More

    ತಲಕಾಡು ಮುಖ್ಯ ರಸ್ತೆ ಅಭಿವೃದ್ಧಿಗೆ ಗ್ರಹಣ

    ತಲಕಾಡು: ನಿತ್ಯ ಸಾವಿರಾರು ಪ್ರವಾಸಿ ಹಾಗೂ ಸ್ಥಳೀಯ ವಾಹನಗಳು ಸಂಚಾರ ನಡೆಸುವ ಇತಿಹಾಸ ಪ್ರಸಿದ್ಧ ತಲಕಾಡು ಗ್ರಾಮದ ಹಳೇತಲಕಾಡಿನ ಮುಖ್ಯರಸ್ತೆ ಅಭಿವೃದ್ಧಿ ಕಾರ್ಯ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

    ಇಲ್ಲಿನ ಮುಖ್ಯರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ 2.87 ಕೋಟಿ ರೂ., ಮತ್ತೊಂದು 57 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಜ.6ರಂದು ಲೋಕೋಪಯೋಗಿ ಇಲಾಖೆ ಇ-ಟೆಂಡರ್ ಕರೆದಿತ್ತು. ಟೆಂಡರ್‌ನಲ್ಲಿ ಒಬ್ಬರೂ ಭಾಗವಹಿಸದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಮತ್ತೆ ಮುಂದಕ್ಕೆ ಹೋಗಿದೆ.

    ಹತ್ತು ವರ್ಷದಿಂದ ಏನಾದರೊಂದು ಕಾರಣಕ್ಕೆ ಹಳೇತಲಕಾಡಿನ ಮುಖ್ಯ ರಸ್ತೆ ಅಭಿವೃದ್ಧಿ ಕೆಲಸ ಮುಂದಕ್ಕೆ ಹೋಗುತ್ತಿದೆ. ಇದರಿಂದ ರಸ್ತೆ ಪಕ್ಕದ ನಿವಾಸಿಗಳ ಜೀವ ಹಿಂಡುತ್ತಿದೆ. ಬೇಸಿಗೆಯಾದ್ದರಿಂದ ಸಾರ್ವಜನಿಕರಿಗೆ ನಿತ್ಯ ಧೂಳಿನ ಅಭಿಷೇಕವಾಗುತ್ತಿದೆ. ತಲಕಾಡು ಅಲಮೇಲಮ್ಮ ಶಾಪಕ್ಕೆ ಗುರಿಯಾಗಿ ಸಂಪೂರ್ಣ ಮರಳಾದಂತೆ ಇಲ್ಲಿನ ಮುಖ್ಯರಸ್ತೆ ಅಭಿವೃದ್ಧಿಗೂ ಶಾಪ ತಗುಲಿದೆ ಎಂದು ನಿವಾಸಿಗಳು ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

    ಅಭಿವೃದ್ಧಿಗೆ ಗ್ರಹಣ: ಸರ್ಕಾರ ಹಣ ಬಿಡುಗಡೆ ಮಾಡಿದ್ದರು ಕಾಮಗಾರಿ ಕೈಗೆತ್ತಿಕೊಳ್ಳಲು ಹತ್ತು ವರ್ಷದಿಂದ ತೊಡಕು ಎದುರಾಗಿ ನಿಲ್ಲುವುದು ಕಾಕತಾಳೀಯವಾಗಿದೆ. ರಸ್ತೆ ಕಾಮಗಾರಿ ಟೆಂಡರ್ ಹಾಕಲು ಟೆಂಡರ್‌ದಾರರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಒತ್ತುವರಿ, ಪರಿಹಾರ, ಸಾರ್ವಜನಿಕರ ತಕರಾರು ಸೇರಿ ಇನ್ನಿತರ ನೆಪವೊಡ್ಡಿ ಟೆಂಡರ್‌ದಾರರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದೆ ಬರುತ್ತಿಲ್ಲ. ಅಧಿಕಾರಿಗಳೇ ಟೆಂಡರ್‌ದಾರರನ್ನು ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಂತೆ ಕಾಣುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ತೋರುವ ಮೂಲಕ ಇಲ್ಲಿಗೆ ರಸ್ತೆ ಅಭಿವೃದ್ಧಿ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

    ಅರೆಬರೆ ಕಾಮಗಾರಿ: ಅತೃಪ್ತ ಶಾಸಕರ ಚುನಾವಣೆಗೆ ಮುನ್ನ ತಲಕಾಡಿನ ವಿವಿಧ ಬಡಾವಣೆಯಲ್ಲಿ 1.13. ಕೋಟಿ ರೂ. ವೆಚ್ಚದ ನೂತನ ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಎಂ.ಅಶ್ವಿನ್‌ಕುಮಾರ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಇವುಗಳಲ್ಲಿ ಒಂದೆರಡು ಕಾಮಗಾರಿ ಕೈಗೆತ್ತಿಕೊಂಡಿದ್ದ ಗುತ್ತಿಗೆದಾರರು ಸಹ ಕಾಮಗಾರಿ ಪೂರ್ಣಗೊಳಿಸದೆ ಸ್ಥಗಿತಗೊಳಿಸಿದ್ದಾರೆ. ಹೊಸಸೈಟ್ ಆಶ್ರಯ ಬಡಾವಣೆ ಸೇರಿದಂತೆ ಇತರ ಬೀದಿಗಳಲ್ಲಿ ಗುತ್ತಿಗೆದಾರರು ಕಾಮಗಾರಿಗೆ ಇನ್ನೂ ಚಾಲನೆಯೇ ನೀಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts