More

    ಕನ್ನಡತಿ ಅದಿತಿಗೆ ಒಲಿಂಪಿಕ್ಸ್ ಪದಕ ಕೈತಪ್ಪಿದರೂ ಒಲಿದು ಬಂತು ಭರ್ಜರಿ ಬಹುಮಾನ!

    ಬೆಂಗಳೂರು: ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿದ್ದ ಕನ್ನಡತಿ ಅದಿತಿ ಅಶೋಕ್, ಗಾಲ್ಫ್ ಸ್ಪರ್ಧೆಯ ಮೊದಲ ಮೂರು ದಿನ 2ನೇ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕ ಗೆಲ್ಲುವತ್ತ ಮುನ್ನಡೆದಿದ್ದರು. ಆದರೆ ಸ್ಪರ್ಧೆಯ ಕೊನೇಕ್ಷಣದಲ್ಲಿ ಹಿನ್ನಡೆ ಕಂಡಿದ್ದ ಅದಿತಿ 4ನೇ ಸ್ಥಾನಕ್ಕೆ ಕುಸಿದು ಪದಕವಂಚಿತೆಯಾಗಿದ್ದರು. ಇದರ ನಡುವೆಯೂ ಅವರು ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಮತ್ತು ಶ್ರೀಮಂತರ ಆಟವೆಂದೇ ಕಡೆಗಣನೆಗೆ ಒಳಗಾಗಿದ್ದ ಗಾಲ್ಫ್ ಕ್ರೀಡೆಯ ಬಗ್ಗೆ ಎಲ್ಲ ಭಾರತೀಯ ಕ್ರೀಡಾಪ್ರೇಮಿಗಳು ಆಸಕ್ತಿ ತೋರುವಂತೆ ಮಾಡಿದ್ದರು. ಈ ಅಪೂರ್ವ ಸಾಧನೆಗಾಗಿ ಈಗ ಅದಿತಿಗೆ ಭರ್ಜರಿಗೆ ಬಹುಮಾನಗಳು ಒಲಿದುಬಂದಿವೆ.

    ಬೆಂಗಳೂರಿನಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಅದಿತಿ ಅಶೋಕ್ ಸಹಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾದ ಭಾರತದ ಕ್ರೀಡಾಪಟುಗಳಿಗೆ ಆಲ್ಟ್ರೋಜ್ ಕಾರು ಉಡುಗೊರೆ ನೀಡುವುದಾಗಿ ದೇಶದ ಅಗ್ರ ಆಟೋಮೋಟಿವ್ ಬ್ರಾಂಡ್ ‘ಟಾಟಾ ಮೋಟಾರ್ಸ್‌’ ಘೋಷಿಸಿದೆ. ಅದಿತಿ ಜತೆಗೆ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಶೀಘ್ರದಲ್ಲೇ ಈ ಕಾರು ವಿತರಿಸುವುದಾಗಿ ಟಾಟಾ ಮೋಟಾರ್ಸ್‌ ತಿಳಿಸಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಬಳಿಕ ಪ್ಯಾರಾಲಿಂಪಿಕ್ಸ್‌ನಲ್ಲೂ ಭರ್ಜರಿ ಪದಕ ಬೇಟೆಗೆ ಸಜ್ಜಾಗಿದೆ ಭಾರತ

    ಆಲ್ಟ್ರೋಜ್ ಕಾರು 5.84 ಲಕ್ಷ ರೂ. ಆರಂಭಿಕ ಬೆಲೆ ಹೊಂದಿದೆ. ‘ಭಾರತದ ಪಾಲಿಗೆ ಒಲಿಂಪಿಕ್ಸ್ ಪದಕಕ್ಕಿಂತಲೂ ಮಿಗಿಲಾದುದು. ಉನ್ನತ ಮಟ್ಟದ ಸ್ಪರ್ಧೆ, ಪ್ರತಿಭೆ, ಒತ್ತಡದ ನಡುವೆಯೂ ಪೋಡಿಯಂಗೆ ಅತ್ಯಂತ ಸನಿಹವಾಗಿದ್ದ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ಅವರಿಗೆ ಪದಕ ತಪ್ಪಿರಬಹುದು. ಆದರೆ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರ ದೃಢಸಂಕಲ್ಪ ಭಾರತದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾದುದು’ ಎಂದು ಟಾಟಾ ಮೋಟಾರ್ಸ್‌ ತಿಳಿಸಿದೆ.

    ಮ್ಯಾನ್‌ಕೈಂಡ್‌ನಿಂದ ತಲಾ 11 ಲಕ್ಷ ರೂ. ಬಹುಮಾನ!
    ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಲ್ಲಿ ಪದಕ ವಂಚಿತರಾದ 20 ಕ್ರೀಡಾಪಟುಗಳಿಗೂ ತಲಾ 11 ಲಕ್ಷ ರೂ. ಬಹುಮಾನ ವಿತರಿಸಲು ಮ್ಯಾನ್‌ಕೈಂಡ್ ಫಾರ್ಮಾ ಕಂಪನಿ ಮುಂದಾಗಿದೆ. ಅದಿತಿ ಅಶೋಕ್ ಸಹಿತ ಪದಕದ ಸನಿಹದಲ್ಲಿ ಎಡವಿದ ಕ್ರೀಡಾಪಟುಗಳ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕಾಗಿ ಮ್ಯಾನ್‌ಕೈಂಡ್ ಫಾರ್ಮಾ ಔಷಧ ಕಂಪನಿ ಪ್ರೋತ್ಸಾಹ ತುಂಬಲು ನಿರ್ಧರಿಸಿದೆ. ಅದಿತಿ ಜತೆಗೆ ಕಂಚಿನ ಪದಕದ ಹೋರಾಟದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡದ ಎಲ್ಲ 16 ಆಟಗಾರ್ತಿಯರು, ಕುಸ್ತಿಪಟು ದೀಪಕ್ ಪೂನಿಯಾ, ಬಾಕ್ಸರ್ ಸತೀಶ್ ಕುಮಾರ್ ಮತ್ತು ಫೈನಲ್‌ಗೇರಿದ್ದ ಏಕೈಕ ಭಾರತೀಯ ಶೂಟರ್ ಸೌರಭ್ ಚೌಧರಿ ತಲಾ 11 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.

    ‘ಪ್ರತಿ ಕ್ರೀಡೆಯಲ್ಲೂ ಗೆಲುವೊಂದೇ ಮುಖ್ಯವಾಗುವುದಿಲ್ಲ. ಕ್ರೀಡಾಪಟುಗಳ ಪ್ರಯತ್ನ ಪ್ರಮುಖವೆನಿಸುತ್ತದೆ. ದೇಶವನ್ನು ಪ್ರತಿನಿಧಿಸುವ ವೇಳೆ ನಮ್ಮ ಈ ಕ್ರೀಡಾಪಟುಗಳಲ್ಲಿ ಅಂಥ ಅತ್ಯುತ್ತಮ ಪ್ರಯತ್ನವನ್ನು ಕಂಡಿದ್ದೇವೆ. ಈ ಕ್ರೀಡಾಪಟುಗಳು ಪದಕ ವಂಚಿತರಾಗಿರಬಹುದು. ಆದರೆ ಎಲ್ಲರ ಹೃದಯ ಗೆದ್ದಿದ್ದಾರೆ. ಅವರ ಪರಿಶ್ರಮ ಮತ್ತು ತ್ಯಾಗವನ್ನೂ ನಾವು ಉತ್ತೇಜಿಸುತ್ತೇವೆ. ಇಂಥ ಕ್ರೀಡಾಪಟುಗಳು ಯುವ ಜನತೆ ಕ್ರೀಡೆಗೆ ಬರಲು ಪ್ರೇರಣೆಯಾಗಿದ್ದಾರೆ’ ಎಂದು ಮ್ಯಾನ್‌ಕೈಂಡ್ ಫಾರ್ಮಾ ಕಂಪನಿಯ ಉಪಾಧ್ಯಕ್ಷ ಹಾಗೂ ಎಂಡಿ ರಾಜೀವ್ ಜುನೇಜಾ ತಿಳಿಸಿದ್ದಾರೆ.

    2024ರ ಒಲಿಂಪಿಕ್ಸ್‌ವರೆಗೂ ಲವ್ಲಿನಾಗೆ ಪ್ರತಿ ತಿಂಗಳು 1 ಲಕ್ಷ ರೂ. ಸ್ಕಾಲರ್‌ಶಿಪ್!

    ಪಾಂಡ್ಯ ಸಹೋದರರು ಮುಂಬೈನಲ್ಲಿ ಖರೀದಿಸಿದ ಮನೆಯ ಮೊತ್ತವೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts