More

    ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡಿ ಜೈಲು ಸೇರಿದ ಯುವಕ

    ಬೆಂಗಳೂರು: ಹೊಟೇಲ್ ಮಾಲೀಕ ತಮಾಷೆಯಾಗಿ ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿಯೊಬ್ಬ ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡಿ ಇದೀಗ ಮಡಿವಾಳ ಪೊಲೀಸರ ಅತಿಥಿಯಾಗಿದ್ದಾನೆ.
    ಅಖೀಬ್ ಖಾನ್ (೨೩) ಬಂಧಿತ. ಕೇರಳ ಮೂಲದ ಆರೋಪಿಯು ಕೆಲ ತಿಂಗಳಿಂದ ಮಡಿವಾಳದ ಹೊಟೇಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೊಟೇಲ್ ಮಾಲೀಕ ಆಸಿಫ್, ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ದುಡಿಸಿಕೊಂಡು ಸಂಬಳ ಸರಿಯಾಗಿ ನೀಡುತ್ತಿರಲಿಲ್ಲ ಎನ್ನಲಾಗಿದೆ.
    ನನ್ನಗೆ ಕೊಡಬೇಕಾದ ಸಂಬಳ ಕೊಟ್ಟರೆ ನಾನು ಕೆಲಸ ಬಿಟ್ಟು ಹೋಗುತ್ತೇನೆ. ಜತೆಗೆ ಊರಿಗೆ ಹೋಗಲು ಸಹ ನನ್ನ ಬಳಿ ಹಣವಿಲ್ಲ ಎಂದು ಮಾಲೀಕನಿಗೆ ತಿಳಿಸಿದ್ದು, ಈ ವೇಳೆ ಆ ಮಾಲೀಕ ಹೊಟೇಲ್ ಬಳಿ ಎಷ್ಟೊಂದು ಬೈಕ್‌ಗಳಿವೆ ಕಳ್ಳತನ ಮಾಡು ಎಂದು ತಮಾಷೆಯಾಗಿ ಹೇಳಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆರೋಪಿಯು ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ ಬೈಕ್‌ಲಾಕ್ ಓಪನ್ ಮಾಡುವುದು ಹೇಗೆ ಎಂದು ತಿಳಿದು ಮಡಿವಾಳದ ಅಯ್ಯಪ್ಪ ದೇವಸ್ಥಾನ ಬಳಿ ನಿಲ್ಲಿಸಿದ್ದ ಆರ್‌ಎಕ್ಸ್ ೧೦೦ ಬೈಕ್ ಕಳ್ಳತನ ಮಾಡಿದ್ದಾನೆ. ಕದ್ದ ಬೈಕ್‌ನಲ್ಲಿಯೇ ಕೇರಳಕ್ಕೆ ತೆರದ್ದಾನೆ. ಈ ಸಂಬಂಧ ಬೈಕ್ ಮಾಲೀಕ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದರು. ಮತ್ತೊಂದೆಡೆ ಬೈಕ್ ಕದ್ದಿರುವ ಬಗ್ಗೆ ಆತನ ಪಾಲಕರಿಗೆ ತಿಳಿದಿದ್ದು ಅವರು ಚೆನ್ನಾಗಿ ಬೈದಿದ್ದಾರೆ. ಇದರಿಂದ ಬೇಸರವಾಗಿ ಬೇರೆ ವಿಧಿಯಿಲ್ಲದೆ ಮತ್ತೆ ಆತ ಬೆಂಗಳೂರಿಗೆ ವಾಪಸ್ ಬಂದಾಗ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಹೊಟೇಲ್ ಮಾಲೀಕ ಸಂಬಳ ನೀಡಿರಲಿಲ್ಲ. ಹೀಗಾಗಿ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈಕ್ ಕಳ್ಳತನ ಮಾಡು ಎಂದು ಸೂಚಿಸಿದ್ದ ಹೊಟೇಲ್ ಮಾಲೀಕನಿಗೆ ನೋಟಿಸ್ ಜಾರಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts