More

    ತೆರಿಗೆ ಪಾವತಿಸದಿದ್ದರೆ ಚರಾಸ್ತಿ ಸೀಜ್!

    ಡಿಮಾಂಡ್ ನೋಟಿಸ್‌ಗೂ ಬಗ್ಗದಿದ್ದರೆ ಶಿಸ್ತು ಕ್ರಮ

    ಜಿಲ್ಲೆಯಲ್ಲಿ ಚುರುಕುಗೊಂಡ ಆಂದೋಲನ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ವರ್ಷಗಟ್ಟಲೆ ತೆರಿಗೆ ಬಾಕಿ ಉಳಿಸಿಕೊಂಡು ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿರುವ ತೆರಿಗೆದಾರರಿಗೆ ಬಿಸಿ ಮುಟ್ಟಿಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ ಚರಾಸ್ತಿಗಳನ್ನು ಸೀಜ್ ಮಾಡುವ ಕಠಿಣ ಕ್ರಮಕ್ಕೆ ಮುಂದಾಗಿದೆ.
    ರಾಜ್ಯದಲ್ಲೇ ತೆರಿಗೆ ವಸೂಲಿಯಲ್ಲಿ ರಾಮನಗರ ಪ್ರಥಮ ಸ್ಥಾನದಲ್ಲಿದ್ದರೆ ಬೆಂಗಳೂರು ಗ್ರಾಮಾಂತರ 5 ನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಶೇ.60 ತೆರಿಗೆ ಸಂಗ್ರಹದಲ್ಲಿ ಯಶ ಕಂಡಿದ್ದರೂ ಉಳಿದ ತೆರಿಗೆ ವಸೂಲಿಯಲ್ಲಿ ಏದುಸಿರು ಬಿಡುತ್ತಿದೆ. ತೆರಿಗೆ ಪಾವತಿಗೆ ಕಚೇರಿಯಲ್ಲಿ ಅವಕಾಶವಿದೆ, ಆನ್‌ಲೈನ್‌ನಲ್ಲೂ ಪಾವತಿಸಬಹುದು. ಇದರ ಜತೆಗೆ ಮನೆ ಮನೆಗೆ ತೆರಳಿ ಗ್ರಾಪಂ ಸಿಬ್ಬಂದಿ ತೆರಿಗೆ ವಸೂಲಿಗೆ ಕಸರತ್ತು ನಡೆಸುತ್ತಿದ್ದರೂ ಬಹಳಷ್ಟು ತೆರಿಗೆದಾರರು ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಲೇ ಬಂದಿದ್ದಾರೆ. ಸಾಕಷ್ಟು ಬಾರಿ ಆಂದೋಲನದ ರೀತಿ ತೆರಿಗೆ ವಸೂಲಿಗೆ ಕ್ರಮಕೈಗೊಂಡರೂ ತೆರಿಗೆದಾರರು ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಕಾಯ್ದೆಯಡಿ ತೆರಿಗೆ ಬಾಕಿ ಉಳಿಸಿಕೊಂಡ ತೆರಿಗೆದಾರರ ಚರಾಸ್ತಿ ಸೀಜ್ ಮಾಡಲು ಅವಕಾಶವಿದ್ದು ಈ ಅಸ ಪ್ರಯೋಗಿಸಲು ಜಿಪಂ ಮುಂದಾಗಿದೆ.

    ಡಿಮಾಂಡ್ ನೋಟಿಸ್
    ವರ್ಷಗಟ್ಟಲೆ ಬಾಕಿ ಉಳಿಸಿಕೊಂಡಿರುವ ತೆರೆಗೆದಾರರಿಗೆ ಮೊದಲಿಗೆ ಡಿಮಾಂಡ್ ನೋಟಿಸ್ ನೀಡಲು ಆರಂಭಿಸಿದ್ದು, ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೂ ಸ್ಪಂದಿಸದಿದ್ದರೆ ಎರಡನೇ ಹಂತದಲ್ಲಿ ಸೀಜ್ ಕ್ರಮಕ್ಕೆ ಮುಂದಾಗಲು ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಂದೋಲನಕ್ಕೆ ಚಾಲನೆ
    ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ತೆರಿಗೆ ಅತ್ಯಗತ್ಯವಾಗಿದೆ. ಆದರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಡಿಸೆಂಬರ್ ಪೂರ್ತಿ ತೆರಿಗೆ ವಸೂಲಿ ಆಂದೋಲನಕ್ಕೆ ಚಾಲನೆ ನೀಡಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಶೇ.100 ತೆರಿಗೆ ವಸೂಲಿಗೆ ಕ್ರಮಕೈಗೊಳ್ಳುವಂತೆ ಆಯಾ ಗ್ರಾಪಂ ಅಧಿಕಾರಿಗಳಿಗೆ ಜಿಪಂ ಖಡಕ್ ಎಚ್ಚರಿಕೆ ನೀಡಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.60 ತೆರಿಗೆ ವಸೂಲಾತಿಯಾಗಿದೆ ಎನ್ನಲಾಗಿದ್ದು, ಮಾಸಾಂತ್ಯದಲ್ಲಿ ಶತಾಯಗತಾಯ ಶೇ.100 ಗುರಿ ಮುಟ್ಟುವ ಪ್ರಯತ್ನ ನಡೆಯುತ್ತಿದೆ.

    ಸಿಬ್ಬಂದಿ ವಿರುದ್ಧವೂ ಕ್ರಮ
    ತೆರಿಗೆ ವಸೂಲಿಯಲ್ಲಿ ನಿರ್ಲಕ್ಷ್ಯ ಮಾಡುವ ಸಿಬ್ಬಂದಿ ಮೇಲೂ ಶಿಸ್ತುಕ್ರಮಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸೂಚನೆ ನೀಡಿದೆ. ತೆರಿಗೆ ವಸೂಲಿ ಮಾಡದೇ ಇರುವ ಹಾಗೂ ಅತಿ ಕಡಿಮೆ ಪ್ರಗತಿ ಸಾಧಿಸುವ ಕರ ಸೂಲಿಗಾರರ ಪಟ್ಟಿ ಸಲ್ಲಿಸುವಂತೆ ತಾಲೂಕು ಪಂಚಾಯಿತಿ ಇವುಗಳಿಗೆ ಸೂಚನೆ ರವಾನಿಸಲಾಗಿದೆ. ಈ ಬಗ್ಗೆ ಸೂಬೂಬು ಹೇಳುವಂತಿಲ್ಲ. ನೀಡಿರುವ ಗುರಿ ಮುಟ್ಟಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕರ ವಸೂಲಿಗಾರರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.

    ಜಿಲ್ಲೆಯ 4 ತಾಲೂಕುಗಳ ಗ್ರಾಮ ಪಂಚಾಯಿತಿಗಳು
    ದೇವನಹಳ್ಳಿ 24 ಗ್ರಾಮ ಪಂಚಾಯಿತಿ
    ಹೊಸಕೋಟೆ 28 ಗ್ರಾಮ ಪಂಚಾಯಿತಿಗಳು
    ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯಿತಿಗಳು
    ನೆಲಮಂಗಲ 21 ಗ್ರಾಮ ಪಂಚಾಯಿತಿಗಳು

    ಶೇ.100 ತೆರಿಗೆ ವಸೂಲಿಗೆ ಆಂದೋಲನ ಆರಂಭಿಸಲಾಗಿದೆ, ವರ್ಷಗಟ್ಟಲೆ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರಿಗೆ ಮೊದಲಿಗೆ ಅರಿವು ಮೂಡಿಸಿ ತೆರಿಗೆ ವಸೂಲಿಗೆ ಪ್ರಯತ್ನಿಸಲಾಗುವುದು. ಎರಡನೇ ಹಂತದಲ್ಲಿ ಡಿಮಾಂಡ್ ನೋಟಿಸ್ ನೀಡಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಚರಾಸ್ತಿ ಸೀಜ್ ಮಾಡಲು ಕಾನೂನಿನಡಿ ಅವಕಾಶವಿದ್ದು ಆ ಅಸ ಪ್ರಯೋಗಿಸುವ ಚಿಂತನೆ ಇದೆ.

    ರಮೇಶ್, ಜಿಪಂ ಉಪ ಕಾರ್ಯದರ್ಶಿ, ಬೆಂ.ಗ್ರಾಮಾಂತರ

    ಗ್ರಾಮಗಳ ಅಭಿವೃದ್ಧಿಗೆ ಮೊದಲು ಪಂಚಾಯಿತಿ ಆರ್ಥಿಕವಾಗಿ ಬಲ ಹೊಂದಿರಬೇಕು. ಇಲ್ಲವಾದರೆ ಮೂಲಸೌಕರ್ಯ ಕಲ್ಪಿಸಲೂ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿಯೂ ಕಟ್ಟುನಿಟ್ಟಾಗಿ ತೆರಿಗೆ ವಸೂಲಿಗೆ ಕ್ರಮಕೈಗೊಳ್ಳುವಂತೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ತೆರಿಗೆ ಪಾವತಿಸುವ ಮೂಲಕ ಸಹಕರಿಸಬೇಕಿದೆ.
    ಶ್ರೀನಾಥ್‌ಗೌಡ, ಇಒ ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts