎಂದರು.
    ನಮ್ಮ ಸಮಾಜದಲ್ಲಿಯ ಇತ್ತೀಚಿನ ದುರಂತ ಎಂದರೆ ಸಂತತಿಯನ್ನು ಸಂಪತ್ತು ಎಂದು ಭಾವಿಸದಿರುವುದು, ಮತ್ತು ಮಕ್ಕಳು ಭಾರವೆನ್ನುವ ಮನಸ್ಥಿತಿ ಬೆಳೆದಿರುವುದು. ಇದರಿಂದಾಗಿ ಯುವ ಪೀಳಿಗೆ ಕ್ಷೀಣವಾಗುತ್ತ ಸಾಗುತ್ತಿದೆ. ಸಮಾಜದಲ್ಲಿ ಹಳೆ ತಲೆಮಾರಿನ ಜತೆಯಲ್ಲಿ ಹೊಸ ತಲೆಮಾರು ಮಿಳಿತವಾಗಬೇಕು ಎಂದರು.
    ಮಹಾದಾನಿ ದೇವಕಮ್ಮ ಮಂಕಳಲೆ, ವೇ.ಮೂ. ನಾಗೇಂದ್ರ ಭಟ್, ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್, ವಿದ್ವಾನ್ ವಿಷ್ಣುಪ್ರಸಾದ್ ಪುಚ್ಚುಕಾಡು, ಸಮಿತಿ ಅಧ್ಯಕ್ಷ ಗಣಪತಿ ವರದಮೂಲ, ಚಿಪ್ಳಿ ಸುಬ್ರಹ್ಮಣ್ಯ, ಸಮರ್ಥ ಭಟ್, ಗಣಪತಿ ಮತ್ತಿಕೊಪ್ಪ, ಹು. ಬ. ಅಶೋಕ, ಮಂಜಪ್ಪ ಇತರರಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ದೇವರ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ್ಯಕ್ರಮಗಳು ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts