More

    ಬೆಳಕು ನೀಡದ ಎಲ್​ಇಡಿ ದೀಪಗಳು

    ಬಂಕಾಪುರ: ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ಎಲ್​ಇಡಿ ವಿದ್ಯುತ್ ದೀಪಗಳು ಮೂರೇ ತಿಂಗಳಲ್ಲಿ ಕೆಟ್ಟು ಹೋಗಿವೆ. ಸಮರ್ಪಕ ಬೆಳಕು ನೀಡುತ್ತಿಲ್ಲ. ಗುತ್ತಿಗೆದಾರ ಕಳಪೆ ದೀಪಗಳನ್ನು ಅಳವಡಿಸಿದ್ದಾರಾ? ಎನ್ನುವ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

    ಬಂಕಾಪುರ ಪಟ್ಟಣದ ಪ್ರಮುಖ ರಸ್ತೆ ಮತ್ತು ಬೀದಿಗಳಲ್ಲಿ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಎಸ್​ಎಫ್​ಸಿ ವಿಶೇಷ ಅನುದಾನದಡಿ (2023-24) ಜಿಎಸ್​ಟಿ ಸೇರಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಕಾಮಗಾರಿಯನ್ನು ಬೆಂಗಳೂರು ಮೂಲದ ಸ್ಪೆಕ್ಟ್ರಮ್ ಟೂಲ್ ಇಂಜಿನಿಯರ್ಸ್ ಪ್ರೈವೇಟ್ ಲಿ. ಗೆ ಗುತ್ತಿಗೆ ನೀಡಲಾಗಿತ್ತು.

    ಗುತ್ತಿಗೆದಾರ ವಿದ್ಯುತ್ ಉಳಿತಾಯ ಮತ್ತು ಪುರಸಭೆಗೆ ವಿದ್ಯುತ್ ಬಿಲ್​ನ ಆರ್ಥಿಕ ಹೊಣೆಗಾರಿಕೆ ತಪ್ಪಿಸುವ ಉದ್ದೇಶದ ನೆಪ ಹೇಳಿ ಈ ಕಾಮಗಾರಿಗೆ ಪ್ರಮುಖ ರಸ್ತೆಗಳಲ್ಲಿ 90 ವ್ಯಾಟ್ ಮತ್ತು ಬೀದಿಗಳಲ್ಲಿ 40 ವ್ಯಾಟ್​ನ ವಿದ್ಯುತ್ ದೀಪಗಳನ್ನು ಅಳವಡಿಸಿದ್ದಾರೆ. ಆದರೆ, ರಾತ್ರಿ ಸಮಯದಲ್ಲಿ ಜನರು ನಿರೀಕ್ಷಿಸಿದಷ್ಟು ಬೆಳಕನ್ನು ಈ ದೀಪಗಳು ನೀಡುತ್ತಿಲ್ಲ. ಬೀದಿಗಳಲ್ಲಿ ಚಿಮಣೆ(ಕಂದೀಲು) ಹಚ್ಚಿದಂತಾಗಿದೆ! ಕೇವಲ ಮೂರು ತಿಂಗಳಲ್ಲಿ ಕೆಲವು ಕಡೆ ವಿದ್ಯುತ್ ದೀಪಗಳು ರಾತ್ರಿಯಿಡಿ ಪಕ ಪಕ ಅನ್ನುತ್ತಿವೆ. ಇನ್ನು ಕೆಲವು ಕೆಟ್ಟು ಹೋಗಿವೆ.

    ಪಟ್ಟಣದ ಮುಂಡಗೋಡ ಕ್ರಾಸ್​ನಿಂದ ನೀಲಕಂಠೇಶ್ವರ ದೇವಸ್ಥಾನದವರೆಗೆ ದ್ವಿಪಥ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿರುವ ವಿದ್ಯುತ್ ದ್ವೀಪಗಳು, ರೇಣುಕಾ ಟಾಕೀಸ್ ಕ್ರಾಸ್​ನಿಂದ ಹಾವೇರಿ ಮುಖ್ಯ ರಸ್ತೆ, ಬಸ್ ನಿಲ್ದಾಣದಿಂದ ಪುರಸಭೆ, ಆಸಾರ್ ಸರ್ಕಲ್​ನಿಂದ ಕೊಟ್ಟಿಗೇರಿ, ಅಂಕದಖಣ, ರಜಪೂತ್ ಗಲ್ಲಿ, ಬ್ರಾಹ್ಮಣ ಗಲ್ಲಿ, ಸುಂಕದಕೇರಿ, ಮಂಡಲ್ ಮೊಹಲ್ಲಾ ಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಪಟ್ಟಣದ ಪುರಸಭೆ ವ್ಯಾಪ್ತಿಯ ಬಹುತೇಕ ಬೀದಿಗಳಲ್ಲಿ ಅಳವಡಿಸಿರುವ ದೀಪಗಳು ಸಮರ್ಪಕವಾಗಿ ಬೆಳಗದೆ, ರಾತ್ರಿ ಹೊತ್ತು ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

    ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಸಮರ್ಪಕ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದರ ಜತೆಗೆ ಪಟ್ಟಣದಲ್ಲಿ ಗುಣಮಟ್ಟದ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

    ಬಂಕಾಪುರ ಪಟ್ಟಣದಲ್ಲಿ ಅಳವಡಿಸಿರುವ ಎಲ್​ಇಡಿ ದೀಪಗಳು ಕೆಟ್ಟ ಹೋದ ಬಗ್ಗೆ ದೂರುಗಳು ಬಂದಿವೆ. ಈ ವಿಷಯವನ್ನು ಗುತ್ತಿಗೆ ಕಂಪನಿಯವರ ಗಮನಕ್ಕೆ ತರಲಾಗಿದೆ. ಎರಡು ವರ್ಷ ನಿರ್ವಹಣೆ ಜವಾಬ್ದಾರಿ ಅವರದೇ ಇದೆ. ಕಾಮಗಾರಿ ಕಳಪೆ ಎಂದು ಹೇಳಲು ನಾನು ಇಂಜಿನಿಯರ್ ಅಲ್ಲ. ತಾಂತ್ರಿಕ ವಿಷಯದಲ್ಲಿ ಪರಿಣತರ ಅಭಿಪ್ರಾಯ ಪಡೆಯದೇ ಆ ರೀತಿ ಹೇಳಲು ಆಗುವುದಿಲ್ಲ.

    | ಎ. ಶಿವಪ್ಪ

    ಪುರಸಭೆ ಮುಖ್ಯಾಧಿಕಾರಿ ಬಂಕಾಪುರ

    ಪಟ್ಟಣದಲ್ಲಿ ಅಳವಡಿಸಿರುವ ಬಲ್ಬ್​ಗಳು ಬೆಳಗುತ್ತಿಲ್ಲ. ಮನೆ ಒಳಗೆ ಅಳವಡಿಸುವ ವಿದ್ಯುತ್ ದೀಪಗಳನ್ನು ಬೀದಿಗಳಲ್ಲಿ ಹಾಕಿದ್ದಾರೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮತ್ತು ಮೇಲಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗಿದೆ. ಯಾರದೋ ಮುಲಾಜಿಗೆ ಒಳಗಾಗಿ ಕಳಪೆ ವಿದ್ಯುತ್ ದೀಪಗಳನ್ನು ಹಾಕಿದ್ದಾರೆ. ಕೂಡಲೇ ದೊಡ್ಡ ಬೆಳಕು ನೀಡುವ ದೀಪಗಳನ್ನು ಅಳವಡಿಸಿ ಆಗಿರುವ ಲೋಪವನ್ನು ಸರಿಪಡಿಸಬೇಕು.

    | ಮಂಜುನಾಥ ಕೂಲಿ

    ಸಾಮಾಜಿಕ ಕಾರ್ಯಕರ್ತ ಬಂಕಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts