More

    ವ್ಯಕ್ತಿ ಗೌರವ ಎತ್ತಿ ಹಿಡಿದ ವಚನ ಸಾಹಿತ್ಯ

    ಬಸವಕಲ್ಯಾಣ: ಭಾರತೀಯ ಸಂವಿಧಾನ ವ್ಯಕ್ತಿಯ ವಿಚಾರ, ಸಮಾನತೆ ಮತ್ತು ಸಹೋದರತೆ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಈ ಮೂರು ಆಶಯಗಳು ಶರಣರ ವಚನ ಸಾಹಿತ್ಯದಲ್ಲಿ ಅಡಕವಾಗಿವೆ ಎಂದು ಬೆಂಗಳೂರಿನ ಪ್ರೊ.ಶ್ರೀಶೈಲ ಮಸೂತೆ ಹೇಳಿದರು.

    ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಶರಣ ಸಮಾಗಮ ಮತ್ತು ದಾನಮ್ಮ ಉತ್ಸವ ನಿಮಿತ್ತ ಭಾನುವಾರ ರಾತ್ರಿ ಏರ್ಪಡಿಸಿದ್ದ ಧರ್ಮ ಚಿಂತನ ಗೋಷ್ಠಿಯಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಮತ್ತು ವಚನ ಓದಿಸಿ ಅನುಭಾವ ನೀಡಿದ ಅವರು, ಸಂವಿಧಾನದಲ್ಲಿರುವ ೩೦ ಮಾನವ ಹಕ್ಕುಗಳು ವಿವಿಧ ಶರಣರು ಬರೆದ ವಚನ ಸಾಹಿತ್ಯದಲ್ಲಿ ಉಲ್ಲೇಖವಾಗಿವೆ ಎಂದರು.

    ವ್ಯಕ್ತಿ ಗೌರವ ಎತ್ತಿ ಹಿಡಿಯುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರಿಂದ ಚಹಾ ಮಾರುವವ ಸಹ ಪ್ರಧಾನಿ ಹುದ್ದೆಗೆ ಏರಬಹುದಾಗಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ನಟುವರ ಜಾತಿಯ ಅಲ್ಲಮಪ್ರಭುವನ್ನು ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ಮಾಡಿರುವುದು ಗಮನಾರ್ಹ ಎಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬಸವತತ್ವ ಪ್ರಚಾರ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಸತ್ಯಕ್ಕೆ ಸಂಕಷ್ಟಗಳಿರುವAತೆ ಬಸವತತ್ವ ಪ್ರಚಾರ ಮಾಡುವವರಿಗೆ ಬಹಳಷ್ಟು ಸಂಕಷ್ಟಗಳಿವೆ. ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಸ್ವತಂತ್ರ ವಿಚಾರ ವಿಮರ್ಶಕರಾಗಿದ್ದು, ನಾಡಿನಾದ್ಯಂತ ಸಂಚರಿಸಿ ಬಸವಧರ್ಮ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಶ್ರೀ ರತ್ನಾಕರ ಚೌಡಯ್ಯ ಸ್ವಾಮೀಜಿ ನೇತೃತ್ವ, ಶ್ರೀ ಸದಾನಂದ ಅಪ್ಪಗಳು, ಶ್ರೀ ಬಸವರಾಜ ಯೋಗಾಚಾರ್ಯ ಸಮ್ಮುಖ ವಹಿಸಿದ್ದರು. ರೇವಣಪ್ಪ ಹೆಗ್ಗಣೆ, ಶಿವಾಜಿರಾವ ಮಾನೆ, ವೀರಶೆಟ್ಟಿ ಬೇಲೂರು, ರಾಜಶೇಖರ ಮೀಸೆ, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ದಣ್ಣ, ರಾಮ ಮಜ್ಜಿಗೆ, ಶಿವಪ್ಪ ತಾಂಬಳೆ ಇತರರಿದ್ದರು.

    ಸ್ನೇಹಾ ಸಂತೋಷ ದೊಡ್ಡಣ್ಣನವರ ಸ್ವಾಗತಿಸಿದರು. ಸೋನಾಲಿ ನೀಲಕಂಠೆ ವಂದಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಗ್ರಾಮೀಣ ಕಲ್ಯಾಣ ಜಾನಪದ ಕಲಾ ಸಂಘದ ಅಧ್ಯಕ್ಷ ದಿಲೀಪ ದೇಸಾಯಿ ಅವರಿಂದ ವಚನ ಭಜನಾ ರಸಮಂಜರಿ ಜರುಗಿತು. ಗುಣತೀರ್ಥವಾಡಿ, ಸೊಲ್ಲಾಪುರ ಮತ್ತು ಬೆಳಗಾವಿ ಮಕ್ಕಳ ಸಾಂಸ್ಕೃತಿಕ ಕಾಯಕ್ರಮ, ನಾರಾಯಣಪುರ ದಾನಮ್ಮನ ಬಳಗದ ಭಜನೆ ಗಮನ ಸೆಳೆಯಿತು.

    ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಬೀದರ್‌ನ ಶಾಹೀನ್ ಕಾಲೇಜು ಅಧ್ಯಕ್ಷ ಡಾ.ಅಬ್ದುಲ್ ಖದೀರ್, ವಚನ ಟ್ರೇಡರ್ಸ್ ಸಂಸ್ಥಾಪಕ ಅಲ್ಲಮಪ್ರಭು ಪಾಟೀಲ್, ಶಿವಕುಮಾರ ಸಾಲಿ, ಭಾಲ್ಕಿಯ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸಪ್ಪ ಬಳತೆ, ರಾಯಚೂರಿನ ರಿಮ್ಸ್ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಪಾಟೀಲ್, ಪಂಡಿತ ಕೆ.ಬಾಳೂರೆ, ಸಾವಯವ ಕೃಷಿಕ ರಮೇಶ ಹುಮನಾಬಾದೆ, ಆನಂದ ಬೆಡಸೂರೆ, ವಿಜಯಲಕ್ಷ್ಮೀ ಕೆಂಗನಾಳ, ಗೋಕಾಕ್‌ನ ಸ್ನೇಹಾ ಎಸ್.ದೊಡ್ಡಣ್ಣನವರ ಅವರನ್ನು ಸತ್ಕರಿಸಲಾಯಿತು. ಪ್ರೊ.ಶ್ರೀಶೈಲ ಮಸೂತೆ ಬರೆದ ದಾನಮ್ಮ ಕಂದನ ವಚನಗಳು ಪುಸ್ತಕವನ್ನು ಚನ್ನಬಸಪ್ಪ ಬಳತೆ ಲೋಕಾರ್ಪಣೆಗೊಳಿಸಿದರು.

    ಲಿಂಗಾಯತ ಧರ್ಮದಲ್ಲಿದೆ ವಿಶ್ವ ಸಾಮರಸ್ಯದ ವಿಚಾರ: ಜಾಗತಿಕ ಧರ್ಮವಾಗಿರುವ ಲಿಂಗಾಯತ ತತ್ವಗಳಲ್ಲಿ ವಿಶ್ವ ಸಾಮರಸ್ಯದ ವಿಚಾರಗಳಿವೆ ಎಂದು ಶರಣ ಸಾಹಿತಿ ಮಹಾಂತೇಶ ಕುಂಬಾರ ಹೇಳಿದರು. ಭಾನುವಾರ ಬೆಳಗ್ಗೆ ಮೊದಲ ಗೋಷ್ಠಿಯಲ್ಲಿ ಅನುಭಾವ ನೀಡಿದ ಅವರು, ಲಿಂಗಾಯತ ಧರ್ಮದ ವಚನ ಸಾಹಿತ್ಯದಲ್ಲಿ ಬರುವ ಅಷ್ಟಾವರಣ ಮತ್ತು ಪಂಚಾಚಾರದ ಅರಿವು-ಆಚಾರ ಮಾರ್ಗಗಳು ಮಾನವನ ಜೀವನದ ದೇಹ ಮತ್ತು ಪ್ರಾಣದಂತೆ ಕೆಲಸ ಮಾಡುತ್ತವೆ ಎಂದರು. ಲಿಂಗಪೂಜೆ ಮತ್ತು ಲಿಂಗಯೋಗದ ಪ್ರಾತ್ಯಕ್ಷಿಕೆಯನ್ನು ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ತೋರಿಸಿದರು. ಹರಳಯ್ಯ ಗವಿಯ ಪೂಜ್ಯ ಡಾ.ಅಕ್ಕ ಗಂಗಾಂಬಿಕೆ ಆಶೀರ್ವಚನ ನೀಡಿದರು. ಲಿಂಗಾಂಗ ಯೋಗದ ಕುರಿತು ಜಯಪ್ರಕಾಶ ಸದಾನಂದೆ ಅನುಭಾವ ನೀಡಿದರು. ಶರಣ ಜ್ಞಾನಿ ಗುಂಡಪ್ಪ ಸಂಗಮಕರ್, ಶರಣ ಸೇವಾದಳ ತರಬೇತಿ ನೀಡಿದರು. ಹರಳಯ್ಯ ಸಮಾಜದ ರಾಜ್ಯ ಉಪಾಧ್ಯಕ್ಷ ಪರಶುರಾಮ ಅರಕೇರಿ, ರಾಮದುರ್ಗದ ಭರಮರೆಡ್ಡಿ, ಲೀಲಾವತಿ ಕರಡಿ, ಮಲ್ಲಿಕಾರ್ಜುನ ಮುಗನೂರ, ಬೆಂಗಳೂರಿನ ಶಿವಶಂಕರ, ಧರ್ಮಣ್ಣ ಪೂಜಾರಿ ಇದ್ದರು.

    ಶ್ರೀ ಬಸವಪ್ರಭು ಸ್ವಾಮೀಜಿ ಭಕ್ತರನ್ನೇ ಆಸ್ತಿಯಾಗಿಸಿಕೊಂಡು ಪರಿಶ್ರಮದಿಂದ ದುಡಿದು ಕಲ್ಯಾಣ ಮಹಾಮನೆ ಕಟ್ಟಿ ಕಾರ್ಯಕ್ರಮ ಮಾಡುತ್ತಿರುವುದು ಇತರ ಜಂಗಮ ಸಾಧಕರಿಗೆ ಮಾದರಿಯಾಗಿದೆ. ೨೦೧೯ರಲ್ಲಿ ಮಾತೆ ಮಹಾದೇವಿ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆದಿದ್ದ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಾಗಿ ಪೊಲೀಸರಿಂದ ಲಾಠಿ ಏಟಿಗೆ ಗುರಿಯಾದರೂ ಹೆದರದೆ ಸಂಘರ್ಷ ಮಾಡಿದ್ದು ಅವರ ಬಸವತತ್ವ ನಿಷ್ಠೆ ತೋರಿಸುತ್ತದೆ.
    | ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts